ಭಾರತೀಯ ಸೇನೆಯಲ್ಲಿ ಹೊಸ ನೇಮಕಾತಿ ಯೋಜನೆ ಅಂದರೆ ಅಗ್ನಿಪಥ್ ಯೋಜನೆ ವಿರೋಧಿಸಿ ಕಳೆದ ಕೆಲ ದಿನಗಳಿಂದ ಪ್ರತಿಭಟಬೆಗಳು ನಡೆಯುತ್ತಿರುವ ಬೆನ್ನಲ್ಲೇ “ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಹೇಳಿದ್ದಾರೆ.
ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಯುವಕರ ಆಕ್ರೋಶವನ್ನು ತಣಿಸುವ ಪ್ರಯತ್ನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರದಂದು, ಸಶಸ್ತ್ರ ಪಡೆಗಳ ನೇಮಕಾತಿಗಾಗಿ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿ, ಎರಡು ವರ್ಷಗಳ ಸಡಿಲಿಕೆ ನೀಡುವುದಾಗಿ ಹೇಳಿದ್ದರು. ಇದಾದ ಬೆನ್ನಲ್ಲೇ ಇಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ವಯೋಮಿತಿ ಸಡಿಲಿಕೆಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. 2022 ರ ನೇಮಕಾತಿ ಚಕ್ರಕ್ಕೆ ಪ್ರವೇಶ ವಯಸ್ಸನ್ನು 23 ವರ್ಷಗಳಿಗೆ ಹೆಚ್ಚಿಸಲು ಒಂದು ಬಾರಿ ಸಡಿಲಿಕೆ ನೀಡುವ ಸರ್ಕಾರದ ನಿರ್ಧಾರವನ್ನು ಸ್ವೀಕರಿಸಲಾಗಿದೆ ಎಂದು ಹೇಳಿದರು.

ಈ ಸಡಿಲಿಕೆಯು ಕಳೆದ ಎರಡು ವರ್ಷಗಳಿಂದ ತಯಾರಿ ನಡೆಸಿದ್ದ ಅನೇಕ ಆಕಾಂಕ್ಷಿಗಳನ್ನು ಪರಿಗಣಿಸಲು ಅವಕಾಶ ನೀಡುತ್ತದೆ. ಶೀಘ್ರದಲ್ಲೇ ನೇಮಕಾತಿ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಪಾಂಡೆ ಶುಕ್ರವಾರ ಬೆಳಿಗ್ಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.





