ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ 1ರಿಂದ 10ನೇ ತರಗತಿಯ ಪಠ್ಯಗಳಲ್ಲಿ ಪಠ್ಯ ಪರಿಷ್ಕರಣೆ ನೆಪದಲ್ಲಿ 28 ಸಾಹಿತಿಗಳ ಸಾಹಿತ್ಯಕ್ಕೆ ಕತ್ತರಿ ಹಾಕಲಾಗಿದೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದ ಮಾಜಿ ಪಠ್ಯ ಪರಿಷ್ಕರಣೆ ಸಮಿತಿ ಸದಸ್ಯರು ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಪಠ್ಯ ಪರಿಷ್ಕರಣೆ ಮಾಡುವಾಗ ಪಠ್ಯ ವಸ್ತುಗಳ ನೀತಿ ನಿಯಮಗಳು, ಸಾಮಾಜಿಕ ನ್ಯಾಯ, ಲಿಂಗ ಸಮಾನತೆ, ಪ್ರಾದೇಶಿಕ ಪ್ರಾತಿನಿಧ್ಯಗಳಿಗೆ ಅನುಗುಣವಾಗಿ ಕವಿಗಳು ಮತ್ತು ಲೇಖಕರಿಗೆ ಕನಿಷ್ಠ ಒಂದು ವಿಷಯ ಪಠ್ಯದಲ್ಲಿ ಅವಕಾಶ ನೀಡಬೇಕಾಗಿದೆ. ಆದರೆ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಈ ಯಾವ ಅಂಶಗಳನ್ನು ಪಾಲಿಸದೇ ನಿಯಮಗಳನ್ನು ಗಾಳಿಗೆ ತೂರಿ ತಮಗೆ ಇಷ್ಟ ಬಂದಂತೆ ಪಠ್ಯ ಪರಿಷ್ಕರಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯಲ್ಲಿ ಸದಸ್ಯರಾಗಿದ್ದ ರವೀಶ್ ಕುಮಾರ್ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರಿಗೆ ಬರೆದ ಪತ್ರದಲ್ಲಿ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ ಪಠ್ಯದಿಂದ 28 ಸಾಹಿತಿಗಳ ಪಾಠಕ್ಕೆ ಕತ್ತರಿ ಹಾಕಿರುವ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಪ್ರತಿಭಟನೆ ಹಾಗೂ ಚಳುವಳಿಗೆ ಹೆದರಿ ಒಬ್ಬ ಸಾಹಿತಿಯ ಅತೀ ಹೆಚ್ಚು ವಿಷಯಗಳನ್ನು ಸೇರಿಸಲಾಗಿದೆ. ಆದರೆ ಯಾವುದೇ ಸಮುದಾಯದ ಬೆಂಬಲ ಇಲ್ಲದ ಚಳುವಳಿ ಮಾಡುವುದಿಲ್ಲ ಅಥವಾ ಧ್ವನಿ ಎತ್ತುವುದಿಲ್ಲ ಎಂಬ ಕಾರಣಕ್ಕೆ 28 ಸಾಹಿತಿಗಳ ಕನಿಷ್ಠ ಒಂದು ಪಠ್ಯವೂ ಇಲ್ಲದಂತೆ ತೆಗೆದು ಹಾಕಲಾಗಿದೆ.
10ನೇ ಪಠ್ಯದಲ್ಲಿ ೪ ಬಿಡಿ ಲೇಖನಗಳನ್ನು ಹಾಗೂ 7 ಪೂರಕ ಅಧ್ಯಯನಗಳನ್ನು ಸೇರಿಸುವ ಮೂಲಕ ವಿದ್ಯಾರ್ಥಿಗಳ ಮೇಲೆ ಹೊರೆ ಹಾಕಲಾಗಿದೆ. ವಿದ್ಯಾರ್ಥಿಗಳ ಬ್ಯಾಗಿನ ಭಾರ ಕಡಿಮೆ ಮಾಡಬೇಕು ಎಂಬ ನಿಯಮ ಇದ್ದರೂ ಅದನ್ನು ಗಾಳಿಗೆ ತೂರಿ ಹೆಚ್ಚು ಕಲಿಕಾ ವಿಷಯಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಲಾಗಿದೆ.