ಕರ್ನಾಟಕದ ಬಿಳಿಗಿರಿರಂಗನ ಬೆಟ್ಟ ಪ್ರದೇಶದ ಚಾಮರಾಜನಗರ ಮತ್ತು ತಮಿಳುನಾಡಿನ ಈರೋಡ್ ಜಿಲ್ಲೆಗಳಲ್ಲಿ ವಾಸಿಸುವ ಸೋಲಿಗ ಜನಾಂಗವು ಕರ್ನಾಟಕದ ಅತಿ ಪುರಾತನ ಸಮುದಾಯಗಳಲ್ಲೊಂದು. ಯುದ್ಧದಲ್ಲಿ ಸೋತ ಒಬ್ಬ ರಾಜ ತನ್ನ ಸೈನ್ಯದೊಡನೆ ಕಾಡಿಗೆ ಹೋಗುತ್ತಾನೆ. ಅಲ್ಲಿ ಬದುಕಲಿಕ್ಕಾಗಿ ‘ಸೋಲನ ಹಂಬಿ’ ಎನ್ನುವ ಗಡ್ಡೆ ತಿನ್ನುತ್ತಾರೆ. ಎಷ್ಟು ತಿಂದರೂ ಅದು ಮತ್ತಷ್ಟು ಚಿಗುರಿ ಅವನ ಇಡೀ ಸೈನಕ್ಕೆ ಆಹಾರ ಒದಗಿಸುತ್ತಿತ್ತು. ಮುಂದೆ ಈ ಸಮುದಾಯ ‘ಸೋಲಿಗರು’ ಎಂದು ಗುರುತಿಸಿಕೊಂಡಿತು ಎನ್ನುತ್ತದೆ ಚರಿತ್ರೆ.
ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನ (ಬಿಆರ್) ಬೆಟ್ಟಗಳು ಮತ್ತು ಮಲೆ ಮಹದೇಶ್ವರ (ಎಂಎಂ) ಬೆಟ್ಟಗಳಲ್ಲಿ ವಾಸಿಸುವ ಸೋಲಿಗರು ಪ್ರಕೃತಿಯೊಂದಗೆ ವಿಶಿಷ್ಟ ಮತ್ತು ಸಂಕೀರ್ಣ ಸಂವಹನ ಜಾಲವನ್ನು ಹೊಂದಿದ್ದು ಸುಮಾರು 250 ಪ್ರಬೇಧದ ಪಕ್ಷಿಗಳ ಕೂಗನ್ನು ಅರ್ಥಮಾಡಿಕೊಳ್ಳಬಲ್ಲರು. ಉದಾಹರಣೆಗೆ ಮರಕುಟಿಗಗಳ ಪೆಕಿಂಗ್ ಮಾದರಿಯ ಕೂಗು ಕೇಳಿದರೆ ಅಪಾಯಕಾರಿ ಕಾಡು ಪ್ರಾಣಿಗಳ ಇರವನ್ನು ಅರ್ಥಮಾಡಿಕೊಂಡರೆ ಫ್ಲೈಯಿಂಗ್ ಪ್ಯಾಟರ್ನ್ ಮತ್ತು ಕೊಕುಂಜಿ ರೂಪದ ಕರೆಯನ್ನು (ಸ್ಲೇಟಿ-ಲೆಗ್ಡ್ ಕ್ರೇಕ್) ಮಳೆಯ ತೀವ್ರತೆಯ ಸೂಚಕವಾಗಿ ಗುರುತಿಸುತ್ತಾರೆ.
ಶತಮಾನಗಳಿಂದ ಕಾಡುಗಳಲ್ಲಿ ವಾಸಿಸುತ್ತಿರುವ ಸಮುದಾಯವು ಪರಿಸರದ ಆಳವಾದ ಜ್ಞಾನವನ್ನು ಪಡೆದುಕೊಂಡಿದೆ. ಅದು ಅವರ ಜೀವನೋಪಾಯಕ್ಕೆ ಮಾತ್ರವಲ್ಲದೆ ಅರಣ್ಯವನ್ನು ಸಂರಕ್ಷಿಸಲೂ ಸಹಾಯಮಾಡಿದೆ. ಅವರು ತಮ್ಮ ಸಾಂಪ್ರದಾಯಿಕ ಹಾಡುಗಳಾದ ‘ಹಡುಕೆ’ ಮೂಲಕ ಮುಂದಿನ ಪೀಳಿಗೆಗೆ ಅಪಾರ ಜ್ಞಾನವನ್ನು ರವಾನಿಸುತ್ತಿದ್ದಾರೆ.
‘ಹಡುಕೆ’ ಹಾಡುಗಳು ಮುಸ್ಸಂಜೆಯಿಂದ ಮುಂಜಾನೆಯವರೆಗೆ ವಿಶೇಷ ಸಂದರ್ಭಗಳಲ್ಲಿ ಮಹಿಳೆಯರು ಹಾಡುವ ಹಾಡುಗಳಾಗಿವೆ. ಈ ಹಾಡುಗಳು ಪಕ್ಷಿಗಳು, ಸಸ್ತನಿಗಳು, ಸರೀಸೃಪಗಳು, ಮರಗಳು, ಮಳೆ ಮತ್ತು ಹವಾಮಾನದ ಗುಣಲಕ್ಷಣಗಳು ಮತ್ತು ನಡವಳಿಕೆಯನ್ನು ವಿವರಿಸುತ್ತದೆ. ‘ಹುಲಿವೀರಪ್ಪ’ (ಹುಲಿ), ‘ಆನೆದೇವರು’ (ಆನೆ) ಗೀತೆಗಳನ್ನೂ ಹಾಡುತ್ತಾರೆ.
“ಈ ಹಾಡುಗಳ ಮೂಲಕ, ನಾವು ಪ್ರಕೃತಿಯೊಂದಿಗೆ ಸಂಪರ್ಕ ಹೊಂದುವುದು ಮಾತ್ರವಲ್ಲದೆ ನಮ್ಮ ಮಕ್ಕಳಿಗೆ ಅರಣ್ಯ ಜೀವನದ ಜಟಿಲತೆಗಳು ಮತ್ತು ಕಾಡಿನೊಂದಿಗೆ ಸಾಮರಸ್ಯದಿಂದ ಹೇಗೆ ಬದುಕಬೇಕು ಎಂಬುದರ ಕುರಿತು ಶಿಕ್ಷಣ ನೀಡುತ್ತೇವೆ. ನಮಗೆ ಅರಣ್ಯವೇ ಸರ್ವಸ್ವ” ಎನ್ನುತ್ತಾರೆ ಬಿ ಆರ್ ಹಿಲ್ಸ್‌ನ ಹೊಸಪಾಡು ಗ್ರಾಮದ ಮಾದಮ್ಮ. ಹಡುಕೆ ನಮ್ಮ ಸ್ತೋತ್ರವಾಗಿದ್ದು ವನದೇವತೆಗಳನ್ನು ಸ್ತುತಿಸಲು ಮತ್ತು ನಮ್ಮ ಸುರಕ್ಷತೆಯನ್ನು ಖಾತ್ರಿಪಡಿಸಿದ್ದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸಲು ಹಾಡುತ್ತೇವೆ ಎಂದೂ ಅವರು ಹೇಳುತ್ತಾರೆ.
ಈ ಬಗ್ಗೆ ಮಾತಾಡುವ ಸಂಶೋಧಕಿ ಡಾ ಸಮೀರಾ ಅಗ್ನಿಹೋತ್ರಿ “ಸಹಸ್ರಾರು ವರ್ಷಗಳಿಂದ ಸಹಬಾಳ್ವೆಯ ನಿಜವಾದ ಅರ್ಥವನ್ನು ಪ್ರದರ್ಶಿಸುತ್ತಿರುವ ಪ್ರಪಂಚದಾದ್ಯಂತದ ಇರುವ ಅನೇಕ ಬುಡಕಟ್ಟು ಸಮುದಾಯಗಳಂತೆ ಸೋಲಿಗ ಸಮುದಾಯವೂ ಸಹ ಅವರು ವಾಸಿಸುವ ಕಾಡುಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿದೆ. ದುರದೃಷ್ಟವಶಾತ್, ನಾವು ಅವರ ಜ್ಞಾನವನ್ನು ನಿರ್ಲಕ್ಷಿಸುತ್ತೇವೆ ಅಥವಾ ಕೀಳಾಗಿ ಕಾಣುತ್ತೇವೆ” ಎನ್ನುತ್ತಾರೆ. ತಮ್ಮ ಸಂಶೋಧನಾ ಪಾಲುದಾರ ಡಾ ಆಂಗ್ ಸಿ (ಭಾಷಾಶಾಸ್ತ್ರಜ್ಞ) ಜೊತೆಗೆ ಸೋಲಿಗ ಸಮುದಾಯದ ಕುರಿತು ವ್ಯಾಪಕ ಅಧ್ಯಯನ ಮಾಡಿರುವ ಅವರು “ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅನುಸರಿಸುತ್ತಿರುವ ಸಂರಕ್ಷಣೆಯ ಸಿದ್ಧಾಂತಗಳು ಹೆಚ್ಚು ಪಾಶ್ಚಾತ್ಯ ಪರಿಕಲ್ಪನೆಯಾಗಿದೆ” ಎಂದು ವಿಷಾದ ವ್ಯಕ್ತಪಡಿಸುತ್ತಾರೆ.

ಈ ಸಮುದಾಯದ ಸದಸ್ಯರು ರೊಟ್ಟಿ ಹಬ್ಬದಲ್ಲಿ ಹಾಡುವ ‘ಹಡುಕೆ’ ಪಕ್ಷಿಗಳು ಮತ್ತು ಪ್ರಾಣಿಗಳ ದೈಹಿಕ ಮತ್ತು ನಡವಳಿಕೆಯ ಅಂಶಗಳನ್ನು ಮಾತ್ರವಲ್ಲದೆ ಅವುಗಳ ಆವಾಸಸ್ಥಾನವನ್ನೂ ವಿವರಿಸುತ್ತದೆ ಎಂದು ಅವರು ಹೇಳುತ್ತಾರೆ.”ಈ ರೀತಿಯ ಸ್ಥಳೀಯ ಜ್ಞಾನ ವ್ಯವಸ್ಥೆಗಳು ಹವಾಮಾನ ತುರ್ತು ಪರಿಸ್ಥಿತಿಗಳಂತಹ ಸಂದರ್ಭಗಳನ್ನು ನಿಭಾಯಿಸಲು ನಮಗೆ ಸಹಾಯ ಮಾಡುತ್ತದೆ” ಎಂದು ಅವರು ಹೇಳುತ್ತಾರೆ.
ಸಮುದಾಯದ ಸಂಶೋಧಕ ಸಿ ಮಾದೇಗೌಡ “ಸಮುದಾಯದ ಪ್ರತಿಯೊಬ್ಬ ಸದಸ್ಯರು ಕಾಡಿನ ಯಾವುದೇ ಪ್ಯಾಚ್‌ನಲ್ಲಿ ಲಭ್ಯವಿರುವ ಪ್ರತಿಯೊಂದು ಜಾತಿಯ ಸಸ್ಯ ಮತ್ತು ಪ್ರಾಣಿಗಳನ್ನು ಗುರುತಿಸಲು ಸಮರ್ಥರಾಗಿದ್ದಾರೆ. ಬಾಲ್ಯದಿಂದಲೂ, ನಮ್ಮ ಹಡುಕೆ ಮೂಲಕ ಕಾಡಿನೊಳಗಿನ ಪ್ರತಿಯೊಂದು ಜೀವಿಗಳ ಪ್ರಾಮುಖ್ಯತೆಯ ಬಗ್ಗೆ ನಾವು ಅರಿತುಕೊಂಡಿದ್ದೇವೆ” ಎನ್ನುತ್ತಾರೆ.
ಸೋಲಿಗರಿಗೆ ಅರಣ್ಯ ಸಂರಕ್ಷಣೆ ಎಂದರೆ ಅರಣ್ಯವನ್ನು ನೋಯಿಸದಿರುವುದು ಮತ್ತು ಅರಣ್ಯವು ಅವರಿಗೆ ಹಾನಿಯಾಗದಂತೆ ನೋಡಿಕೊಳ್ಳುವುದೇ ಆಗಿದೆ.
“ನಮ್ಮ ಪೂರ್ವಜರು ಪ್ರಕೃತಿಯೊಂದಿಗೆ ಆರೋಗ್ಯಕರ ಸಹಬಾಳ್ವೆಯನ್ನು ಕಾಪಾಡಿಕೊಳ್ಳಲು ನಮಗೆ ಸಹಾಯ ಮಾಡುವ ಸಂಪ್ರದಾಯಗಳನ್ನು ಹಾಕಿ ಕೊಟ್ಟಿದ್ದಾರೆ” ಎಂದು ಅವರು ಹೇಳುತ್ತಾರೆ. ಕಳೆದ ಒಂದು ದಶಕದಲ್ಲಿ BRT ಯಲ್ಲಿ ಇದ್ದ ಹುಲಿಗಳ ಸಂಖ್ಯೆ 25 ರಿಂದ 68 ಕ್ಕೆ ಏರಿರುವುದು
ವನ್ಯಜೀವಿಗಳೊಂದಿಗಿನ ಅವರ ಸಾಮರಸ್ಯದ ಸಂಬಂಧದ ಪುರಾವೆಯಾಗಿದೆ. ಸೋಲಿಗ ಸಮುದಾಯದ 12,000 ಕ್ಕೂ ಹೆಚ್ಚು ಸದಸ್ಯರು ಜೇನು ಸಂಗ್ರಹಣೆ ಮತ್ತು ಇತರ ಮರವಲ್ಲದ ಅರಣ್ಯ ಉತ್ಪನ್ನಗಳಿಗಾಗಿ ಬಿಳಿರಂಗನ ಗಿರಿ ಬೆಟ್ಟವನ್ನು ಅವಲಂಬಿಸಿದ್ದಾರೆ.
ಕಾಡಿನಲ್ಲೇ ಹುಟ್ಟಿ ಅಲ್ಲೇ ಬೆಳೆದು ಬದುಕು ಕಟ್ಟಿಕೊಳ್ಳುವ ಸೋಲಿಗ ಸಮುದಾಯವೆಂದರೆ ನಗರವಾಸಿಗಳಿಗೆ ಒಂದು ದೊಡ್ಡ ಅಚ್ಚರಿ. ಇದೇ ಕಾರಣಕ್ಕಾಗಿ ‘ಇಂಡಿಯನ್ ಮ್ಯೂಸಿಕ್ ಎಕ್ಸ್‌ಪೀರಿಯನ್ಸ್ ಮ್ಯೂಸಿಯಂ’ ಮೇ 22 ರಂದು ‘ಸೋಲಿಗ ಸ್ಪಾಟ್‌ಲೈಟ್’ ಹೆಸರಿನ ಸೋಲಿಗರ ಜಾನಪದ ಆಚರಣೆ ಮತ್ತು ಪ್ರದರ್ಶನವನ್ನು ಆಯೋಜಿಸಿದೆ. ಅಲ್ಲಿ ಪ್ರೇಕ್ಷಕರು, ಪಕ್ಷಿಗಳು ಮತ್ತು ಅವರ ಸಂಸ್ಕೃತಿಯ ಬಗೆಗೆ ಸೋಲಿಗರು ಕಟ್ಟಿರುವ ಹಾಡುಗಳನ್ನು ಕೇಳಬಹುದು. ಸೋಲಿಗ ಜನರು ಹೊರಗಿನ ಪ್ರೇಕ್ಷಕರ ಮುಂದೆ ಪ್ರದರ್ಶನ ನೀಡುತ್ತಿರುವುದು ಬಹುಶಃ ಇದೇ ಮೊದಲು ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿರುವ ವಸ್ತುಸಂಗ್ರಹಾಲಯದ ನಿರ್ದೇಶಕಿ ಮಾನಸಿ ಪ್ರಸಾದ್, ಈ ಕಾರ್ಯಕ್ರಮದಲ್ಲಿ ನಗರವಾಸಿಗಳಿಗೆ ವಿವಿಧ ಪಕ್ಷಿಗಳ ಬಗ್ಗೆ ಮತ್ತು ಅವುಗಳ ಪರಿಸರ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳುವ ಅವಕಾಶ ಲಭ್ಯವಾಗುತ್ತದೆ ಅಂದಿದ್ದಾರೆ. ತಲೆತಲಾಂತರದಿಂದ ಕಾಡಿನೊಂದಿಗೆ ಅವಿನಾಭಾವ ಸಂಬಂಧ ಬೆಳೆಸಿಕೊಂಡಿರುವ ಸೋಲಿಗರ ಆಚಾರ, ವಿಚಾರಗಳನ್ನು ನಗರವಾಸಿಗಳಿಗೆ ತಲುಪಿಸುವ ಯತ್ನವಾಗಿ ಕಾಣುವ ಈ ಕಾರ್ಯಕ್ರಮ ಸಂಸ್ಕೃತಿಯ, ಕಲೆಯ ರಾಯಭಾರಿಗಳಾಗಿರುವ ಸೋಲಿಗರ ಮಹತ್ವವನ್ನು ಸರ್ಕಾರಕ್ಕೂ, ಇತರರಿಗೂ ಅರ್ಥಮಾಡಿಸಿ ಅವರ ಬದುಕಿನಲ್ಲಿ ಅಗತ್ಯವಾಗಿ ಆಗಲೇಬೇಕಾದ ಸುಧಾರಣೆಗೆ ಕಾರಣವಾದರೆ ಅಷ್ಟರ ಮಟ್ಟಿಗೆ ಕಾರ್ಯಕ್ರಮ ಯಶಸ್ವಿಯಾಗುತ್ತದೆ.