ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದಲ್ಲಿ ಜಾತಿ ಆಧಾರಿತ ಜನಗಣತಿಯನ್ನು ಶೀಘ್ರದಲ್ಲೇ ನಡೆಸುವುದಾಗಿ ಘೋಷಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಜಾತಿ ಗಣತಿ ನಡೆಸುವ ವಿಧಾನಗಳ ಬಗ್ಗೆ ಚರ್ಚಿಸಿದ ಸರ್ವಪಕ್ಷ ಸಭೆಯ ನಂತರ ನಿತೀಶ್ ಈ ಘೋಷಣೆ ಮಾಡಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್, ರಾಜ್ಯ ಮಟ್ಟದಲ್ಲಿ (ಜಾತಿ ಗಣತಿ) ತಮ್ಮ ಕಡೆಯಿಂದ ಮಾಡಬೇಕಾಗಿದೆ. ಶೀಘ್ರದಲ್ಲೇ ಕ್ಯಾಬಿನೆಟ್ ಈ ಬಗ್ಗೆ ನಿರ್ಧರಿಸುತ್ತದೆ ಮತ್ತು ಅದರ ಬಗ್ಗೆ ಎಲ್ಲವನ್ನೂ ಬಹಿರಂಗಗೊಳಿಸುತ್ತದೆ. ಈ ಮೂಲಕ ಎಲ್ಲರೂ ಸರಿಯಾಗಿ ಅಭಿವೃದ್ಧಿ ಹೊಂದಬೇಕು ಎಂಬುದು ನಮ್ಮ ಯೋಜನೆ. ಜಾತಿಗಣತಿಯಲ್ಲಿರುವ ಪ್ರತಿಯೊಂದು ವಿಷಯವನ್ನು ಗಮನಿಸಿ ಎಲ್ಲ ಪಕ್ಷಗಳಿಗೂ ತಿಳಿಸುವಂತೆ ಪ್ರಕಟಿಸುತ್ತೇವೆ’ ಎಂದು ನಿತೀಶ್ ಹೇಳಿದರು.
ಮತ್ತೊಂದೆಡೆ, ಮುಖ್ಯಮಂತ್ರಿಯನ್ನು ಭೇಟಿಯಾದ ನಂತರ ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್, ಮುಂದಿನ ಸಂಪುಟ ಸಭೆಯಲ್ಲಿ ಈ ಮಸೂದೆಯನ್ನು ತಂದು ನವೆಂಬರ್ನಲ್ಲಿ ಪ್ರಾರಂಭಿಸುವ ಬಗ್ಗೆ ಮಾತನಾಡಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಅವರು, ‘ನಾವು ಈ (ಜಾತಿ ಗಣತಿ) ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದೇವೆ, ಇದು ಬಿಹಾರದ ಜನರ ಗೆಲುವು. ಬಿಹಾರ ಹಿಂದುಳಿದ ಮತ್ತು ಬಡ ರಾಜ್ಯವಾಗಿರುವುದರಿಂದ ಕೇಂದ್ರ ಸರ್ಕಾರ ಇದಕ್ಕೆ ಸಹಾಯ ಮಾಡಲು ಆರ್ಥಿಕವಾಗಿ ಸಹಕರಿಸಬೇಕು ಎಂದು ಅವರು ಹೇಳಿದ್ದಾರೆ.
ಜಾತಿ ಆಧಾರದಲ್ಲಿ ಜನಗಣತಿ ನಡೆಸುವುದು ಕಷ್ಟದ ಕೆಲಸ, ಇದಕ್ಕೆ ಸಾಕಷ್ಟು ವೆಚ್ಚ ತಗಲುತ್ತದೆ, ಹಾಗಾಗಿ ರಾಜ್ಯ ಸರ್ಕಾರ ಅದಕ್ಕೆ ವ್ಯವಸ್ಥೆ ಮಾಡಲಿದೆ ಎಂದು ನಿತೀಶ್ ತಿಳಿಸಿದ್ದಾರೆ.