ಭಾರತೀಯ ಸೇನಾ ನೇಮಕಾತಿಗೆ ಸಂಬಂಧಿಸಿ ನರೇಂದ್ರ ಮೋದಿ ಸರ್ಕಾರ ಹೊಸ ಯೋಜನೆ ಘೋಷಿಸಿದ್ದು, ಈ ಯೋಜನೆಯಡಿಯಲ್ಲಿ ನಾಲ್ಕು ವರ್ಷಗಳ ತಾತ್ಕಾಲಿಕ ಕಾಲ ಸೇನೆಯ ಎಲ್ಲಾ ಮೂರು ವಿಭಾಗಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ.
ನಾಲ್ಕು ವರ್ಷಗಳ ಬಳಿಕ ಬ್ಯಾಚಿನ 75% ಅಭ್ಯರ್ಥಿಗಳನ್ನು ಕೆಲಸದಿಂದ ತೆಗೆದು ಹಾಕಲಾಗುತ್ತದೆ. ಯುವ ಜನಾಂಗಕ್ಕೆ ದೇಶ ಸೇವೆ ಮಾಡಲು ಅವಕಾಶ ನೀಡುವುದು ಯೋಜನೆಯ ಉದ್ದೇಶ ಎಂದು ಬಿಜೆಪಿ ಹಾಗೂ ಸರ್ಕಾರ ಭರದ ಪ್ರಚಾರ ಮಾಡುತ್ತಿದೆ. ಈ ನಡುವೆ, ಕೆಲವು ಮಾಜಿ ಸೇನಾಧಿಕಾರಿಗಳು, ವಿಪಕ್ಷಗಳು ಸೇರಿದಂತೆ ಹಲವರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ.
ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಈ ಯೋಜನೆ ಪ್ರಾರಂಭಿಸುವುದಿದ್ದರೂ, 18 ರಿಂದ 22 ವರ್ಷ ವಯಸ್ಸಿನ 75% ಜನರು 22-26 ವರ್ಷ ವಯಸ್ಸಿನೊಳಗೆ ನಿರುದ್ಯೋಗಿಗಳಾಗುವ ಈ ಯೋಜನೆಗಳು ನಿರುದ್ಯೋಗವನ್ನು ಇನ್ನಷ್ಟು ಉಲ್ಬಣಿಸಲು ಕಾರಣವಾಗುತ್ತದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.
ಈ ಕುರಿತು ಟ್ವೀಟ್ ಮಾಡಿರುವ ಚಲನಚಿತ್ರ ನಿರ್ದೇಶಕ ವಿನೋದ್ ಕಪ್ರಿ, ‘ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಪ್ರಮುಖ ವಿಷಯಗಳಲ್ಲಿ ಭಾರತದ ಅಗ್ನಿವೀರ್ ಬಗ್ಗೆ ಇಡೀ ವಿರೋಧ ಪಕ್ಷ ಏಕೆ ಮೌನವಾಗಿದೆ ಎಂದು ನನಗೆ ಆಶ್ಚರ್ಯವಾಗಿದೆ? 18 ರಿಂದ 22 ವರ್ಷ ವಯಸ್ಸಿನ 75% ಜನರು 22-26 ವರ್ಷ ವಯಸ್ಸಿನೊಳಗೆ ನಿರುದ್ಯೋಗಿಗಳಾಗಿರುತ್ತಾರೆ” ಎಂದು ಬರೆದಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ , “ಸರ್ಕಾರದ ಈ ನಿರ್ಧಾರದಿಂದ ನೂರಾರು ಮಾಜಿ ಸೇನಾ ಅಧಿಕಾರಿಗಳು ಆಘಾತಕ್ಕೊಳಗಾಗಿದ್ದಾರೆ ಮತ್ತು ಅಸಮಾಧಾನಗೊಂಡಿದ್ದಾರೆ. ವರ್ಷಗಳ ತಪಸ್ಸಿನ ನಂತರ ಸೈನಿಕನು ಸಿದ್ಧನಾಗುತ್ತಾನೆ ಎಂದು ಅವರು ನಂಬುತ್ತಾರೆ. ಈ ಹೊಸ ನಿರ್ಧಾರ ದೇಶದ ಭದ್ರತೆಯೊಂದಿಗೆ ಆಟವಾಡುತ್ತಿದೆ.” ಎಂದು ಅವರು ಬರೆದಿದ್ದಾರೆ.
ಬಿಜೆಪಿ ಹಾಗೂ ಸಂಘಪರಿವಾರದ ಕಟ್ಟಾ ಬೆಂಬಲಿಗರಂತೆ ಗುರುತಿಸಿಕೊಂಡಿರುವ ನಿವೃತ್ತ ಮೇಜರ್ ಜನರಲ್ ಜಿ.ಡಿ.ಬಕ್ಷಿ ಅವರು ಕೂಡಾ ಈ ಯೋಜನೆಯನ್ನು ವಿರೋಧಿಸಿದ್ದು, ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ.
https://twitter.com/ChAtulTomar1/status/1536971450761945088
“ನಾನು ಅಗ್ನಿವೀರ್ ಯೋಜನೆಯಿಂದ ದಿಗ್ಭ್ರಮೆಗೊಂಡಿದ್ದೇನೆ. ಇದನ್ನು ಆರಂಭದಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಪರೀಕ್ಷಿಸಲಾಗುತ್ತಿದೆ ಎಂದು ನಾನು ಭಾವಿಸಿದೆ. ಭಾರತೀಯ ಸಶಸ್ತ್ರ ಪಡೆಗಳನ್ನು ಚೀನಿಯರಂತೆ ಅಲ್ಪಾವಧಿಯ ಅರೆ-ಪ್ರತಿನಿಧಿ ಪಡೆಯಾಗಿ ಪರಿವರ್ತಿಸಲು ಇದು ಒಂದು ದೊಡ್ಡ ಹೆಜ್ಜೆಯಾಗಿದೆ. ದೇವರ ಸಲುವಾಗಿ ಇದನ್ನು ಮಾಡಬೇಡಿ. ” ಎಂದು ಜನರಲ್ ಜಿ.ಡಿ.ಬಕ್ಷಿ ಬರೆದಿದ್ದಾರೆ.
“ಚೀನಾ ಮತ್ತು ಪಾಕ್ನಿಂದ ದೊಡ್ಡ ಬೆದರಿಕೆ ಇರುವ ಸಮಯದಲ್ಲಿ ನಮ್ಮ ಸಂಸ್ಥೆಗಳನ್ನು ನಾಶ ಮಾಡಬಾರದು. ಸಶಸ್ತ್ರ ಪಡೆಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆ. ಕೇವಲ ಹಣ ಉಳಿತಾಯಕ್ಕಾಗಿ ನಮ್ಮಲ್ಲಿರುವ ಸಂಸ್ಥೆಗಳನ್ನು ನಾಶ ಮಾಡಬಾರದು. ಸಶಸ್ತ್ರ ಪಡೆಗಳಿಗೆ ಯುವ ಮತ್ತು ಅನುಭವದ ಮಿಶ್ರಣದ ಅಗತ್ಯವಿದೆ. 4 ವರ್ಷಗಳ ಅಧಿಕಾರಾವಧಿಯ ಪಡೆಗಳು ಅಪಾಯಕ್ಕೆ ಒಡ್ಡಿಕೊಳ್ಳಲು ಹಿಂಜರಿಯಬಹುದು. ತರಬೇತಿ ಪಡೆದ ಮತ್ತು ಯುವ ಮಿಲಿಟರಿ ಮಾನವಶಕ್ತಿಯನ್ನು ನಾಲ್ಕು ವರ್ಷಗಳಲ್ಲೇ ಬಿಟ್ಟು ಬಿಟ್ಟರೆ ಅದು ಅವರು ಭಯೋತ್ಪಾದಕರು ಅಥವಾ ಬಂಡುಕೋರರನ್ನು ಸೇರಲು ಕಾರಣವಾಗಬಹುದು. ಆದಾಯ ಬಜೆಟ್ನಲ್ಲಿ ಹಣವನ್ನು ಉಳಿಸಲು ಇದನ್ನು ಮಾಡಲಾಗುತ್ತಿದೆ. ದಯವಿಟ್ಟು ಹಣವನ್ನು ಉಳಿಸಲು ಪರಿಣಾಮಕಾರಿ ಸಂಸ್ಥೆಗಳನ್ನು ನಾಶ ಮಾಡಬೇಡಿ. ಬದಲಾಗಿ ರಕ್ಷಣಾ ಬಜೆಟ್ ಅನ್ನು GDP ಯ 3% ಗೆ ಹೆಚ್ಚಿಸಿ. ಚೀನಾ ಮತ್ತು ಪಾಕ್ನಿಂದ ಹೆಚ್ಚಿನ ಬೆದರಿಕೆಗಳಿರುವಾಗ, ದೊಡ್ಡ ಸಾಂಸ್ಥಿಕ ಪ್ರಕ್ಷುಬ್ಧತೆಯನ್ನು ಸೃಷ್ಟಿಸಲು ಇದು ಸೂಕ್ತ ಸಮಯವಲ್ಲ. ಈ ಹೊಸ ಮಾದರಿಯು ಸಶಸ್ತ್ರ ಪಡೆಗಳ ವೃತ್ತಿಜೀವನದ ಜನಪ್ರಿಯತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಬಕ್ಷಿ ಬರೆದಿದ್ದಾರೆ.
“ಸರ್ಕಾರಿ ಕೆಲಸಕ್ಕಾಗಿ ವರ್ಷಗಳ ಕಾಲ ಶ್ರಮಿಸುವ ಬಡ ಯುವ ಒಡನಾಡಿಗಳ ಬಗ್ಗೆ ಯೋಚಿಸಿ. 4 ವರ್ಷಗಳ ಒಪ್ಪಂದಕ್ಕೆ ಹೋಗಬೇಕೆ?” ನೀಲೇಶ್ ಪಾಂಡೆ ಬರೆದಿದ್ದಾರೆ.
ಏನಿದು ಅಗ್ನಿಪಥ್ ಯೋಜನೆ?
ಜೂನ್ 14 ರಂದು, ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಸೈನಿಕರ ನೇಮಕಾತಿಗಾಗಿ ‘ಅಗ್ನಿಪಥ್’ ಯೋಜನೆಯನ್ನು ಪ್ರಾರಂಭಿಸುವುದಾಗಿ ಸರ್ಕಾರ ಘೋಷಿಸಿದೆ. ಈ ಯೋಜನೆಯಡಿ ಈ ವರ್ಷ ಮೂರು ಸೇವೆಗಳಲ್ಲಿ 46,000 ಸೈನಿಕರನ್ನು ನೇಮಿಸಿಕೊಳ್ಳಲಾಗುವುದು. ಸೇನಾ ನೇಮಕಾತಿಗೆ ವಯಸ್ಸು 17.5 ರಿಂದ 21 ವರ್ಷಗಳ ನಡುವೆ ಇರಬೇಕು. ಸೇನೆಯಲ್ಲಿ ನೇಮಕಾತಿಗೆ ಆಯ್ಕೆಯಾಗುವವರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ.
ಪ್ರತಿ ಅಗ್ನಿವೀರನಿಗೆ ಮೊದಲ ವರ್ಷ ಮಾಸಿಕ 30 ಸಾವಿರ ರೂ., ಅದರಲ್ಲಿ 9 ಸಾವಿರ ರೂ. ಸರಕಾರಕ್ಕೆ ಸಮನಾದ ಕೊಡುಗೆಯ ನಿಧಿಗೆ ಹೋಗುತ್ತದೆ. ಎರಡು, ಮೂರು ಮತ್ತು ನಾಲ್ಕನೇ ವರ್ಷಗಳಲ್ಲಿ ಅಗ್ನಿವೀರ್ ಅವರ ಮಾಸಿಕ ವೇತನ 33,000, 36,500 ಮತ್ತು 40,000 ರೂ. ಆಗುತ್ತದೆ. ಇದಲ್ಲದೇ ಅಗ್ನಿವೀರ್ ಗೆ ಸೇವಾ ನಿಧಿ ಪ್ಯಾಕೇಜ್ ಆಗಿ 11.71 ಲಕ್ಷ ರೂ. ಲಭಿಸುತ್ತದೆ. ಪ್ರತಿ ವರ್ಷದ ಬ್ಯಾಚ್ ನಿಂದ ನಾಲಕ್ಕನೇ ವರ್ಷದಲ್ಲಿ 75% ಅಭ್ಯರ್ಥಿಗಳು ಕೆಲಸ ಕಳೆದುಕೊಳ್ಳುತ್ತಾರೆ. ಕೇವಲ 25% ಜನರಿಗೆ ಮಾತ್ರ ಸೇನೆಯಲ್ಲಿ ಮುಂದುವರಿಯಲು ಅವಕಾಶವಿರುತ್ತದೆ.