ಇಂದಿನ ದಿನ ಎಲ್ಲೆಡೆ ಜಾತಿ ಜಂಜಾಟವೇ ಹೆಚ್ಚು ಸದ್ದು ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಭಾವೈಕ್ಯತೆ ಬೆಸೆಯುವ ಶಿರಹಟ್ಟಿಯ ಫಕ್ಕೀರೇಶ್ವರ ಮಠದ ಜಾತ್ರೆ ಇಂದು ಪ್ರಸ್ತುತವೆನಿಸುತ್ತದೆ. ಇದಕ್ಕೆ ಕಾರಣ ಹಿಂದೂ-ಮುಸ್ಲೀಂರು ಸೇರಿ ಆಚರಿಸುವ ಮೂಲಕ ಇದೊಂದು ದೇಶದಲ್ಲಿಯೇ ಮಾದರಿ ಜಾತ್ರೆಯಾಗಿದೆ.
ಹೌದು ಇಂದಿನ ದಿನ ಜಾತಿಗೊಂದು ಮಠಗಳು ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಹಿಂದೂ-ಮುಸ್ಲೀಂ ಎರಡು ಧರ್ಮಗಳನ್ನು ಪ್ರತಿನಿಧಿಸುವ ಮಠವೊಂದು ಗದಗ ಜಿಲ್ಲೆ ಶಿರಹಟ್ಟಿಯಲ್ಲಿರುವುದು ಬಹುಶಃ ದೇಶದಲ್ಲಿಯೇ ಅಪರೂಪವಾಗಿದೆ.
ಹೆಸರೇ ಸೂಚಿಸುವಂತೆ ಫಕೀರ-ಈಶ್ವರ ಸೇರಿ ಫಕೀರೇಶ್ವರ ಮಠವೆಂದು ಹೆಸರು ಬಂದಿದೆ. ಈ ಭಾಗದಲ್ಲಿ ಫೀಕ್ಕಿರಪ್ಪ, ಫಕ್ಕೀರವ್ವ ಎನ್ನುವ ಹೆಸರು ಹಿಂದೂ, ಮುಸ್ಲಿಮರು ತಮ್ಮ ಮಕ್ಕಳಿಗೆ ಇಡುವ ಮೂಲಕ ಇನ್ನು ಸೌಹಾರ್ಧತೆಯನ್ನು ಜೀವಂತವಾಗಿ ಉಳಿಸಿಕೊಂಡಿದ್ದಾರೆ. ಇನ್ನು ಮಠದ ಆವರಣದಲ್ಲಿ ಒಂದೆಡೆ ನಗಾರಿ ಸದ್ದಿನೊಳಗೆ ಬಿಸ್ಮಲ್ಲಾ ಎನ್ನುವ ಮಂತ್ರ ಕೇಳಿ ಬಂದರೆ ಮತ್ತೊಂದೆಡೆ ಹರಹರ ಮಹಾದೇವನ ಜಪ.
ಇದೇ ಅಲ್ಲವೇ ಈ ನಾಡಿನ ಕೂಡಿ ಬಾಳುವ ಸಹಬಾಳ್ವೆಯ ಸಂಸ್ಕೃತಿ. ದ್ವೇಷ ಬಿಡು, ಪ್ರೀತಿ ಮಾಡು ಎನ್ನುವ ಸಂದೇಶವನ್ನು ನಾಡಿಗೆ ನೀಡಿದ್ದು ಶ್ರೀಮಠದ ಕರ್ತೃ ಜಗದ್ಗುರುಗಳು. ಹೀಗಾಗಿ ಇಂದೊಂದು ಭಾವೈಕ್ಯತೆ ಪೀಠ ಎಂದರೆ ಅತಿಶಯೋಕ್ತಿಯಾಗಕಾರದಯ. ಮಠಕ್ಕೆ ಬಂದು ಹಿಂದೂ ಆಗಲಿ ಅಥವಾ ಮುಸ್ಲೀಂ ಆಗಲಿ ಮಠದ ಆವರಣದಲ್ಲಿರುವ ದರ್ಗಾದಲ್ಲಿ ಸಕ್ಕರೆ ನೈವೇದ್ಯ ಕೊಟ್ಟು ಗರ್ಭ ಗುಡಿಯಲ್ಲಿ ಕಾಯಿ ಒಡೆದು ಕರ್ಪುರ ಬೆಳಗುವ ಮೂಲಕ ಕರ್ತೃ ಜಗದ್ಗುರುಗಳ ವಾಣಿಯಂತೆ ದ್ವೇಷ ಬಿಟ್ಟು ಪ್ರೀತಿ ಬಿತ್ತುವ ಕೆಲಸ ಇಲ್ಲಿ ನಿರಂತರವಾಗಿ ನಡೆಯುತ್ತಿದೆ.
ಜಾತ್ರೆ ಅಂಗವಾಗಿ ಎಲ್ಲರು ಒಟ್ಟುಗೂಡಿ ತೇರನೆಳೆದು ಸಂಭ್ರಮಿಸಿದರು. ಈ ತೇರಿನಂತೆ ಸಾಂಗವಾಗಿ ಎರಡೂ ಧರ್ಮಗಳ ಭಾವೈಕ್ಯತೆಯ ತೇರು ಸಾಂಗವಾಗಿ ಸಾಗಲಿ ಎನ್ನುವುದು ಸೌಹಾರ್ಧತೆಯನ್ನು ಬಯಸುವ ಪ್ರತಿ ಮನಸುಗಳ ಆಶಯವಾಗಿದೆ.