ಸ್ಫೋಟಕ ಬ್ಯಾಟ್ಸ್ ಮನ್ ಜೋಸ್ ಬಟ್ಲರ್ ಅಬ್ಬರದ ಆಟ ಮತ್ತು ಬೌಲರ್ ಗಳ ಶಿಸ್ತಿನ ದಾಳಿ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ 7 ವಿಕೆಟ್ ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಫೈನಲ್ ಗೆ ಲಗ್ಗೆ ಹಾಕಿದೆ.
ಅಹಮದಾಬಾದ್ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆರ್ ಸಿಬಿ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ರಾಜಸ್ಥಾನ್ ರಾಯಲ್ಸ್ 18.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಕ್ವಾಲಿಫೈಯರ್-1 ಪಂದ್ಯದಲ್ಲಿ ಎದುರಾಗಿದ್ದ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಮುಖಾಮುಖಿ ಆಗಲಿವೆ.
ರಾಜಸ್ಥಾನ್ ಚೊಚ್ಚಲ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿದ ನಂತರ ಎರಡನೇ ಬಾರಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿತು. ಈ ಮೂಲಕ ಮೊದಲ ಬಾರಿ ಪ್ರಶಸ್ತಿ ಗೆಲ್ಲುವ ಆರ್ ಸಿಬಿ ಕನಸು ಮತ್ತೊಮ್ಮೆ ನುಚ್ಚುನೂರಾಯಿತು.
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ (21) ಮೊದಲ ವಿಕೆಟ್ ಗೆ 61 ರನ್ ಜೊತೆಯಾಟ ನಿಭಾಯಿಸಿದರು. ನಂತರ ಬಟ್ಲರ್ ನಾಯಕ ಸಂಜು ಸ್ಯಾಮ್ಸನ್ (23) ಜೊತೆ 2ನೇ ವಿಕೆಟ್ ಗೆ 52 ರನ್ ಜೊತೆಯಾಟ ಪಾಲುದಾರಿಕೆ ನಡೆಸಿ ತಂಡವನ್ನು ಆಧರಿಸಿದರು.
ಬಟ್ಲರ್ 60 ಎಸೆತಗಳಲ್ಲಿ 5 ಬೌಂಡರಿ ಹಾಗೂ 6 ಸಿಕ್ಸರ್ ಸಹಾಯದಿಂದ ಅಜೇಯ 106 ರನ್ ಬಾರಿಸಿ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆರ್ ಸಿಬಿ ತಂಡ ರಜತ್ ಪಟಿದರ್ ಅರ್ಧಶತಕದ ಹೊರತಾಗಿಯೂ ಬೃಹತ್ ಮೊತ್ತ ದಾಖಲಿಸಲು ವಿಫಲವಾಯಿತು.
ಫಾರ್ಮ್ ಗೆ ಮರಳಿದ ಸೂಚನೆ ನೀಡಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ (7) ಮತ್ತೆ ವಿಫಲವಾಗಿದ್ದರಿಂದ ತಂಡ ಆಘಾತಕ್ಕೆ ಒಳಗಾಯಿತು. ಆದರೆ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ರಜತ್ ಪಟಿಡರ್ 2ನೇ ವಿಕೆಟ್ ಗೆ 70 ರನ್ ಜೊತೆಯಾಟ ನಿಭಾಯಿಸಿದರು.
ಎಲಿಮಿನೆಟರ್ ಪಂದ್ಯದಲ್ಲಿ ಶತಕ ಸಿಡಿಸಿದ್ದ ರಜತ್ ಪಟಿಡರ್ 42 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸೇರಿದ 58 ರನ್ ಗಳಿಸಿ ಔಟಾದರು. ಫಾಫ್ ಡು ಪ್ಲೆಸಿಸ್ 27 ಎಸೆತಗಳಲ್ಲಿ 3 ಬೌಂಡರಿ ಸಹಾಯದಿಂದ 25 ರನ್ ಗಳಿಸಿದರು.
ನಂತರ ಬಂದ ಗ್ಲೆನ್ ಮ್ಯಾಕ್ಸ್ ವೆಲ್ 13 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 25 ರನ್ ಬಾರಿಸಿ ಔಟಾದ ನಂತರ ತಂಡ ನಾಯಕೀಯ ಕುಸಿತ ಅನುಭವಿಸಿ ಬೃಹತ್ ಮೊತ್ತ ದಾಖಲಿಸುವಲ್ಲಿ ವಿಫಲವಾಯಿತು.
ರಾಜಸ್ಥಾನ್ ರಾಯಲ್ಸ್ ಪರ ಪ್ರಸಿದ್ಧ ಕೃಷ್ಣ ಮತ್ತು ಒಬೆಡ್ ಮೆಕೊಯ್ ತಲಾ 3 ವಿಕೆಟ್ ಪಡೆದು ಆರ್ ಸಿಬಿ ಓಟಕ್ಕೆ ಬ್ರೇಕ್ ಹಾಕಿದರು.