ದುಡ್ಡಿಲ್ಲ ಅಂತಾ ಬಿಡಿಎ ಬಾಯಿ ಬಡಿದುಕೊಳ್ತಿದೆ. ಇದರಿಂದ ನಗರದ ವಿವಿಧ ಭಾಗಗಳಲ್ಲಿ ನಡೆಯುತ್ತಿರೋ ಕಾಮಗಾರಿಗಳು ನಿಂತು ಹೋಗ್ಬಿಟ್ಟಿವೆ. ದಮ್ಮಯ್ಯಾ ದುಡ್ಡು ಕೊಡಿ ಅಂದರು ಸರ್ಕಾರ ನೀಡ್ತಿಲ್ಲ. ಹೀಗಾಗಿ ನಗರದ ಬಡ ಹಾಗೂ ಮಧ್ಯಮ ವರ್ಗದ ಮಂದಿಗೆ ಸೂರು ಕಲ್ಪಿಸೋ ಪ್ರಾಧಿಕಾರ ಸ್ಥಿತಿ ಡೋಲಾಯಮಾನವಾಗಿದೆ.
ಬೆಂಗಳೂರು ಅಭಿವೃದ್ಧಿ ಬಿಡಿಎ ಅಧಿಕಾರಿಗಳ ಕೈಲಾಗಲ್ವಾ ?
ಬೆಂಗಳೂರು ಅಭಿವೃದ್ದಿ ಜವಾಬ್ದಾರಿ ಹೊಣೆ ಹೊತ್ತಿರುವ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಆರ್ಥಿಕ ಗಂಡಾಂತರಕ್ಕೆ ಸಿಲುಕಿದೆ. ಬಿಡಿಎ ಈಗಾಗಲೇ ನಗರದ ಹಲವೆಡೆ ಹಲವು ಲೇಔಟ್ ಹಾಗೂ ಫ್ಲ್ಯಾಟ್ ಗಳನ್ನ ನಿರ್ಮಾಣ ಮಾಡಿದೆ. ಆದರ ಜತೆಗೆ ಹಲವೆಡೆ ಪ್ಲೈಓವರ್ ಕೂಡ ನಿರ್ಮಾಣ ಮಾಡುತ್ತೆ. ಆದರೆ ಇತ್ತೀಚಿಗೆ ಬಿಡಿಎ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಯಾವುದೇ ಕಾಮಗಾರಿ ಕೈಗೆತ್ತಿಗೊಳ್ಳಲು ಸಾಧ್ಯವಾಗ್ತಿಲ್ಲ. ಈ ಸಂಬಂಧ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದು ಅನುದಾನ ನೀಡಿ ಅಂತ ಕೇಳಿದ್ರೂ ಸರ್ಕಾರ ನಯಾಪೈಸೆ ನೀಡಿಲ್ಲ. ಹೀಗಾಗಿ ಕಾಮಗಾರಿಗಳೆಲ್ಲಾ ಅರ್ಧಂಬರ್ಧಕ್ಕೆ ನಿಂತು ಬೆಂಗಳೂರು ಅಭಿವೃದ್ಧಿ ಕುಂಠಿತಗೊಂಡಿದೆ.
ಆರ್ಥಿಕ ಸಂಕಷ್ಟದಿಂದ ಕಾಮಗಾರಿಗಳನ್ನ ಅರ್ಧಕ್ಕೆ ನಿಲ್ಲಿಸಿದ ಪ್ರಾಧಿಕಾರ !
ಪ್ರಸ್ತುತ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಬಿಡಿಎಗೆ ಬರೋಬ್ಬರಿ 30 ಸಾವಿರ ಕೋಟಿಗಿಂತ ಹೆಚ್ಚು ಹಣ ಬೇಕು. ಆದರೆ ಸಮರ್ಪಕವಾಗಿ ಹಣ ಹೊಂದಿಸಲು ಬಿಡಿಎಗೆ ಸಾಧ್ಯವಾಗದೆ ಪರದಾಡುತ್ತಿದೆ. 2016-17ರಲ್ಲಿ ಬಿಡಿಎ ಕೈಗೆತ್ತಿಕೊಂಡಿರುವ ಹೊಸ ಮತ್ತು ಬಾಕಿ ಉಳಿದಿರುವ ಕಾಮಗಾರಿಗಳಿಗೆ ಸಾವಿರಾರು ಕೋಟಿ ರೂ. ಅವಶ್ಯಕತೆಯಿದೆ. ಔಟರ್ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣ ಯೋಜನೆಗೆ 21 ಸಾವಿರ ಕೋಟಿ ರೂ.ಹೊರವರ್ತಲ ರಸ್ತೆ ಅಲೈನ್ಮೆಂಟ್ ಯೋಜನೆಗೆ 700 ಕೋಟಿ ರೂ ಸೇರಿಂದತೆ ಸಾಲು ಸಾಲು ಯೋಜನೆ ಪೂರ್ಣಗೊಳಿಸಲು ಸಾವಿರಾರು ಕೋಟಿ ರೂಪಾಯಿ ಅಗತ್ಯತೆ ಇದೆ.

– ಕೆಂಪೇಗೌಡ ಅರ್ಕಾವತಿ ಲೇಔಟ್ ಮೂಲಭೂತ ಸೌಕರ್ಯಕ್ಕೆ 1,000 ಕೋಟಿ
– ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ 4,500 ಕೋಟಿ
– ಮಲ್ಲೇಶ್ವರಂ ವಾಣಿಜ್ಯ ಸಂಕೀರ್ಣಕ್ಕೆ 200 ಕೋಟಿ ಹಾಗೂ ಹೆಬ್ಬಾಳ ಫ್ಲೈಓವರ್ ಗೆ 200 ಕೋಟಿ
– ಕಂಠೀರವ ಸ್ಟುಡಿಯೋ ಅಂಡರ್ ಪಾಸ್ ಕಾಮಗಾರಿಗೆ 100 ಕೋಟಿ
– ಔಟರ್ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣ ಯೋಜನೆಗೆ 21 ಸಾವಿರ ಕೋಟಿ
– ಹೊರವರ್ತಲ ರಸ್ತೆ ಅಲೈನ್ಮೆಂಟ್ ಯೋಜನೆಗೆ 700 ಕೋಟಿ

ಹೀಗೆ ಹಲವು ಯೋಜನೆಗಳು ದುಡ್ಡಿಲ್ಲದೆ ನೆನೆಗೆದುಗಿಗೆ ಬಿದ್ದಿದೆ. ಕಾರ್ನರ್ ಸೈಟ್ ಹರಾಜು ಹಾಕಿ ಹಣಕಾಸು ಕ್ರೋಡೀಕರಣಕ್ಕೆ ಮುಂದಾದ್ರೂ ನಿರೀಕ್ಷೆಯಷ್ಟು ಹಣ ಬಾರದೆ ಬಿಡಿಎ ತಲೆಕೆಡಿಸಿಕೊಂಡಿದೆ. ಈಗಾಗಲೇ ಆರು ವಸತಿ ಯೋಜನೆಗಳಿಗೆ ಬಿಡಿಎ ಎಸ್ ಬಿಎಂ ಬ್ಯಾಂಕ್ ನಿಂದ 73 ಕೋಟಿ, ಕಾಪೋರೇಷನ್ ಬ್ಯಾಂಕ್ ನಿಂದ 46 ಕೋಟಿ, ಕೆನರಾ ಬ್ಯಾಂಕ್ ನಿಂದ 250 ಕೋಟಿ ಸಾಲ ಪಡೆದಿದೆ. ಇವೆಲ್ಲಾಕ್ಕೂ ಬಡ್ಡಿ ಕಟ್ಟೋದಕ್ಕೆ ಪರದಾಡ್ತಿದೆ. ಬಿಡಿಎ ವಸತಿ ಯೋಜನೆ, ಲೇಔಟ್ ಗಳಿಂದ ನಿರೀಕ್ಷೆ ಮಾಡಿದಷ್ಟು ಹಣ ಬರುತ್ತಿಲ್ಲ. ಹೀಗಾಗಿ ಬಿಡಿಎ ಹಣಕಾಸು ಪರಿಸ್ಥಿತಿ ಹದಕೆಟ್ಟಿದೆ. ಇನ್ನೊಂದೆಡೆ ಬೆಂಗಳೂರು ಅಭಿವೃದ್ಧಿ ಮಾಡೋಕೆ ಆಗದೆ ಕಾಮಗಾರಿಗಳನ್ನ ಅರ್ಧಕ್ಕೆ ನಿಲ್ಲಿಸಿರೋದು ಜನರ ಕೆಂಗಣ್ಣಿಗೆ ಕಾರಣವಾಗಿದೆ.
ಒಟ್ಟಿನಲ್ಲಿ ದಿವಾಳಿ ಅಂತ ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಮಾಡುತ್ತಲ್ಲೇ ಬಂದಿರುವ ಪ್ರಾಧಿಕಾರ ಬಡ್ಡಿ ಕಟ್ಟುವುದಕ್ಕೆ ಹೆಣಗಾಡುತ್ತಿದೆ. ಇಷ್ಟಾದರೂ ಸರ್ಕಾರ ಬಿಡಿಎಗೆ ಅನುದಾನ ನೀಡುತ್ತಿಲ್ಲ ಅನ್ನೋ ಆರೋಪ ಇದೆ. ಹೀಗಾಗಿ ಇರೋ ಬರೋ ಆಸ್ತಿಗಳನ್ನ ಹರಾಜು ಹಾಕೋದಕ್ಕೆ ಬಿಡಿಎ ಮುಂದಾಗಿದೆ. ಇದೇ ರೀತಿ ಮುಂದುವರೆದರೆ ಇನ್ನಷ್ಟು ಬಾರ್ಬದ್ ಆಗಿ ಒಂದಲ್ಲ ಒಂದು ದಿನ ಬಿಡಿಎ ಕಚೇರಿಗೆ ಬೀಗ ಜಡಿಯುವ ದಿನಗಳು ದೂರವಿಲ್ಲ ಎಂಬುವುದು ಸಾರ್ವಜನಿಕರ ಮಾತು.