ಶಾಲೆ ಶುರುವಾಗಿ ವಾರಗಳು ಉರುಳಿವೆ. ಇಷ್ಟಾದರೂ ಮಕ್ಕಳ ಕೈಗೆ ಪಠ್ಯ ಪುಸ್ತಕ ಮಾತ್ರ ಸೇರಿಲ್ಲ. ಪಠ್ಯ ಪುಸ್ತಕದ ಪರಿಷ್ಕರಣೆ ಫೈಟ್ ನೇರಾ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರಿದೆ. ಪಠ್ಯವೇ ಇಲ್ಲದೇ ಏನು ಹೇಳಿಕೊಡುವುದು ಅನ್ನೊ ಗೊಂದಲಕ್ಕೆ ಶಿಕ್ಷಕರು ಈಡಾದ್ರೆ, ಅತ್ತ ಇನ್ನೂ ಎರಡು ತಿಂಗಳ ಕಾಲ ಕಲಿಕಾ ಚೇತರಿಕೆ ಕಾರ್ಯಕ್ರಮ ಮುಂದುವರೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಶಾಲಾ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ ಪಠ್ಯ ಪರಿಷ್ಕರಣೆ.!!
ಶೈಕ್ಷಣಿಕ ಕ್ಷೇತ್ರದ ಮೇಲೆ ಕೋವಿಡ್ ದೊಡ್ಡ ಹೊಡೆತ ನೀಡಿದೆ. ಎರಡು ವರ್ಷಗಳ ಕಾಲ ಕಲಿಕೆಯಿಂದ ಮಕ್ಕಳು ವಂಚಿತರಾಗಿದ್ದಾರೆ. ಕೋವಿಡ್ ಕೇಸ್ ಕಮ್ಮಿ ಆಯ್ತು, ಇನ್ನೂ ಪೂರ್ಣ ಪ್ರಮಾಣದ ಶಾಲೆ ಕಾಲೇಜು ಆರಂಭವಾಯ್ತು ಎಂದು ನಿಟ್ಟಿಸಿರುವ ಬಿಡುವ ಹೊತ್ತಿಗೆ ಪಠ್ಯ ಪುಸ್ತಕದ ವಿವಾದ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯ ಸಾಲು ಸಾಲು ಎಡವಟ್ಟಿನಿಂದ ಮುಜುಗರಕ್ಕೆ ಈಡಾಗಿರುವ ಶಿಕ್ಷಣ ಇಲಾಖೆ, ಸಮಿತಿಯನ್ನು ನಾಮ್ಕಾವಾಸ್ತೆ ವಿಸರ್ಜಿಸಿದೆ. ಆದರೆ ಸಮಿತಿಯ ಪರಿಷ್ಕೃತ ಪಠ್ಯವನ್ನೇ ಹಂಚಲು ನಿರ್ಧಾರ ಮಾಡಿದೆ. ಶಿಕ್ಷಣ ಇಲಾಖೆಯ ಈ ಧೋರಣೆ ವಿರುದ್ಧ ಸಾಹಿತಿಗಳು, ಚಿಂತಕರು ತಿರುಗಿ ಬಿದ್ದಿದ್ದು ಇಲಾಖೆಗೆ ತಲೆನೋವು ಉಂಟು ಮಾಡಿದೆ. ಈಗಾಗಲೇ ಶೇಕಾಡ 68ರಷ್ಟು ಪಠ್ಯಗಳು ಪ್ರಿಂಟ್ ಆಗಿದ್ದು, ಅವುಗಳನ್ನು ಹಂಚಲು ಹಿಂಜರಿದಿರುವ ಶಿಕ್ಷಣ ಇಲಾಖೆ, ಮತ್ತೆರೆಡು ತಿಂಗಳ ಕಾಲ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನೇ ಮುಂದುವರೆಸಲು ನಿರ್ಧಾರ ಮಾಡಿದೆ.

ಇನ್ನೂ 2 ತಿಂಗಳು ಮಕ್ಕಳ ಕೈ ಸೇರಲ್ಲ ಪೂರ್ಣಪ್ರಮಾಣದ ಪಠ್ಯ ಕ್ರಮ.!!
ಶಾಲೆ ಆರಂಭದಲ್ಲಿ ಕೇವಲ 15 ದಿನಗಳ ಕಾಲ ಕಲಿಕಾ ಚೇತರಿಕೆ ಕಾರ್ಯಕ್ರಮ ಮುಂದುವರೆಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿತ್ತು. ಆನ್ಲೈನ್ನಲ್ಲಿ ಮಕ್ಕಳು ಸರಿಯಾದ ಪಾಠ ಕಲಿಯದ ಕಾರಣ, 15 ದಿನಗಳ ಕಾಲ ರಿವಿಷನ್ ರೀತಿಯ ಕಲಿಕೆಗೆ ಇಲಾಖೆ ಮುಂದಾಗಿತ್ತು. ಆದರೆ ಇನ್ನೂ ಎರಡು ತಿಂಗಳುಗಳ ಕಾಲ ಪಠ್ಯಪುಸ್ತಕವೇ ಕೈ ಸೇರೋದು ಅನುಮಾನವಾಗಿರುವ ಕಾರಣ ಎರಡು ತಿಂಗಳ ಕಾಲ ಕಲಿಕಾ ಚೇತರಿಕೆ ಮುಂದುವರೆಸಲು ಶಿಕ್ಷಕರಿಗೆ ಸೂಚಿಸಲಾಗಿದೆ. ಕಲಿಕಾ ಚೇತರಿಕೆಗೆ ಬೇಕಿರುವ ಪೂರಕ ಸಾಮಗ್ರಿಗಳು ಸರ್ಕಾರಿ ಶಾಲೆಯ ಕೈ ಸೇರಿದ್ದರೂ, ಖಾಸಗಿ ಶಾಲೆಗಳಿಗೆ ಯಾವುದೇ ಪಠ್ಯ ಸಾಮಾಗ್ರಿಗಳು ಕೈ ಸೇರಿಲ್ಲ.
ಬಿಜೆಪಿ ಸರ್ಕಾರ ಪಠ್ಯದಲ್ಲಿ ಮಾಡಲು ಹೊರಟ ಕೇಸರೀಕರಣ ಇದೀಗ ಮಕ್ಕಳ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತಿದೆ. ಪಠ್ಯಪುಸ್ತಕ ಪರಿಷ್ಕರಣೆಯಿಂದಾಗಿ ಮಕ್ಕಳ ಓದಿನ ಮೇಲೆ ಪರಿಣಾಮ ಬೀರ್ತಿದ್ದು, ಇದು ಮುಂದಿನ ಪರೀಕ್ಷೆಯ ಕಲಿಕೆ ಮೇಲೂ ಕರಿನೆರಳು ಬೀರಲಿದೆ.






