ಕಾಂಗ್ರೆಸ್ ತ್ಯಜಿಸಿ ಸಮಾಜವಾದಿ ಪಕ್ಷದ ಬೆಂಬಲದಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿರುವ ಕಪಿಲ್ ಸಿಬಲ್ ಯಾವಾಗಲೂ ಬಂಡಾಯದ ಭಾವುಟವನ್ನು ಬಗಿಲಲ್ಲಿ ಇಟ್ಟುಕೊಂಡಿದ್ದವರೇ. ಅವರು ಇತ್ತೀಚೆಗೆ ನಾಯಕತ್ವದಿಂದ ದೂರ ಸರಿಯುವಂತೆ ಮತ್ತು ಬೇರೆ ನಾಯಕರಿಗೆ ಅವಕಾಶ ನೀಡುವಂತೆ ಗಾಂಧಿ ಕುಟುಂಬವನ್ನು ಬಹಿರಂಗವಾಗಿ ಕುಟುಕಿದ್ದರು. ಇದೇ ರೀತಿ 2000ರಲ್ಲಿ ಕಾಂಗ್ರೆಸ್ ಅವನತಿಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸಲಹೆಗಾರರೇ ಕಾರಣ ಎಂದು ಕೊಳ್ಳಿ ಇಟ್ಟಿದ್ದರು. ಆತ್ಮಾವಲೋಕನ ಮಾಡಿಕೊಳ್ಳುವಂತೆ ಕರೆ ನೀಡಿದ್ದರು. ಮುಕ್ತ ಮತ್ತು ಸ್ಪಷ್ಟವಾದ ಚರ್ಚೆಗಳಿಗೆ ಆಗ್ರಹಿಸಿದ್ದರು. ಗ್ರ್ಯಾಂಡ್ ಓಲ್ಡ್ ಪಾರ್ಟಿಯಲ್ಲಿ ಅದು ಅವರ ಆರಂಭಿಕ ವರ್ಷಗಳು, ಆಗಲೇ ಅವರದು ಬಂಡಾಯಗಾರನ ಪಾತ್ರ. ಹಾಗೆ ಸಿಡುಕಿಯೂ ನಂತರ ಬಂದ ಯುಪಿಎ ಸರ್ಕಾರದಲ್ಲಿ ಮಂತ್ರಿಯಾಗುವಲ್ಲಿ ಸಿಬಲ್ ಯಶಸ್ವಿಯಾಗಿದ್ದರು. ಈಗ ಪಕ್ಷ ತೊರೆಯುವುದು ಅನಿವಾರ್ಯವಾಯಿತು.
ಕಪಿಲ್ ಸಿಬಲ್ ಕಾಂಗ್ರೆಸ್ ತೊರೆದರು ಸರಿ, ಜಿ-23 ಗುಂಪಿನ ಇತರೆ ಸದಸ್ಯರ ಕತೆ ಏನು ಎಂಬ ಪ್ರಶ್ನೆ ಎದ್ದಿದೆ. ಕಪಿಲ್ ಸಿಬಲ್ ನಿರ್ಗಮನದಿಂದ G23 ಇನ್ನೂ ದುರ್ಬಲಗೊಳ್ಳಬಹುದು ಎಂದು ಹೇಳಲಾಗುತ್ತಿದೆ. ಜಿ-23 ಗುಂಪಿನ ಪೈಕಿ ಜಿತಿನ್ ಪ್ರಸಾದ ಮತ್ತು ಯೋಗಾನಂದ ಶಾಸ್ತ್ರಿ ಈ ಹಿಂದೆಯೇ ಕಾಂಗ್ರೆಸ್ ತೊರೆದಿದ್ದರು. ಸದ್ಯ ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಭೂಪಿಂದರ್ ಸಿಂಗ್ ಹೂಡಾ, ಶಶಿ ತರೂರ್ ಮತ್ತು ಮನೀಶ್ ತಿವಾರಿ ಮತ್ತಿರರಿದ್ದಾರೆ. ಒಬ್ಬೊಬ್ಬರದು ಒಂದೊಂದು ಕತೆಯಾಗಿದೆ.
ಭೂಪಿಂದರ್ ಸಿಂಗ್ ಹೂಡಾ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಸಮಾಧಾನಪಡಿಸಿದಂತಿದೆ. ಹರಿಯಾಣದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಹೂಡಾ ಅವರ ನಿಕಟವರ್ತಿಯನ್ನು ಕಾಂಗ್ರೆಸ್ನ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ರಾಜ್ಯದಲ್ಲಿ ಪಕ್ಷದ ನಿಯಂತ್ರಣವನ್ನು ಹೂಡಾ ಅವರಿಗೇ ನೀಡಲಾಗಿದೆ. ಗುಲಾಮ್ ನಭಿ ಆಜಾದ್ ಮತ್ತು ಆನಂದ ಶರ್ಮಾ ರಾಜ್ಯಸಭಾ ಸ್ಥಾನ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಶಶಿ ತರೂರ್ ಮತ್ತು ಮನೀಶ್ ತಿವಾರಿ ಲೋಕಸಭಾ ಸದಸ್ಯರಾಗಿದ್ದಾರೆ. ಅವರು ತಮ್ಮ ಸಂಸದ ಸ್ಥಾನಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಕಾರಣದಿಂದ ಪಕ್ಷವನ್ನು ತೊರೆಯಲು ಸಾಧ್ಯವಿಲ್ಲ. ಕುತೂಹಲಕಾರಿ ಸಂಗತಿ ಎಂದರೆ 2024ರ ಲೋಕಸಭಾ ಚುನಾವಣೆಯಲ್ಲಿ ಮನೀಶ್ ತಿವಾರಿ ಆಮ್ ಆದ್ಮಿ ಪಕ್ಷಕ್ಕೆ ಸೇರಬಹುದು ಎಂದು ಪಂಜಾಬ್ ಕಾಂಗ್ರೆಸ್ ವಲಯಗಳಲ್ಲಿ ಚರ್ಚೆ ಆಗುತ್ತಿದೆ.
ಗುಲಾಮ್ ನಭಿ ಆಜಾದ್ ಮತ್ತು ಆನಂದ ಶರ್ಮಾ ಅವರಿಗೆ ರಾಜ್ಯಸಭಾ ಸ್ಥಾನ ಸಿಗದಿದ್ದರೆ ಕೆಲವು ಸಮಸ್ಯೆಗಳು ಎದುರಾಗಬಹುದು. ಆಗ ಅವರು ಕೂಡ ಬೇರೆ ಪಕ್ಷಗಳ ಕಡೆ ನೋಡಬಹುದು. ಜಿ-23 ಭವಿಷ್ಯ ನನಗೆ ತಿಳಿದಿಲ್ಲ. ಅದು ಮುಗಿದಿದೆ ಎಂದು ಭಾವಿಸುತ್ತೇನೆ. ಗುಂಪಿನ ರಾಜಕೀಯ ಮರಣದಂಡನೆ ಬರೆಯುವ ಸಮಯ ಇದು. ಜಿ-23 ಅಸ್ತವ್ಯಸ್ತವಾಗಿದೆ. ಕೆಲವು ಸದಸ್ಯರು ಕಾಂಗ್ರೆಸ್ನೊಳಗೆ ಕೆಲಸ ಮಾಡಲು ಒಲವು ತೋರುತ್ತಿದ್ದಾರೆ. ಕೆಲವರು ತಮ್ಮದೇ ಆದ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
‘ಬಂಡಾಯಗಾರನಾಗಿ ಬಹುದೂರ ಸಾಗಿದ್ದ ಕಪಿಲ್ ಸಿಬಲ್ಗೆ ಪಕ್ಷ ಬಿಡದೆ ಬೇರೆ ಆಯ್ಕೆ ಉಳಿದಿರಲಿಲ್ಲ. ಆದರೆ ಗುಲಾಮ್ ನಭಿ ಆಜಾದ್, ಆನಂದ ಶರ್ಮಾ ಮತ್ತು ಶಶಿ ತರೂರ್ ಈಗಲೂ ಕಾಂಗ್ರೆಸ್ ಪಕ್ಷದ ಒಂದಲ್ಲ ಒಂದು ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ. ಎಲ್ಲರೂ ಕಾಂಗ್ರೆಸ್ನ ಒಳಗೆ ಅಥವಾ ಹೊರಗೆ ತಮ್ಮ ಭವಿಷ್ಯವನ್ನು ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಬಹುಶಃ ಅವರು ತಮ್ಮದೇ ಆದ ಹಾದಿಯನ್ನು ರೂಪಿಸಿಕೊಳ್ಳಬೇಕು ಎಂದು ಭಾವಿಸಿದ್ದರು. ಆದರೆ ಅದು ಆಗಿಲ್ಲ. ರಾಜ್ಯಸಭಾ ಚುನಾವಣೆ ನಿರ್ಣಾಯಕವಾದುದಾಗಿದೆ’ ಎಂದು ಜಿ-23 ಗುಂಪಿನ ನಾಯಕರೊಬ್ಬರು ಹೇಳಿದ್ದಾರೆ.
ಇತ್ತೀಚೆಗೆ ರಾಜಸ್ಥಾನದ ಉದಯಪುರದಲ್ಲಿ ನಡೆದ ಚಿಂತನ್ ಶಿಬಿರದ ಬಳಿಕ ‘ಇಂಡಿಯನ್ ಎಕ್ಸ್ಪ್ರೆಸ್’ಗೆ ನೀಡಿದ ಸಂದರ್ಶನದಲ್ಲಿ ಶಶಿ ತರೂರ್, ‘ಈ ಶಿಬಿರದಲ್ಲಿ ಒಂದು ಪ್ರಮುಖ ಪ್ರಕ್ರಿಯೆಯ ಪ್ರಾರಂಭವಾಗಿದೆ. ಅದು ಮುಂದಿನ ಕೆಲವು ತಿಂಗಳುಗಳಲ್ಲಿ ಹೇಗೆ ತೆರೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಲು ಬಯಸುತ್ತೇನೆ’ ಎಂದು ಹೇಳಿದ್ದರು. ಉಳಿದವರು ಮಾತನಾಡಿಲ್ಲ.
‘ಕಪಿಲ್ ಸಿಬಲ್ ನಿರ್ಗಮನವು ಉತ್ತಮವಾಗಿ ಯೋಜಿಸಿದ ಕಾರ್ಯತಂತ್ರದ ಭಾಗವಾಗಿದೆ. ಜಿ -23 ಗುಂಪಿನ ನಾಯಕರ ಒಪ್ಪಿಗೆಯೊಂದಿಗೆ ಅವರು ಕಾಂಗ್ರೆಸ್ ತೊರೆದಿದ್ದಾರೆ. ಅವರ ನಿರ್ಗಮನ ಆಶ್ಚರ್ಯಕರವಲ್ಲ. 2024ರ ಲೋಕಸಭಾ ಚುನಾವಣೆ ದೃಷ್ಟಿ ಇಟ್ಟುಕೊಂಡು ದೊಡ್ಡ ಮತ್ತು ಕಾರ್ಯಸಾಧ್ಯವಾದ ಆಯ್ಕೆಯನ್ನು ರಚಿಸಲು ಚೆನ್ನಾಗಿ ಯೋಚಿಸಿ ರೂಪಿಸಿದ ಕಾರ್ಯತಂತ್ರದ ಒಂದು ಭಾಗವಾಗಿದೆ. ಆ ಕಾರ್ಯತಂತ್ರದ ಮೂಲವು 2021ರ ಬಜೆಟ್ ಅಧಿವೇಶನದಲ್ಲಿ ಕಪಿಲ್ ಸಿಬಲ್ ಆಯೋಜಿಸಿದ್ದ ಭೋಜನಕೂಟದಲ್ಲಿದೆ. ಅವರ ವೈಯಕ್ತಿಕ ಆಹ್ವಾನದ ಮೇರೆಗೆ ವಿರೋಧ ಪಕ್ಷದ ನಾಯಕರ ವಿಶಾಲ ವ್ಯಾಪ್ತಿಯನ್ನು ಒಟ್ಟುಗೂಡಿಸಲಾಗಿದೆ. ಇದು ಸಿಬಲ್ ಅವರ ಪರ್ಯಾಯವನ್ನು ರಚಿಸಲು ಸಾಧ್ಯವಾಗುವ ಶಕ್ತಿಯನ್ನು ಪ್ರತಿನಿಧಿಸುತ್ತದೆ’ ಎಂದು ಕಾಂಗ್ರೆಸ್ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಇದು ಇನ್ನಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.