ಕರ್ನಾಟಕದ ರಾಜಕೀಯ ಕ್ಷೇತ್ರವು ಹಿಂದಿನಿಂದ ಲಿಂಗಾಯತ ಮತ್ತು ಒಕ್ಕಲಿಗ ಈ ಉಭಯ ಸಮುದಾಯ ಕೇಂದ್ರಿತ ಎನ್ನುವ ಸಂಗತಿ ನಾವೆಲ್ಲರೂ ಬಲ್ಲೆವು. ಸ್ವಾತಂತ್ರ ನಂತರದ ಅವಧಿ ರಾಜಕೀಯದಲ್ಲಿ ಲಿಂಗಾಯತ ಮತ್ತು ಒಕ್ಕಲಿಗರ ಉಚ್ಛ್ರಾಯ ಕಾಲ. ಕರ್ನಾಟಕಕ್ಕೆ ಕಾಂಗ್ರೆಸ್ ಪಕ್ಷ ಸರಿಸುಮಾರು ಒಂದರಿಂದ ಒಂದೂವರೆ ದಶಕಗಳ ಅವಧಿಗೆ ನಾಲ್ಕು ಜನ ಲಿಂಗಾಯತ ಮುಖ್ಯಮಂತ್ರಿಗಳನ್ನು ನೀಡಿದೆ. ಎಂಬತ್ತರ ದಶಕದಲ್ಲಿ ದೇವರಾಜ್ ಅರಸು ಈ ಉಭಯ ಸಮುದಾಯಗಳ ಪ್ರಾಬಲ್ಯವನ್ನು ಅಲ್ಪಮಟ್ಟಿಗೆ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಅದೇ ದೇವರಾಜ್ ಅರಸರ ವಾರಸುದಾರರೆಂದು ಪರಿಗಣಿಸಲ್ಪಡುವ ಸಿದ್ಧರಾಮಯ್ಯನವರು ಒಕ್ಕಲಿಗರನ್ನು ನಂಬದೆ ಲಿಂಗಾಯತರ ಬೆಂಬಲಕ್ಕೆ ನಿಂತದ್ದು ಸೋಜಿಗದ ಸಂಗತಿಯಂತೂ ಖಂಡಿತ ಅಲ್ಲ. ಏಕೆಂದರೆ ಒಂದುಕಡೆ ಒಕ್ಕಲಿಗ ಸಮುದಾಯದ ಮೇಲಿನ ದೇವೇಗೌಡ ಕುಟುಂಬದ ಹಿಡಿತ ಹಾಗು ಗೌಡರ ಕುಟುಂಬದೊಂದಿಗಿನ ಅವರ ಹಳಸಿದ ಸಂಬಂಧಗಳು ಹಾಗು ಮತ್ತೊಂದು ಕಡೆ ಲಿಂಗಾಯತರ ಮರ್ಜಿಯಲ್ಲೇ ಆಡಳಿತ ಮಾಡಿ ಯಶಸ್ವಿಯಾಗಿದ್ದ ರಾಮಕೃಷ್ಣ ಹೆಗಡೆಯ ನಡೆ ಸಿದ್ದರಾಮಯ್ಯವರು ಬಹಳ ಸೂಕ್ಷ್ಮವಾಗಿ ಅನುಸರಿಸಿದ್ದಾರು.
ತೊಂಬತ್ತರ ದಶಕದ ಹಿಂದೆ ಇಂದಿರಾ ಗಾಂಧಿ ಪ್ರಯಾಣಿಸುವ ವಿಮಾನವನ್ನು ಆಕಾಶದಿಂದಲೇ ವಾಪಸ್ಸು ಕಳುಹಿಸುವಷ್ಟು ಲಿಂಗಾಯತರು ಕಾಂಗ್ರೆಸ್ ಪಕ್ಷದ ಮೇಲೆ ಹಿಡಿತ ಹೊಂದಿದ್ದರು ಎನ್ನುವ ಅತಿಷಯೋಕ್ತಿಯ ಮಾತು ನಾವು ಕೇಳಿದ್ದೇವೆ. ಇಂದಿರಾ-ನಿಜಲಿಂಗಪ್ಪ ನಡುವಿನ ಭಿನ್ನಾಭಿಪ್ರಾಯದ ತರುವಾಯ ಲಿಂಗಾಯತರು ಜನತಾ ಪರಿವಾರವನ್ನು ಬೆಂಬಲಿಸಿದ್ದು ಹಳೆಯ ಸಂಗತಿ. ಕಾಂಗ್ರೆಸ್ ನೊಂದಿಗಿನ ಲಿಂಗಾಯತರ ಮುನಿಸು ಮುಂದೆ ರಾಜೀವರು ವಿರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಸ್ಥಾನದಿಂದ ಅಮಾನುಷವಾಗಿ ತೆಗೆದುಹಾಕಿದ ಮೇಲೆ ಇನ್ನೂ ಉಲ್ಬಣಿಸಿತು. ಕಾಂಗ್ರೆಸ್ ಬಿಟ್ಟು ಜನತಾ ಪರಿವಾರವನ್ನು ಬೆಂಬಲಿಸಿದ ಲಿಂಗಾಯತರು ಆ ಪಕ್ಷದ ಮೇಲೆ ತಮ್ಮ ನಿಯಂತ್ರಣವನ್ನು ಉಳಿಸಿಕೊಳ್ಳದೆ ರಾಜಕೀಯದಲ್ಲಿ ಎಲ್ಲೂ ಇಲ್ಲದ ರಾಮಕೃಷ್ಣ ಹೆಗಡೆಯನ್ನು ನಾಯಕನನ್ನಾಗಿಸಿ ಹಿಂದುತ್ವವಾದಿ ಸಂಘಟನೆಗಳು ಕರ್ನಾಟಕದಲ್ಲಿ ಭದ್ರವಾಗಿ ಬೇರೂರಲು ಪರೋಕ್ಷ ಕಾರಣಿಗರಾದರು.
ಹಿಂದುತ್ವವಾದಿ ಸಂಘಟನೆಗಳು ಕರ್ನಾಟಕದಲ್ಲಿ ಈ ಮಟ್ಟಿಗೆ ಸೊಕ್ಕಲು ಮತ್ತು ಇಂದು ಮಾಧ್ಯಮ ಕ್ಷೇತ್ರವು ಸಂಪೂರ್ಣ ಅವರ ನಿಯಂತ್ರಕ್ಕೆ ಸೇರಲು ಈ ಹೆಗಡೆ ಪಾತ್ರ ಬಹಳ ದೊಡ್ಡದು. ಲಿಂಗಾಯತರೊಳಗಿನ ಉಪ ಜಾತಿ ಸಂಘರ್ಷವನ್ನು ಚೆನ್ನಾಗಿ ಬಳಸುತ್ತ ˌ ಒಕ್ಕಲಿಗರೊಂದಿಗಿನ ಲಿಂಗಾಯತರ ಭಿನ್ನಾಭಿಪ್ರಾಯವನ್ನು ಜಾಣತನದಿಂದ ಉಪಯೋಗಿಸುತ್ತ ಹೆಗಡೆ ಲಿಂಗಾಯತರ ಪ್ರಶ್ನಾತೀತ ನಾಯಕರಾಗಿ ಏಳು ವರ್ಷ ಕರ್ನಾಟಕದಲ್ಲಿ ಬ್ರಾಹ್ಮಣ ರಾಜ್ಯಕ್ಕೆ ಭದ್ರ ಬುನಾದಿ ಹಾಕಿದರು. ಅದು ಈ ದಡ್ಡ ಲಿಂಗಾಯತರಿಗೆ ಅರ್ಥವಾಗಲೆ ಇಲ್ಲ. ಅದು ಅರ್ಥವಾಗುವಷ್ಟರಲ್ಲಿ ರಾಜ್ಯದಲ್ಲಿ ಅದೇ ಲಿಂಗಾಯತ ಸಮುದಾಯದ ಯಡಿಯೂರಪ್ಪನವರನ್ನು ಮುಂದಿಟ್ಟುಕೊಂಡು ಬ್ರಾಹ್ಮಣರು ತಮ್ಮ ಸ್ವಹಿತಾಸಕ್ತಿಗಾಗಿ ಸ್ಥಾಪಿಸಿದ ಬಿಜೆಪಿಯನ್ನು ಕ್ರಮೇಣವಾಗಿ ಬೇರೂರಿಸಲು ಆರಂಭಿಸಿದ್ದರು.
ಅಲ್ಲಿಗೆ ಕರ್ನಾಟಕದ ರಾಜಕೀಯ ಕ್ಷೇತ್ರದ ಮೇಲಿನ ಲಿಂಗಾಯತರ ಹಿಡಿತ ದುರ್ಬಲಗೊಳ್ಳಲಾರಂಭಿಸಿತು. ಬಿಜೆಪಿಯಲ್ಲಿ ಯಾರೇ ನಾಯಕರಾದರೂ ಅದರ ನೀತಿ ನಿರೂಪಣೆಯ ಜವಾಬ್ದಾರಿ ಬ್ರಾಹ್ಮಣರ ಕೈಯಲ್ಲೆ ಇರುತ್ತದೆ. ಹಾಗಾಗಿ ಅಲ್ಲಿ ಯಡಿಯೂಪ್ಪನವರ ಬೃಹತ್ ಲಿಂಗಾಯತ ಸಮುದಾಯದ ಮತ ಬ್ಯಾಂಕ್ ಮೇಲೆ ಮಾತ್ರ ಬಿಜೆಪಿ ಬ್ರಾಹ್ಮಣರ ಕಣ್ಣಿತ್ತೆ ಹೊರತು ಯಡಿಯೂರಪ್ಪನವರಿಗೆ ಸಂಪೂರ್ಣ ಸ್ವಇಚ್ಛೆಯಿಂದ ಆಡಳಿತ ನಡೆಸುವ ಸ್ವಾತಂತ್ರ ಕೊಡುವ ಮನಸ್ಸಿರಲಿಲ್ಲ. ಅದು ಯಡಿಯೂರಪ್ಪನವರ ಎರಡೂ ಅವಧಿಯಲ್ಲಿ ಬಹಳ ಸ್ಪಷ್ಟವಾಗಿ ರುಜುವಾತಾಗಿದೆ. ಮೊದಲ ಅವಧಿಯಲ್ಲಿ ಬಿಜೆಪಿ ಮಾತೃಸಂಸ್ಥೆಯ ರಾಯಭಾರಿಯಾಗಿದ್ದ ಅಂದಿನ ಕರ್ನಾಟಕ ಮೂಲದ ಕೇಂದ್ರದ ಮಂತ್ರಿಯೊಬ್ಬರು ಬಳ್ಳಾರಿ ಮಣ್ಣುಗಳ್ಳರ ಮೂಲಕ ಯಡಿಯೂರಪ್ಪ ಆಡಳಿತ ಸುಗಮವಾಗಿ ನಡೆಯದಂತೆ ಹುನ್ನಾರ ಮಾಡಿದ್ದು ಮತ್ತು ಆನಂತರ ಯಡಿಯೂರಪ್ಪನವರನ್ನು ಜೈಲಿಗಟ್ಟುವ ಪರಿಸ್ಥಿತಿ ನಿರ್ಮಾಣ ಮಾಡಿದ್ದು ನಾವೆಲ್ಲ ಬಲ್ಲೆವು.
ಇದರಿಂದ ಕೆರಳಿದ ಯಡಿಯೂರಪ್ಪ ೨೦೧೩ ರಲ್ಲಿ ಕೆಜೆಪಿ ಸ್ಥಾಪಿಸಿ ಬಿಜೆಪಿಯನ್ನು ಮಕಾಡೆ ಮಲಗಿಸಿದ್ದು ಮತ್ತು ಆಮೇಲೆ ಮತ್ತೆ ಬಿಜೆಪಿ ಸೇರಿ ಮೂಲೆ ಗುಂಪಾಗಿದ್ದು ಈಗ ಇತಿಹಾಸ. ಯಡಿಯೂರಪ್ಪ ಎರಡನೇ ಅವಧಿ ಅಧಿಕಾರಕ್ಕೆ ಏರಿದಾಗ ಅವರನ್ನು ಮೊದಲ ಅವಧಿಯಲ್ಲಿ ತೊಂದರೆ ಕೊಟ್ಟಿದ್ದ ಮಾತೃಸಂಸ್ಥೆಯ ರಾಯಭಾರಿಯ ಸ್ಥಾನದಲ್ಲಿ ಆತನಿಗಿಂತ ಅಪಾಯಕಾರಿˌ ಒಂದು ಪಂಚಾಯ್ತಿ ಸ್ಥಾನಕ್ಕೂ ಅರ್ಹನಲ್ಲದ ಮತ್ತೊಬ್ಬ ರಾಯಭಾರಿಗೆ ಯಡಿಯೂರಪ್ಪ ಕುಟುಂಬವನ್ನು ರಾಜಕೀಯವಾಗಿ ಮುಗಿಸುವ ಯೋಜನೆಯ ನಾಯಕತ್ವ ನೀಡಿ ಬಿಜೆಪಿಯ ಮಾತೃಸಂಸ್ಥೆ ಒಂದು ದೀರ್ಘಾವಧಿ ಯೊಜನೆ ಸಿದ್ಧಪಡಿಸಿತ್ತು. ಕೆಜೆಪಿ ತೊರೆದು ಬಿಜೆಪಿ ಸೇರಿದ ತಕ್ಷಣ ಮತ್ತು ಎರಡನೇ ಅವಧಿಯ ಆಡಳಿತ ಕಾಲದಲ್ಲಿ ಯಡಿಯೂರಪ್ಪ ವಿರುದ್ಧ ಬಿಜೆಪಿ ಮತ್ತು ಅದರ ಮಾತೃಸಂಸ್ಥೆಯೊಳಗಿನ ಯಡಿಯೂರಪ್ಪ ವಿರೋಧಿಗಳು ಈ ಕೆಳಗೆ ಪಟ್ಟಿಮಾಡಲಾದ ಕಾರಸ್ತಾನಗಳನ್ನು ಮಾಡಿದವು:
▪️ರಾಯಣ್ಣ ಬ್ರಿಗೇಡ್ ಸ್ಥಾಪಿಸಿ ಈಶ್ವರಪ್ಪನನ್ನು ಎತ್ತಿಕಟ್ಟಲಾಯಿತು. ಹಾಗು ಕುರುಬ ಎಸ್ಟಿ ಮೀಸಲಾತಿ ಹೋರಾಟಕ್ಕೆ ಚಾಲನೆ ನೀಡಲಾಯಿತು.
▪️ಯಡಿಯೂರಪ್ಪ ಪುತ್ರ ವಿಜಯೇಂದ್ರನಿಗೆ ವರುಣಾ ಕ್ಷೇತ್ರದ ಟಿಕೇಟ್ ತಪ್ಪಿಸಲಾಯಿತು ಮತ್ತು ೨೦೧೮ ರ ವಿಧಾನಸಭೆ ಚುನಾವಣೆಯಲ್ಲಿ ಟಿಕೇಟ್ ಹಂಚಿಕೆಯಲ್ಲಿ ಯಡಿಯೂರಪ್ಪ ಟೀಮನ್ನು ದೂರ ಇಡಲಾಯಿತು.
▪️ಸ್ವೀಕರ್ ಆಯ್ಕೆ ˌ ಸಂಪುಟ ರಚನೆ ಹಾಗು ವಿಸ್ತರಣೆˌ ರಾಜ್ಯಸಭಾ ಟಿಕೇಟ್ ಹಂಚಿಕೆˌ ನೆರೆ ಪರಿಹಾರˌ ಜಿಎಸ್ಟಿ ಪಾಲು ಈ ಎಲ್ಲ ವಿಷಯಗಳಲ್ಲಿ ಯಡಿಯೂರಪ್ಪನವರನ್ನು ಸತಾಯಿಸಲಾಯಿತು.
▪️ಯೋಗೇಶ್ವರಾದಿಯಾಗಿ ಇನ್ನೂ ಅನೇಕ ಮೂರನೇ ಸಾಲಿನ ಬಿಜೆಪಿ ಪುಢಾರಿಗಳನ್ನು ಯಡಿಯೂರಪ್ಪ ಕುಟುಂಬದ ವಿರುದ್ಧ ವಾಚಾಮಗೋಚರವಾಗಿ ಮಾತನಾಡುವಂತೆ ಎತ್ತಿಕಟ್ಟಲಾಯಿತು.
▪️ಯತ್ನಾಳˌ ಬೆಲ್ಲದ ಮುಂತಾದ ಲಿಂಗಾಯತ ಸಮುದಾಯದ ಶಾಸಕರನ್ನು ಪ್ರಚೋದಿಸಿ ಪಂಚಮಸಾಲಿ ಹೋರಾಟ ಮತ್ತು ಯಡಿಯೂರಪ್ಪ ಕುಟುಂಬದ ವಿರುದ್ಧ ಟೀಕಿಸಲು ಪ್ರಚೋದನೆ ನೀಡಲಾಯಿತು.
▪️ಯಡಿಯೂರಪ್ಪ ತಮ್ಮ ದೈನಂದಿನ ಆಡಳಿತ ಸುಗಮವಾಗಿ ಮಾಡದಂತೆ ಅಡಚಣಿಗಳನ್ನು ಒಡ್ಡಲಾಯಿತು.
▪️ಈಶ್ವರಪ್ಪ ಮೂಲಕ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗು ಹಾಗು ಬಿಜೆಪಿ ಹೈಕಮಾಂಡಿಗೆ ದೂರು ಕೊಡಿಸುವ ಮೂಲಕ ಒತ್ತಡ ತಂತ್ರಗಳು ಅನುಸರಿಸಿ ಕೊನೆಗೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲಾಯಿತು.
▪️ಖಾಸಗಿ ವಾಹಿನಿಯೊಂದನ್ನು ಬಳಸಿ ಯಡಿಯೂರಪ್ಪ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪ ಪ್ರಚಾರ ಪಡೆಯುವಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಯಿತು.
ಹೀಗೆ ತಕ್ಕಮಟ್ಟಿಗೆ ಉದಾರವಾದಿಯಾಗಿರುವ ಯಡಿಯೂರಪ್ಪನವರನ್ನು ನಾಯಕನನ್ನಾಗಿ ಇಟ್ಟುಕೊಂಡು ಕಠೋರ ಹಿಂದುತ್ವವಾದಿಗಳ ಗೂಪ್ತ ಸೂಚಿಗಳು ಸುಲಭವಾಗಿ ಜಾರಿ ಮಾಡುವುದು ಕಷ್ಟದಾಯಕವೆಂದು ಹಾಗು ಪಕ್ಷದ ಮೇಲಿನ ಯಡಿಯೂರಪ್ಪ ಕುಟುಂಬ ಹಾಗು ಆ ಮೂಲಕ ಲಿಂಗಾಯತರ ಹಿಡಿತವನ್ನು ತಪ್ಪಿಸಲೆಂದು ಯಡಿಯೂರಪ್ಪ ಅವನವರನ್ನು ನಾಯಕತ್ವದಿಂದ ಇಳಿಸಲಾಯಿತು. ೨೦೨೩ ರ ಚುನಾವಣೆ ಸೋತರೂ ಪರವಾಗಿಲ್ಲ ೨೦೨೮ ರಷ್ಟೊತ್ತಿಗೆ ಪಕ್ಷದ ಮೇಲಿನ ಯಡಿಯೂರಪ್ಪ ಪ್ರಭಾವ ಸಂಪೂರ್ಣ ಅಳಿಸಿ ಹಿಂದುತ್ವದ ಆಧಾರದಲ್ಲಿ ಕರ್ನಾಕದಲ್ಲಿ ಬ್ರಾಹ್ಮಣರ ನಾಯಕತ್ವದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಮತ್ತು ಅದರ ಮಾತೃ ಸಂಸ್ಥೆಗಳು ದೂ(ದು)ರಾಲೋಚನೆ ಮಾಡಿರುವ ಸುದ್ದಿಗಳು ಹರಿದಾಡುತ್ತಿವೆ.
ಬಿಜೆಪಿಯಲ್ಲಿರುವ ಲಿಂಗಾಯತ ನಾಯಕರಿಗೆ ಯಡಿಯೂರಪ್ಪನವರಿಂದ ಸಂಪೂರ್ಣ ಅಂತರ ಕಾಯ್ದುಕೊಳ್ಳಲು ಮತ್ತು ತಾವು ಲಿಂಗಾಯತರೆಂದು ಬಿಂಬಿಸಿಕೊಳ್ಳದೆ ಹಿಂದುತ್ವದ ಸಿದ್ಧಾಂತಗಳ ಜೊತೆಗೆ ಗುರುತಿಸಿಕೊಳ್ಳಲು ಕಠಿಣವಾದ ಎಚ್ಚರಿಕೆ ನೀಡಲಾಗಿದೆಯಂತೆ. ಅದರ ಮುಂದುವರೆದ ಭಾಗವೆ ಮೊನ್ನೆ ವಿಜಯೇಂದ್ರನಿಗೆ ಪರಿಷತ್ ಟಿಕೇಟ್ ತಪ್ಪಿಸಿದ್ದು ಮತ್ತು ಮಂತ್ರಿ ಮಾಡಲೇಬಾರದೆಂದು ನಿರ್ಧಾರಿಸಿರುವ ಕುರಿತ ಸುದ್ದಿಗಳು ಬಿಜೆಪಿ ಮೊಗಸಾಲೆಯಲ್ಲಿ ಪಿಸುಗುಟ್ಟುತ್ತಿವೆ. ಒಟ್ಟಾರೆ ಶೂನ್ಯವಾಗಿದ್ದ ಬಿಜೆಪಿಯನ್ನು ಈ ರಾಜ್ಯದಲ್ಲಿ ಕಟ್ಟಿಬೆಳೆಸಿದ ಯಡಿಯೂರಪ್ಪನವರನ್ನು ಬಿಜೆಪಿ ಇಂದು ಅತ್ಯಂತ ಅಮಾನವಿಯವಾಗಿ ನಡೆಸಿಕೊಳ್ಳುತ್ತಿದೆ. ಅದರಿಂದಾಗುವ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸಲು ಬಿಜೆಪಿ ಸಿದ್ದತೆ ಮಾಡಿಕೊಳ್ಳುತ್ತಿರುವುದು ಸುಳ್ಳಲ್ಲ. ಹಿಜಾಬ್ˌ ಮೊಟ್ಟೆˌ ಅಜಾನ್ ಮುಂತಾದ ದಿನಕ್ಕೊಂದರಂತೆ ಭಾವನಾತ್ಮಕ ವಿಷಯಗಳು ಹುಟ್ಟುಹಾಕುತ್ತಿರುವುದೆ ಆ ಉದ್ದೇಶದಿಂದ ಎಂದು ಬೇರೆ ಹೇಳಬೇಕಿಲ್ಲ.
ಈಗ ಯಡಿಯೂರಪ್ಪ ಕುಟುಂಬಕ್ಕೆ ಉಳಿದಿರುವ ಮಾರ್ಗವೆಂದರೆ ಬಿಜೆಪಿಯ ಮಾತೃ ಸಂಸ್ಥೆಯ ನೀತಿ ನಿರೂಪಕರಿಗೆ ಸಂಪೂರ್ಣ ಶರಣಾಗಿ ಆ ಪಕ್ಷದಲ್ಲಿ ತಲೆ ತಗ್ಗಿಸಿಕೊಂಡಿರುವುದು ಇಲ್ಲವೆ ಅವರನ್ನು ಎದುರಿಸಿ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಅಧಿಕಾರ ಹಿಡಿಯಲು ದೀರ್ಘಾವಧಿ ಯೋಜನೆ ರೂಪಿಸುವುದು. ಒಳ್ಳೆಯ ಸಂಘಟನಾ ಸಾಮರ್ಥ್ಯ ಹೊಂದಿರುವ ವಿಜಯೇಂದ್ರನ ಎದುರಿಗೆ ಕೂಡ ಎರಡು ಮಾರ್ಗಗಳಿವೆ. ಒಂದುˌ ಬಳ್ಳಾರಿ ರಡ್ಡಿಗಳಂತೆ ಬಿಜೆಪಿ ಮಾತೃ ಸಂಸ್ಥೆಗೆ ತಲೆ ಬಾಗುವುದು ಇಲ್ಲವೆ ಆಂಧ್ರದ ಜಗಮೋಹನ್ ರೆಡ್ಡಿಯಂತೆ ಸಿಡಿದೆದ್ದು ಪ್ರಾದೇಶಿಕ ಪಕ್ಷ ಸಂಘಟಿಸುವುದು. ಈ ಆಯ್ಕೆಗಳು ಸವಾಲಿನಂತೆ ಸ್ವೀಕರಿಸಬೇಕಿದೆ. ಏಕೆಂದರೆ ಬಿಜೆಪಿ ಸಣ್ಣಪುಟ್ಟ ತಪ್ಪುಗಳನ್ನಿಟ್ಟುಕೊಂಡು ಯಡಿಯೂರಪ್ಪ ಕುಟುಂಬವನ್ನು ಹಣಿಯಲು ಹಿಂದೆ ಮುಂದೆ ನೋಡಲಾರದು.
ಇದಕ್ಕೆ ಪರ್ಯಾಯವಾಗಿ ಬಿಜೆಪಿ ಮತ್ತು ಅದರ ಮಾತೃ ಸಂಸ್ಥೆಯನ್ನು ಕರ್ನಾಟಕದಲ್ಲಿ ಹುಡಿಗೊಳಿಸದು ಯಡಿಯೂರಪ್ಪ ಕುಟುಂಬ ಮಾಡಬೇಕಾದ ಸುಲಭದ ಕಾರ್ಯವೆಂದರೆ ಲಿಂಗಾಯತ ಧರ್ಮ ಸಂವಿಧಾನ ಮಾನ್ಯತೆಯ ಹೋರಾಟಕ್ಕೆ ಮರುಜೀವ ನೀಡುವುದು. ಲಿಂಗಾಯತ ಧರ್ಮ ಎಂದಾಕ್ಷಣ ಬಿಜೆಪಿಯ ಮಾತೃ ಸಂಸ್ಥೆಯ ಜಂಘಾಬಲವೆ ಉಡುಗಿಹೋಗುತ್ತದೆ. ೨೦೧೭ ರಲ್ಲಿ ಈ ಚಳುವಳಿ ಆರಂಭವಾದಾಗ ಅದು ಯಾವ ಪರಿಯಲ್ಲಿ ಕಂಗಾಲಾಗಿತ್ತು ಎನ್ನುವುದು ಪ್ರಜ್ಞಾವಂತ ಲಿಂಗಾಯತರು ಮರೆತಿಲ್ಲ. ಲಿಂಗಾಯತ ಸಮಾಜದಲ್ಲಿರುವ ಬೆರಳೆಣಿಕೆಯ ವೀರಶೈವವಾದಿಗಳನ್ನು ಸುಮ್ಮನಾಗಿಸಿ ಜೊತೆಗೆ ತರುವ ಸಾಮರ್ಥ್ಯ ಯಡಿಯೂರಪ್ಪ ಕುಟುಂಬಕ್ಕಿದೆ. ಹಾಗೊಂದು ವೇಳೆ ಅದಾಗದಿದ್ದರೂ ಅವರಿಂದ ಯಾವ ಮಹತ್ತರ ಪರಿಣಾಮವೂ ಆಗಲಾರದೆಂದು ವೀರಶೈವವಾದಿಗಳನ್ನು ಉಪೇಕ್ಷಿಸಿದರಾಯಿತು.
ಆಗ ವೀರಶೈವವಾದಿಗಳು ಲಿಂಗಾಯತರೊಂದಿಗೆ ಗುರುತಿಸಿಕೊಳ್ಳಬೇಕು ಇಲ್ಲವೆ ಲಿಂಗಾಯತ ಮುಖ್ಯವಾಹಿನಿಯಿಂದ ಬೇರ್ಪಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಆ ಮೂಲಕ ಯಡಿಯೂರಪ್ಪ ಕುಟುಂಬ ನಿರ್ಭಯವಾಗಿ ಹಾಗು ಸುಲಭವಾಗಿ ಬಿಜೆಪಿಯ ಮಾತೃ ಸಂಸ್ಥೆಯನ್ನು ಮಣಿಸಬಹುದು. ಏಕೆಂದರೆ ಯಡಿಯೂರಪ್ಪನವರನ್ನು ಕಾಡಿದ್ದು ಆ ಮಾತೃ ಸಂಸ್ಥೆಯೇ ಹೊರತು ಬಿಜೆಪಿಯಲ್ಲ. ಪ್ರಾದೇಶಿಕ ಪಕ್ಷ ಮಾಡುವುದರಿಂದ ಅದು ಯಡಿಯೂರಪ್ಪ ಕುಟುಂಬ ಹಾಗು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಿಂದ ಭ್ರಮನಿರಸನಕ್ಕೊಳಗಾದ ಅನೇಕ ಜನ ರಾಜಕಾರಣಿಗಳಿಗೆ ಮರುಜೀವ ನೀಡಿದಂತಾಗಿ ಕರ್ನಾಟಕದಲ್ಲಿ ಒಂದು ಪ್ರಬಲ ಪ್ರಾದೇಶಿಕ ರಾಜಕೀಯ ಶಕ್ತಿಯ ಉದಯವಾಗುತ್ತದೆ. ಇದು ಕರ್ನಾಟಕದ ಸೌಹಾರ್ದ ಬದುಕಿಗೆ ಹಾಗು ಬಸವಾದಿ ಶರಣರ ಆಶಯಗಳಿಗೆ ಯಡಿಯೂರಪ್ಪ ಕುಟುಂಬ ಸಲ್ಲಿಸಬಹುದಾದ ಕಿರು ಸೇವೆ ಎಂದು ಜನರು ಖಂಡಿತ ಭಾವಿಸುತ್ತಾರೆ.