ಬೀಜಿಂಗ್: ಚೀನಾದ ಪೋಲಿಸ್ ದತ್ತಾಂಶಗಳನ್ನು ಹ್ಯಾಕರ್ಗಳು ಸೋರಿಕೆ ಮಾಡಿದ್ದು, ಉಯ್ಘರ್ ಮುಸ್ಲಿಮರಿಗೆ ಚೀನಾ ಸರ್ಕಾರ ಮಾಡಿರುವ ಭೀಕರ ದೌರ್ಜನ್ಯವು ಈ ದತ್ತಾಂಶಗಳೊಂದಿಗೆ ಬಹಿರಂಗವಾಗಿದೆ. “ರಿ-ಎಜ್ಯುಕೇಶನ್” ಅಥವಾ “ಮರು-ಶಿಕ್ಷಣ” ಎಂದು ಉಯ್ಘರ್ ಪ್ರಾಂತ್ಯದ ಮುಸ್ಲಿಮರನ್ನು ಕ್ಸಿನ್ಜಿಯಾಂಗ್ ಪ್ರದೇಶದ ಕಾನ್ಸನ್ಟ್ರೇಶನ್ ಕ್ಯಾಂಪ್ ಗಳಲ್ಲಿ ಬಂಧಿಸಿ ಚಿತ್ರಹಿಂಸೆ ನೀಡುವ ಚೀನಾ ಸರ್ಕಾರದ ದುರುಳತೆ ಇದರೊಂದಿಗೆ ಜಗಜ್ಜಾಹೀರಾಗಿದೆ.
ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ಮಿಚೆಲ್ ಬ್ಯಾಚೆಲೆಟ್ ಅವರು ಚೀನಾದ ಕ್ಸಿನ್ಜಿಯಾಂಗ್ ಪ್ರದೇಶದ ನಗರಗಳಿಗೆ ಭೇಟಿ ನೀಡಿದಾಗಲೇ ಹೃದಯ ವಿದ್ರಾವಕ ಫೋಟೋಗಳನ್ನೊಳಗೊಂಡ ಈ ದತ್ತಾಂಶಗಳನ್ನು ಬಹಿರಂಗಗೊಳಿಸಲಾಗಿದೆ. ಇದನ್ನು “ಕ್ಸಿನ್ಜಿಯಾಂಗ್ ಪೋಲೀಸ್ ಫೈಲ್ಗಳು” ಎಂದು ಉಲ್ಲೇಖಿಸಲಾಗಿದ್ದು, BBC ಸೇರಿದಂತೆ ಮಾಧ್ಯಮಗಳ ಒಕ್ಕೂಟವು ಇದನ್ನು ಪ್ರಕಟಿಸಿದೆ.
ಇದು 2018 ರ ಜನವರಿ-ಜುಲೈ ಅವಧಿಯ ದತ್ತಾಂಶಗಳೆಂದು ಕಂಡು ಬಂದಿದ್ದು, ಇದನ್ನು ಹ್ಯಾಕರ್ಗಳು ಯುಎಸ್ ಮೂಲದ ವಿದ್ವಾಂಸ ಮತ್ತು ಕಾರ್ಯಕರ್ತ ಡಾ. ಆಡ್ರಿಯನ್ ಝೆನ್ಜ್ಗೆ ರವಾನಿಸಿದ್ದಾರೆ, ಅವರು ಅದನ್ನು ಅಂತರರಾಷ್ಟ್ರೀಯ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಇದು ಬಂಧಿತ ಜನರ ಸಾವಿರಾರು ಛಾಯಾಚಿತ್ರಗಳನ್ನು ಒಳಗೊಂಡಿದೆ ಮತ್ತು ಅತ್ಯಂತ ಗೌಪ್ಯ ಫೋಟೋಗಳು ಮತ್ತು ತಪ್ಪಿಸಿಕೊಳ್ಳಲು ಪ್ರಯತ್ನಿಸುವವರನ್ನು ಗುಂಡಿಕ್ಕಿ ಕೊಲ್ಲುವ ನೀತಿ ಸೇರಿದಂತೆ ಹಲವು ಮಾಹಿತಿಯನ್ನು ಬಹಿರಂಗಪಡಿಸಿದೆ.
ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ಚೀನಾದ ಪಶ್ಚಿಮ ಪ್ರದೇಶದ ಒಂದು ಮಿಲಿಯನ್ಗಿಂತಲೂ ಹೆಚ್ಚು ಉಯ್ಘರ್ಗಳು ಮತ್ತು ಇತರ ಮುಸ್ಲಿಂ ಅಲ್ಪಸಂಖ್ಯಾತರನ್ನು ಬಂಧಿಸಿದೆ ಎಂದು ಆರೋಪಿಸಲಾಗಿದೆ. ಅಮೇರಿಕಾ ಮತ್ತು ಇತರ ಪಾಶ್ಚಿಮಾತ್ಯ ದೇಶಗಳಲ್ಲಿನ ರಾಜಕಾರಣಿಗಳು ಇದನ್ನು “ಜನಾಂಗೀಯ ಹತ್ಯೆ” ಎಂದು ಹೆಸರಿಸಿದ್ದಾರೆ. ಸಾಮೂಹಿಕ ಬಂಧನಗಳ ಜೊತೆಗೆ, ಚೀನಾದ ಅಧಿಕಾರಿಗಳು ಕ್ಸಿನ್ಜಿಯಾಂಗ್ನಲ್ಲಿ ಉಯಿಘರ್ ಸಾಂಸ್ಕೃತಿಕ ಪರಂಪರೆಯ ನಾಶದ ಅಭಿಯಾನವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಳುತ್ತಿರುವ ಉಯ್ಘರ್ ಮಹಿಳೆಯ ಭಾವಚಿತ್ರವು ಚೀನಾದ ಕಾನ್ಸಂಟ್ರೇಶನ್ ಕ್ಯಾಂಪ್ಗಳ ಹೃದಯ ವಿದ್ರಾವಕ ವಾಸ್ತವತೆಯನ್ನು ಬಹಿರಂಗಪಡಿಸಿದ್ದು, ಬೀಜಿಂಗ್ ತನ್ನ ಅಲ್ಪಸಂಖ್ಯಾತ ಉಯಿಘರ್ ಮುಸ್ಲಿಮರ ವಿರುದ್ಧ ತಾರತಮ್ಯ ಮಾಡುತ್ತಿದೆ ಎಂಬ ದೀರ್ಘಕಾಲದ ಆರೋಪಕ್ಕೆ ಸೋರಿಕೆಯಾದ ಈ ದತ್ತಾಂಶ ಪುಷ್ಟಿ ನೀಡಿದೆ.
ಉಯ್ಘರ್ಗಳ 5,000 ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಈ ದತ್ತಾಂಶವು ಒಳಗೊಂಡಿವೆ. ಇವರಲ್ಲಿ ಕನಿಷ್ಠ 2,884 ಜನರನ್ನು ಭಯೋತ್ಪಾದನೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಹೇಳಲಾಗಿದ್ದು, ಉಳಿದವರನ್ನು ಯಾವುದೇ ಆರೋಪಗಳಿಲ್ಲದೆ ಬಂಧಿಸಿಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮುಸ್ಲಿಂ-ಬಹುಸಂಖ್ಯಾತ ದೇಶಗಳಿಗೆ ಪ್ರಯಾಣಿಸುವುದು, ಗಡ್ಡವನ್ನು ಬೆಳೆಸುವುದು ಮತ್ತು ‘ಬಲವಾದ ಧಾರ್ಮಿಕ ಒಲವು’ ಹೊಂದಿರುವವರ ಸಂಬಂಧಿಕರಾಗಿರುವುದು ಸೇರಿದಂತೆ ಧಾರ್ಮಿಕತೆ ಪಾಲಿಸುವ ‘ಅಪರಾಧಗಳಿಗೆ’ ದೀರ್ಘಾವಧಿಯ ಶಿಕ್ಷೆಯನ್ನು ನೀಡಲಾಗಿದೆ. ಪ್ರಾರ್ಥನಾ ಚಾಪೆಗಳು, ಧಾರ್ಮಿಕ ಪಠ್ಯಗಳು, ಖುರಾನ್ನ ಕ್ಯಾಲಿಗ್ರಫಿ, ಹಿಜಾಬ್ಗಳು, ಉದ್ದನೆಯ ವಸ್ತ್ರ ಮತ್ತು ಪ್ರಾಥಮಿಕ ಶಾಲಾ ನೋಟ್ಬುಕ್ ಸೇರಿದಂತೆ ಹಲವು ಧಾರ್ಮಿಕ ವಸ್ತುಗಳನ್ನು “ನಿಷಿದ್ಧ, ಅಕ್ರಮ” ಎಂದು ಪೊಲೀಸರು ವಶಪಡಿಸಿಕೊಂಡಿರುವುದು “ಕ್ಸಿನ್ಜಿಯಾಂಗ್ ಪೊಲೀಸ್ ಫೈಲ್”ಗಳಲ್ಲಿ ದಾಖಲಾಗಿದೆ.
ಅದಾಗ್ಯೂ, ಈ ಕಾನ್ಸನ್ಟ್ರೇಷನ್ ಕ್ಯಾಂಪ್ಗಳನ್ನು 2017 ರಲ್ಲಿ ಕ್ಸಿನ್ಜಿಯಾಂಗ್ ಪ್ರದೇಶದಾದ್ಯಂತ ತೆರೆಯಲಾಗಿದೆ ಎಂದು ಚೀನಾ ಸರ್ಕಾರ ಹೇಳಿಕೊಂಡಿದೆ. ಈ ಕೇಂದ್ರಗಳನ್ನು ಶಿಕ್ಷಣ ಕೇಂದ್ರಗಳು ಎಂದು ಚೀನಾ ವಿವರಿಸಿದರೂ ಕ್ಸಿನ್ಜಿಯಾಂಗ್ನ ಬಂಧನ ಕೇಂದ್ರಗಳಲ್ಲಿ ಲಕ್ಷಾಂತರ ಉಯಿಘರ್ಗಳನ್ನು ಬಂಧಿಯಾಗಿಟ್ಟು ಚಿತ್ರಹಿಂಸೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೀಗ ಲಭ್ಯವಾಗಿರುವ ಆಂತರಿಕ ಕಡತಗಳು ಚೀನಾದ ವಾದವನ್ನು ನಿರಾಕರಿಸಿವೆ. ಶಾಲೆಗಳು ಎಂದು ಹೇಳಿ ಬಂಧೀಖಾನೆ ಮಾಡಿರುವುದು ಋಜುವಾತಾಗಿದೆ.
ಸದ್ಯ ಬಿಡುಗಡೆಯಾಗಿರುವ ಫೋಟೋಗಳು, ಎರಡನೇ ಮಹಾಯುದ್ಧ ಕಾಲದ ನಾಝಿ ಕ್ರೌರ್ಯವನ್ನು ನೆನಪಿಸುತ್ತಿದೆ ಎಂದು ಹಲವರು ಅಭಿಪ್ರಾಯಿಸಿದ್ದಾರೆ. ಅಮಾಯಕ ಉಯ್ಘರ್ಗಳು ಯಹೂದಿಗಳಂತೆ ಭಾಸವಾಗುತ್ತಿದ್ದಾರೆ ಎಂದೂ ಹಲವರು ಕಾಮೆಂಟ್ ಮಾಡಿದ್ದಾರೆ.
ಉಯ್ಘರ್ ಗಳು ಯಾರು??
ಕ್ಸಿನ್ಜಿಯಾಂಗ್ನಲ್ಲಿ ಸುಮಾರು 12 ಮಿಲಿಯನ್ ಉಯ್ಘರ್ಗಳು ವಾಸಿಸುತ್ತಿದ್ದಾರೆ, ಇವರಲ್ಲಿ ಹೆಚ್ಚಿನವರು ಮುಸ್ಲಿಮರು. ಇದನ್ನು ಅಧಿಕೃತವಾಗಿ ಕ್ಸಿನ್ಜಿಯಾಂಗ್ ಉಯ್ಘರ್ ಸ್ವಾಯತ್ತ ಪ್ರದೇಶ (XUAR) ಎಂದು ಕರೆಯಲಾಗುತ್ತದೆ.
ಉಯ್ಘರ್ಗಳು ತಮ್ಮದೇ ಆದ ಭಾಷೆಯನ್ನು ಮಾತನಾಡುತ್ತಾರೆ, ಇದು ಟರ್ಕಿಶ್ಗೆ ಹೋಲುತ್ತದೆ ಮತ್ತು ಸಾಂಸ್ಕೃತಿಕವಾಗಿ ಮತ್ತು ಜನಾಂಗೀಯವಾಗಿ ಮಧ್ಯ ಏಷ್ಯಾದ ರಾಷ್ಟ್ರಗಳಿಗೆ ಹತ್ತಿರವಾಗಿದ್ದಾರೆ. ಇವರು ಕ್ಸಿನ್ಜಿಯಾಂಗ್ ಜನಸಂಖ್ಯೆಯ ಅರ್ಧಕ್ಕಿಂತ ಕಡಿಮೆ ಇದ್ದಾರೆ.
ಇತ್ತೀಚಿನ ದಶಕಗಳಲ್ಲಿ ಕ್ಸಿನ್ಜಿಯಾಂಗ್ಗೆ ಚೀನಾದ ಜನಾಂಗೀಯ ಬಹುಸಂಖ್ಯಾತರು ಸಾಮೂಹಿಕ ವಲಸೆಯನ್ನು ಮಾಡುತ್ತಿದ್ದಾರೆ. ಅಲ್ಲಿನ ಅಲ್ಪಸಂಖ್ಯಾತ ಜನಸಂಖ್ಯೆಯನ್ನು ದುರ್ಬಲಗೊಳಿಸಲು ರಾಜ್ಯವು ಸಂಘಟಿತವಾಗಿ ಮಾಡುತ್ತಿರುವ ವಲಸೆ ಇದು ಎಂದು ಆರೋಪಿಸಲಾಗಿದೆ.
ಚೀನಾವು ಮುಸ್ಲಿಂ ಧಾರ್ಮಿಕ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಈ ಪ್ರದೇಶದಲ್ಲಿ ಧಾರ್ಮಿಕ ಆಚರಣೆಗಳನ್ನು ನಿಷೇಧಿಸುವುದರ ಜೊತೆಗೆ ಮಸೀದಿಗಳು ಮತ್ತು ಗೋರಿಗಳನ್ನು ಧ್ವಂಸ ಮಾಡಿದೆ ಎಂದು ಆರೋಪಿಸಲಾಗಿದೆ. ಉಯ್ಘರ್ ಸಂಸ್ಕೃತಿಯು ಅಳಿಸಿಹೋಗುವ ಅಪಾಯದಲ್ಲಿದೆ ಎಂದು ಉಯ್ಘರ್ ಜನಾಂಗವು ಭಯಪಡುತ್ತಿದೆ.
ಅಂತರಾಷ್ಟ್ರೀಯ ಸಮುದಾಯದ ಪ್ರತಿಕ್ರಿಯೆ
ಯುಎಸ್, ಯುಕೆ, ಕೆನಡಾ ಮತ್ತು ನೆದರ್ಲ್ಯಾಂಡ್ಸ್ ಸೇರಿದಂತೆ ಹಲವಾರು ದೇಶಗಳು ಚೀನಾ ನರಮೇಧವನ್ನು ಮಾಡುತ್ತಿದೆ ಎಂದು ಆರೋಪಿಸಿವೆ. ಉಯ್ಘರ್ ಜನಾಂಗ ವಿರುದ್ಧ ಮಾಡುವ ಕ್ರಮವನ್ನು “ರಾಷ್ಟ್ರೀಯ, ಜನಾಂಗೀಯ, ಅಥವಾ ಧಾರ್ಮಿಕ ಗುಂಪನ್ನು ಸಂಪೂರ್ಣವಾಗಿ ಅಥವಾ ಭಾಗಶಃ ನಾಶಮಾಡುವ ಉದ್ದೇಶ” ಎಂದು ಅಂತರರಾಷ್ಟ್ರೀಯ ಸಮಾವೇಶ ವ್ಯಾಖ್ಯಾನಿಸಿದೆ.
ಶಿಬಿರಗಳಲ್ಲಿ ಉಯ್ಘರ್ಗಳನ್ನು ಒಳಪಡಿಸುವುದರ ಜೊತೆಗೆ, ಜನಸಂಖ್ಯೆಯನ್ನು ನಿಗ್ರಹಿಸಲು ಚೀನಾ ಉಯ್ಘರ್ ಮಹಿಳೆಯರನ್ನು ಬಲವಂತವಾಗಿ ಸಾಮೂಹಿಕವಾಗಿ ಬಂಜೆಯರನ್ನಾಗಿಸುತ್ತಿದೆ, ಮಕ್ಕಳನ್ನು ಅವರ ಕುಟುಂಬಗಳಿಂದ ಬೇರ್ಪಡಿಸುತ್ತದೆ ಮತ್ತು ಗುಂಪಿನ ಸಾಂಸ್ಕೃತಿಕ ಸಂಪ್ರದಾಯಗಳನ್ನು ಮುರಿಯಲು ಪ್ರಯತ್ನಿಸುತ್ತಿದೆ ಎಂದು ಪಾಶ್ಚಾತ್ಯ ರಾಷ್ಟ್ರಗಳು ಆರೋಪಿಸುತ್ತಿದೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಚೀನಾ “ಜನಾಂಗೀಯ ಹತ್ಯೆ ಮತ್ತು ಮಾನವೀಯತೆಯ ವಿರುದ್ಧ ಅಪರಾಧಗಳನ್ನು” ಮಾಡುತ್ತಿದೆ ಎಂದು ಹೇಳಿದ್ದಾರೆ. ಕ್ಸಿನ್ಜಿಯಾಂಗ್ನಲ್ಲಿ ಚೀನಾ ನರಮೇಧ ಮಾಡುತ್ತಿದೆ ಎಂದು ಯುಕೆ ಸಂಸತ್ತು ಏಪ್ರಿಲ್ 2021 ರಲ್ಲಿ ಘೋಷಿಸಿತು.
2018 ರಲ್ಲಿ ಯುಎನ್ ಮಾನವ ಹಕ್ಕುಗಳ ಸಮಿತಿಯು ಚೀನಾವು ಕ್ಸಿನ್ಜಿಯಾಂಗ್ನಲ್ಲಿನ “ಉಗ್ರವಾದ ನಿಗ್ರಹ ಕೇಂದ್ರಗಳಲ್ಲಿ” ಒಂದು ಮಿಲಿಯನ್ ಜನರನ್ನು ಹಿಡಿದಿಟ್ಟುಕೊಂಡಿದೆ ಎಂದು ನಂಬಲರ್ಹವಾದ ವರದಿಗಳನ್ನು ಹೊಂದಿದೆ ಎಂದು ಹೇಳಿದೆ.