ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಪಠ್ಯ ಪರಿಷ್ಕರಣೆ ಮೂಲಕ ವಿವಾದದ ಕಿಡಿ ಹೊತ್ತಿಸಿದೆ. ಆರ್ ಎಸ್ ಎಸ್ ಸಂಸ್ಥಾಪಕ ಹೆಡಗೇವಾರ್ ಭಾಷಣ ಸೇರಿದಂತೆ ಹಲವು ಬಗೆಯಲ್ಲಿ ಈ ಬಾರಿಯ ಪಠ್ಯದಲ್ಲಿ ಬದಲಾವಣೆ ಮಾಡಲಾಗಿದೆ. ಈ ಬೆನ್ನಲ್ಲೇ ನಾಡಿನ ಹೋರಾಟಗಾರರು ಟ್ವಿಟರ್ ಕ್ಯಾಂಪೇನ್ ನಡೆಸಿ ಇದಕ್ಕೆ ಭಾರೀ ವಿರೋಧ ವ್ಯಕ್ತ ಪಡಿಸಿದ್ದಾರೆ.
ಪಠ್ಯ ಪರಿಷ್ಕರಣೆ ವಿರೋಧಿಸಿ ಹೋರಾಟಗಾರರಿಂದ ಟ್ವಿಟರ್ ಅಭಿಯಾನ.!!
ಹೌದು, ಹಿಜಾಬ್ ಬಳಿಕ ಸಾಲು ಸಾಲು ವಿವಾದಗಳಿಗೆ ಸಾಕ್ಷಿಯಾಗಿದ್ದ ರಾಜ್ಯ ಹಲವು ದಿನಗಳ ಕಾಲ ತಣ್ಣಗಿತ್ತು. ಅದಾಗಿ ಇದೀಗ ಮತ್ತೊಂದು ವಿವಾದಕ್ಕೆ ಸ್ವತಃ ಸರ್ಕಾರವೇ ದಾರಿ ಮಾಡಿಕೊಟ್ಟಿದೆ. ಇದೀಗ ಪಠ್ಯ ಪರಿಷ್ಕರಣೆ ಬಗ್ಗೆ ನಾಡಿನೆಲ್ಲಡೆ ಅಪಸ್ವರ ಎದ್ದಿದೆ. ಶಾಲಾ ಮಕ್ಕಳ ಪಠ್ಯದಲ್ಲೂ ಕೇಸರೀಕರಣ ತುಂಬಿ ದ್ವೇಷ ಹರಡುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಮುಖ್ಯವಾಗಿ ಟಿಪ್ಪು ಸುಲ್ತಾನ್ ಇತಿಹಾಸಕ್ಕೆ ಪಠ್ಯದಿಂದ ಬಹುತೇಕ ವಿಚಾರಗಳಿಗೆ ಕೋಕ್ ನೀಡಲಾಗಿದೆ. ಲಂಕೇಶ್, ಅರವಿಂದ ಮಾಲಗತ್ತಿ, ಸಾರಾ ಅಬೂಬಕ್ಕರ್ ಹೀಗೆ ಹಲವು ಹಿರಿಯ ಸಾಹಿತಿಗಳ ಗದ್ಯ, ಪದ್ಯಕ್ಕೂ ಪಠ್ಯದಿಂದ ಗೇಟ್ ಪಾಸ್ ನೀಡಲಾಗಿದೆ. ಬದಲಿಗೆ ಆರ್ ಎಸ್ ಎಸ್ ಸಂಸ್ಥಾಪಕ ಹೆಡಗೇವಾರ್ ಭಾಷಣ, ಚಕ್ರವರ್ತಿ ಸೂಲಿಬೆಲೆಯ ಲೇಖನ ಹೀಗೆ ಬಲಬಂಥೀಯ ವಾದಗಳನ್ನು ಹೇಳುವ ವಿಚಾರಗಳನ್ನು ಸೇರಿಸಲಾಗಿದೆ ಎಂದು ಹೇಳಲಾಗಿದೆ. ಇದನ್ನು ವಿರೋಧಿಸಿ ಪ್ರಗತಿಪರ ಚಿಂತಕರು, ಕನ್ನಡ ಪರ ಹೋರಾಟಗಾರರು ಟ್ವಿಟ್ಟರ್ ಅಭಿಯಾನ ನಡೆಸಿ ಅಸಮಾಧಾನ ಹೊರ ಹಾಕಿದ್ದಾರೆ.
ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆದ #RejectRSSTextBook ಅಭಿಯಾನ.!!
ಇನ್ನು ಬಿಜೆಪಿ ಸರ್ಕಾರ ಪಠ್ಯ ಕೇಸರೀಕರಷ ವಿರೋಧಿಸಿ ಟ್ವಿಟರ್ ಅಭಿಯಾನ ಮಾಡಲಾಗಿತ್ತು. ನಿನ್ನೆ ಸಂಜೆ ಐದು ಗಂಟೆಗೆ ಶುರುವಾದ ಈ ಅಭಿಯಾನ ಇಂದು ದೇಶದ ಗಮನ ಸೆಳೆದಿತ್ತು. #RejectBrahiminTextBook ಹಾಗೂ #RejectRSSTextBook ಎಂಬ ಹ್ಯಾಶ್ ಟ್ಯಾಗ್ ನಡಿ ಈ ಅಭಿಯಾನ ಕೈಗೊಳ್ಳಲಾಗಿತ್ತು. ಒಟ್ಟಾರೆ ಟ್ವಿಟರ್ ಟ್ರೆಂಡಿಂಗ್ ನ 3 ಮತ್ತು ನಾಲ್ಕನೇ ಸ್ಥಾನದಲ್ಲಿತ್ತು ಈ ಅಭಿಯಾನ. ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಅಭಿಯಾನ ಟ್ರೆಂಡಿಂಗ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಶಿಕ್ಷಣ ಸಚಿವ ಬಿಸಿ ನಾಗೇಶ್ ಪತ್ರಿಕಾಗೋಷ್ಟಿ ನಡೆಸಿ ಪಠ್ಯ ಪರಿಷ್ಕರಣೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ರೋಹಿತ್ ಚಕ್ರತೀರ್ಥ ಒಬ್ಬ ಪ್ರೊಫೆಸರ್.. ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟನೆ.!!
ರೋಹಿತ್ ಚಕ್ರತೀರ್ಥ ಯಾರು? ಅವರ ಅರ್ಹತೆಯೇನು? ಅವರು ಶಿಕ್ಷಣ ತಜ್ಞರಲ್ಲವಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ.ಸಿ ನಾಗೇಶ್, “ರೋಹಿತ್ ಚಕ್ರತೀರ್ಥ ಯಾರು ಗೊತ್ತಾ? ಅವರು ಪ್ರಾಧ್ಯಾಪಕರು, ಅವರೇನು ಮೆಕಾನಿಕ್ ಅಲ್ಲ ಅವರು ಐಐಟಿ ಮತ್ತು ಸಿಇಟಿಗೆ ಪ್ರೊಫೆಸರ್ ಆಗಿದ್ದರು” ಎಂದಿದ್ದಾರೆ. ಶಿಕ್ಷಣ ತಜ್ಞ ಎಂಬುದಕ್ಕೆ ಸರ್ಟಿಫಿಕೇಟ್ ಕೊಡುವವರು ಯಾರು? ಎಂದಿದ್ದಾರೆ.
ಇನ್ನು ಆರ್ ಎಸ್ ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹರಡಗೇವಾರ್ ಪಠ್ಯ ಸೇರಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ಬಿಸಿ ನಾಗೇಶ್ ಹೆಡಗೇವಾರ್ ಪಠ್ಯ ಸೇರಿಸಿದರೆ ತಪ್ಪೇನು ಎಂದು ಮರು ಪ್ರಶ್ನೆ ಹಾಕಿದ್ದಾರೆ. ಇದರ ಜೊತೆಗೆ ಪಠ್ಯದಲ್ಲಿ ಬ್ರಾಹ್ಮಣ್ಯದ ವೈಭವೀಕರಣ ಮಾಡಲಾಗುತ್ತಿದೆ ಎಂದು ಆರೋಪವನ್ನೂ ಸಮರ್ಥಿಸಿಕೊಂಡರು. ಅಲ್ಲದೆ ಚಕ್ರವರ್ತಿ ಸೂಲಿಬೆಲೆಯವರು ದೇಶಭಕ್ತಿ ಬಗ್ಗೆ ಬರೆದಿರುವ ಲೇಖನವನ್ನು ಪಠ್ಯದಲ್ಲಿ ಸೇರಿಸಿಲಾಗಿದೆ. ಇದು ಕೆಲವರಿಕೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಒಟ್ಟಾರೆ ಇದೀಗ ಪಠ್ಯ ಪರಿಷ್ಕರಣೆ ಮತ್ತೊಂದು ಸುತ್ತಿನ ವಿವಾದಕ್ಕ ದಾರಿ ಮಾಡಿಕೊಟ್ಟಿದೆ. ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷರಾಗಿರುವ ರೋಹಿತ್ ಚಕ್ರತೀರ್ಥ ಅವರ ಶೈಕ್ಷಣಿಕ ಅರ್ಹತೆಯನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಲಾಗುತ್ತಿದೆ. ಟ್ವಿಟರ್ ನಲ್ಲೂ ಅಭಿಯಾನ ಮಾಡುವ ಮೂಲಕ ಭಾರೀ ಅಸಮಾಧಾನ ಹೊರಹಾಕಲಾಗುತ್ತಿದೆ. ಆದರೆ ಸರ್ಕಾರ ತನ್ನ ನಿರ್ದಾರವೇ ಅಂತಿಮ ಎಂಬಂತಿದೆ.







