ಶುಕ್ರವಾರ ಕಾನ್ಪುರ ನಗರದ ಪರೇಡ್ ಚೌಕ್ ಪ್ರದೇಶದಲ್ಲಿ ಭುಗಿಲೆದ್ದ ಹಿಂಸಾಚಾರದ ಹಿಂದೆ ಸ್ಥಳೀಯ ಮುಸ್ಲಿಂ ಮುಖಂಡ ಹಯಾತ್ ಜಾಫರ್ ಹಶ್ಮಿ ಪ್ರಮುಖ ಸಂಚುಕೋರ ಎಂದು ಕಾನ್ಪುರ ಪೊಲೀಸರು ಗುರುತಿಸಿದ್ದಾರೆ. ಪ್ರಕರಣದಲ್ಲಿ ಎಫ್ಐಆರ್ನಲ್ಲಿ ಹೆಸರಿಸಲಾದ 40 ಆರೋಪಿಗಳಲ್ಲಿ ಈತನೂ ಸೇರಿದ್ದಾನೆ.
ಮೌಲಾನಾ ಮುಹಮ್ಮದ್ ಜೌಹರ್ ಅಲಿ ಅಭಿಮಾನಿಗಳ ಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಹಯಾತ್ ಜಾಫರ್ ಹಶ್ಮಿ ಅವರು ಟಿವಿ ಸುದ್ದಿ ಚರ್ಚೆಯ ವೇಳೆ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಅವರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮಾರುಕಟ್ಟೆ ಬಂದ್ಗೆ ಕರೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಶ್ಮಿ ಜನರನ್ನು ಪ್ರಚೋದಿಸಿದ್ದಾರೆ ಡಎಂದು ಆರೋಪಿಸಿದ್ದು, ಇದು ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ಮತ್ತು ಘರ್ಷಣೆಗೆ ಕಾರಣವಾಯಿತು, ಇದರಿಂದಾಗಿ ಹಲವಾರು ಪೊಲೀಸ್ ಸಿಬ್ಬಂದಿ ಸೇರಿದಂತೆ 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
ಈ ಹಿಂದೆ, ಕಾನ್ಪುರದಲ್ಲಿ ಉದ್ದೇಶಿತ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಹಶ್ಮಿ ಭಾಗಿಯಾಗಿದ್ದರು.
ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು ಕಟ್ಟುನಿಟ್ಟಿನ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಮತ್ತು ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗುವುದು ಅಥವಾ ನೆಲಸಮಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಎಹಿತ್ಶಾಮ್ ಕಬಾಡಿ, ಜೀಶನ್, ಆಕಿಬ್, ನಿಜಾಮ್, ಅಜೀಜುರ್, ಅಮೀರ್ ಜಾವೇದ್, ಇಮ್ರಾನ್ ಕಾಳೆ, ಯೂಸುಫ್ ಮನ್ಸೂರಿ ವಿರುದ್ದ ಎಫ್ಐಆರ್ ದಾಖಲಾಗಿದೆ. ಗಲಭೆ ಮತ್ತು ಹಿಂಸಾಚಾರದ ಕುರಿತು ಮೂರು ಎಫ್ಐಆರ್ಗಳಾಗಿದ್ದು, 1,000 ಕ್ಕೂ ಹೆಚ್ಚು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ರಾತ್ರಿಯ ದಾಳಿಯ ನಂತರ ಇದುವರೆಗೆ 35 ಮಂದಿಯನ್ನು ಬಂಧಿಸಲಾಗಿದೆ ಮತ್ತು ವೀಡಿಯೊಗಳು ಮತ್ತು ಸಿಸಿಟಿವಿ ದೃಶ್ಯಗಳ ಮೂಲಕ ಹಿಂಸಾಚಾರದಲ್ಲಿ ಭಾಗಿಯಾಗಿರುವ ಇತರರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಲಿಂಕ್ಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಉತ್ತರ ಪ್ರದೇಶದ ಎಂಎಲ್ಸಿ ಮತ್ತು ಬಿಜೆಪಿ ನಾಯಕ ಮೊಹ್ಸಿನ್ ರಜಾ ಅವರು ಕಾನ್ಪುರದಲ್ಲಿ ನಡೆದ ಹಿಂಸಾಚಾರವು ಪೂರ್ವ ಯೋಜಿತ ಪಿತೂರಿಯಾಗಿದೆ.ಇದರಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರು ಕೂಡಾ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.