ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ವಿಧಾನಪರಿಷತ್ ಸದಸ್ಯ ನವರಸನಾಯಕ ಜಗ್ಗೇಶ್ಗೆ ಅದೃಷ್ಟ ಒಲಿದು ಬಂದಿದೆ.
ಆದರೆ, ಸ್ವತಃ ನಟ ಜಗ್ಗೇಶ್ ಈ ಬಗ್ಗೆ ನಿರೀಕ್ಷಿಸಿರಲಿಲ್ಲ ಎಂದು ತಿಳಿದು ಬಂದಿದೆ. ಎರಡನೇ ಭಾರಿಗೆ ವಿಧಾನಪರಿಷತ್ ಸದಸ್ಯನಾಗುವ ಅವಕಾಶ ಸಿಕ್ಕರೆ ಸಾಕು ಎಂದಿದ್ದ ನಟನಿಗೆ ರಾಜ್ಯಸಭೆಯ ಅವಕಾಶ ಹುಡುಕಿಕೊಂಡು ಬಂದಿದೆ.
ಜಗ್ಗೇಶ್ ಆಯ್ಕೆ ಹಿಂದೆ ಹಲವು ರಾಜಕೀಯ ಉಹಾಪೋಹಗಳು ಎದ್ದಿವೆ ಹಳೇ ಮೈಸೂರು ಭಾಗವನ್ನ ಶತಾಯ ಗತಾಯ ತನ್ನ ತೆಕ್ಕೆಗ ಎಳೆದುಕೊಳ್ಳಬೇಕು ಎಂಬ ಹಠಕ್ಕೆ ಬಿದ್ದಿರುವ ಬಿಜೆಪಿ ನಾಯಕರು ಆ ಭಾಗದಲ್ಲಿ ಹೆಚ್ಚಿರುವ ಒಕ್ಕಲಿಗ ಸಮುದಾಯದ ಗುರಿಯಾಗಿಸಿ ಪಕ್ಷ ಸಂಘಟನೆಗೆ ಹಾಗು ಕಾರ್ಯ ತಂತ್ರದ ಫಲವಾಗಿ ಜಗ್ಗೇಶ್ಗೆ ರಾಜ್ಯಸಭೆಗೆ ಕಳುಹಿಸಲಾಗುತ್ತಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ವ್ಯಾಪಕವಾಗಿ ಚರ್ಚಿಸಲಾಗುತ್ತಿದೆ.
ಉತ್ತಮ ವಾಗ್ಮಿಯಾಗಿರುವ ಜಗ್ಗೇಶ್ ನಟರಾಗಿಯೂ ಕೂಡ ಜನಮನ ಗೆದಿರುವುದರಿಂದ ಹಳೇ ಮೈಸೂರು ಭಾಗದಲ್ಲಿ ಇದು ಬಿಜೆಪಿಗೆ ವರದಾನವಾಗಲಿದೆ ಎಂದು ಉಹಿಸಲಾಗಿದೆ. ಆಯ್ಕೆ ಪ್ರಕ್ರಿಯೆಯನ್ನು ಹೈಕಮಾಂಡ್ ನೇರವಾಗಿ ಕೈಗೊಂಡ ಕಾರಣ ಸಂಘ ಪರಿವಾರದ ಸಲಹೆಗಳನ್ನು ಪಡೆಯಲಾಗಿದೆ ಹೈಕಮಾಂಡ್ ಜಗ್ಗೇಶ್ ಆಯ್ಕೆ ಬಗ್ಗೆ ಪರಾಮಾರ್ಶೆ ನಡೆಸಿದೆ ಎಂದು ವರದಿಯಾಗಿದೆ.

ವಿಧಾನಪರಿಷತ್ ಚುನಾವಣೆಯಲ್ಲಿ ಲಿಂಗಾಯತ, ಒಬಿಸಿ, ಎಸ್ ಸಿ ಹಾಗು ಎಸ್ ಟಿ ಸಮುದಾಯಕ್ಕೆ ಪ್ರಾತಿನಿಧ್ಯವನ್ನ ನೀಡಲಾಗಿತ್ತು. ಇನ್ನು ರಾಜ್ಯಸಭೆಗೆ ಜಗ್ಗೇಶ್ ಹಾಗು ನಿರ್ಮಲಾ ಸೀತಾರಾಮನ್ರನ್ನು ಪರಿಗಣಿಸುವ ಮೂಲಕ ಬ್ರಾಹ್ಮಣ ಹಾಗು ಒಕ್ಕಲಿಗ ಸಮುದಾಯಕ್ಕೆ ಪ್ರಾತಿನಿಧ್ಯ ಕಲ್ಪಿಸಿದಂತಾಗುತ್ತದೆ ಇದರ ಜೊತೆಗೆ ಸಾಮಾಜಿಕ ನ್ಯಾಯದ ಪರಿಪಾಲನೆಯಾಗಲಿದೆ ಎಂದು ಬಿಜೆಪಿ ಸುದ್ದಿ ಮೂಲಗಳು ತಿಳಿಸಿವೆ.
ಇನ್ನು ಈ ಕುರಿತು ಪ್ರತಿಕ್ರಿಯಿಸರುವ ನಟ ಜಗ್ಗೇಶ್ ನನಗೆ ಯಾವ ನಿರೀಕ್ಷೆ ಇರಲಿಲ್ಲ ನಾನು ಬಹಳ ನಿಷ್ಠೆಯಿಂದ ಪಕ್ಷಕ್ಕೆ ಕೆಲಸ ಮಾಡಿದ್ದೆ. ಸಿಎಂ ಹಾಗೂ ಸ್ನೇಹಿತರು, ಶಾಸಕರು ಸಂಘದ ಹಿರಿಯರು ಎಲ್ಲರೂ ನಿರ್ಧಾರ ಮಾಡಿ ಈ ಸ್ಥಾನ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ನಾನು ನಿರೀಕ್ಷೆ ಮಾಡಿರಲಿಲ್ಲ. ಚಿಂತನೆಗಳು ಇತ್ತು ಮುಂದಿನ ದಿನಗಳಲ್ಲಿ ಯಾವ ರೀತಿ ಕೆಲಸ ಮಾಡಬೇಕು ಅಂತ ನನಗೆ ಕಲ್ಪನೆ ಇರಲಿಲ್ಲ. ಪಕ್ಷ ಹಾಗೂ ಸಂಘಟನೆಗೆ ಧನ್ಯವಾದ ಎಂದು ಕೃತಜ್ಷತೆ ಸಲ್ಲಿಸಿದ್ದಾರೆ.
ನನಗೆ ಹಿರಿಯರು ಪೋನ್ ಮಾಡಿ ದಾಖಲೆ ರೆಡಿಮಾಡಿಕೊಳ್ಳಲು ಹೇಳಿದ್ರು. ಆಗಲು ನನಗೆ ನಂಬಿಕೆ ಇರಲಿಲ್ಲ ಹೀಗಾಗಿ ಇದು ಸಂಪೂರ್ಣ ರಾಯರ ಆಶೀರ್ವಾದದಿಂದ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ನಾಳೆ ನಾಮಿನೇಷನ್ ಮಾಡುತ್ತೇನೆ ಇವತ್ತು ಇದಕ್ಕೆ ಬೇಕಾದ ದಾಖಲೆ ಸಿದ್ದತೆ ಮಾಡಿಕೊಳ್ಳುತ್ತೇನೆ. ನನಗೆ ನನ್ನ ಹೆಂಡ್ತಿ ಕೂಡ ಇದರಲ್ಲಿ ಬಹಳ ಸಹಾಯ ಮಾಡ್ತಿದ್ದಾಳೆ ಅವಳಿಗು ಧನ್ಯವಾದ.
ನನಗೆ ನಿರೀಕ್ಷೆ ಇಲ್ಲದಿರುವುದರಿಂದ ದಾಖಲೆ ಸಂಗ್ರಹಿಸಲು ವಿಳಂಬ ಆಗಿದೆ. ದಾಖಲೆ ಸಂಗ್ರಹದ ಒತ್ತಡದಲ್ಲಿ ಇದ್ದೇನೆ ಎಲ್ಲಾ ಮುಗಿಸಿಕೊಂಡು ನಾಳೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ನಟ ಜಗ್ಗೇಶ್ ತಿಳಿಸಿದ್ದಾರೆ.