ನಾಯಕ ಫಾಫ್ ಡು ಪ್ಲೆಸಿಸ್ ಅರ್ಧಶತಕ ಹಾಗೂ ಶ್ರೀಲಂಕಾ ಸ್ಪಿನ್ನರ್ ವಹಿಂದು ಹಸರಂಗ ಅವರ ಮಾರಕ ದಾಳಿ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 67 ರನ್ ಗಳ ಭಾರೀ ಜಯ ಗಳಿಸಿದೆ.
ಮುಂಬೈ ವಾಂಖೇಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 3 ವಿಕೆಟ್ ಗೆ 192 ರನ್ ಗಳಿಸಿದರೆ, ಸನ್ ರೈಸರ್ಸ್ ಹೈದರಾಬಾದ್ ತಂಡ 19.2 ಓವರ್ ಗಳಲ್ಲಿ 125 ರನ್ ಗೆ ಆಲೌಟಾಯಿತು.
ಈ ಗೆಲುವಿನೊಂದಿಗೆ ಆರ್ ಸಿಬಿ ಆಡಿದ 12 ಪಂದ್ಯಗಳಿಂದ 7 ಜಯ ಹಾಗೂ 5 ಸೋಲಿನೊಂದಿಗೆ 14 ಅಂಕ ಸಂಪಾದಿಸಿ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡ 11 ಪಂದ್ಯಗಲ್ಲಿ 5 ಜಯ ಹಾಗೂ 6 ಸೋಲಿನೊಂದಿಗೆ 10 ಅಂಕ ಗಳಿಸಿ 6ನೇ ಸ್ಥಾನದಲ್ಲಿದೆ.
ಹೈದರಾಬಾದ್ ತಂಡ ಮೊದಲ ಓವರ್ ನಲ್ಲೇ 2 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ನಂತರ ರಾಹುಲ್ ತ್ರಿಪಾಠಿ ಮತ್ತು ಏಡೆನ್ ಮರ್ಕರಂ 3ನೇ ವಿಕೆಟ್ ಗೆ 49 ರನ್ ಜೊತೆಯಾಟ ನಿಭಾಯಿಸಿ ಕುಸಿತ ತಡೆದರು.

ತ್ರಿಪಾಠಿ 37 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 58 ರನ್ ಗಳಿಸಿದರೆ, ಮರ್ಕರಂ 27 ಎಸೆತಗಳಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್ ನೊಂದಿಗೆ 21 ರನ್ ಬಾರಿಸಿ ಔಟಾದರು. ನಿಕೊಲಸ್ ಪೂರನ್ 19 ರನ್ ಗಳಿಸಿ ಔಟಾಗುತ್ತಿದ್ದಂತೆ ತಂಡ ನಾಟಕೀಯ ಕುಸಿತ ಅನುಭವಿಸಿ ಸೋಲುಂಡಿತು.
ಹಸರಂಗ 5 ವಿಕೆಟ್ ಪಡೆದು ಮಿಂಚಿದರೆ, ಜೋಸ್ ಹ್ಯಾಜಲ್ ವುಡ್ 2 ವಿಕೆಟ್ ಪಡೆದರೆ, ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಹರ್ಷಲ್ ಪಟೇಲ್ ತಲಾ 1 ವಿಕೆಟ್ ಗಳಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆರ್ ಸಿಬಿ ಮೊದಲ ಎಸೆತದಲ್ಲೇ ವಿರಾಟ್ ಕೊಹ್ಲಿ ಕಳೆದುಕೊಂಡರೂ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ರಜತ್ ಪಟಿಡರ್ 2ನೇ ವಿಕೆಟ್ ಗೆ 105 ರನ್ ಜೊತೆಯಾಟದ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
ನಾಯಕ ಫಾಫ್ ಡು ಪ್ಲೆಸಿಸ್ 50 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 73 ರನ್ ಬಾರಿಸಿ ಔಟಾಗದೇ ಉಳಿದರೆ, ರಜತ್ ಪಟಿದರ್ 38 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 48 ರನ್ ಗಳಿಸಿದ್ದಾಗ ಔಟಾಗಿದ 2 ರನ್ ನಿಂದ ಅರ್ಧಶತಕ ವಂಚಿತರಾದರು.
ದಿನೇಶ್ ಕಾರ್ತಿಕ್ 8 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 1 ಬೌಂಡರಿ ಸೇರಿದ 30 ರನ್ ಸಿಡಿಸಿದರೆ, ಗ್ಲೆನ್ ಮ್ಯಾಕ್ಸ್ ವೆಲ್ 24 ಎಸೆತಗಳಲ್ಲಿ 33 ರನ್ ಗಳಿಸಿ ಅಬ್ಬರಿಸಿದರೆ ಅವರನ್ನು ಮೀರಿಸುವಂತೆ ಅಬ್ಬರಿಸಿದರು.






