ಮಸೀದಿಗಳ ಮೇಲಿನ ಅನಧಿಕೃತ ಧ್ವನಿವರ್ಧಕಗಳನ್ನು ತೆರವುಗೊಳಿಸುವಂತೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇದೇ ಮೇ 9 ರಿಂದ ಗದಗ ಮಾತ್ರವಲ್ಲದೇ ರಾಜ್ಯಾದ್ಯಂತ ಆಜಾನ್ ಸಮಯದಲ್ಲೆ ದೇವಸ್ಥಾನಗಳಲ್ಲಿ ಭಕ್ತಿಗೀತೆ, ಭಜನೆಯನ್ನು ಧ್ವನಿವರ್ಧಕದ ಮೂಲಕ ಮೊಳಗಿಸಲಾಗುವುದು ಎಂದು ಶ್ರೀರಾಮ ಸೇನೆ ಧಾರವಾಡ ವಿಭಾಗೀಯ ಸಂಚಾಲಕ ರಾಜು ಖಾನಪ್ಪನವರ ತಿಳಿಸಿದರು.
ಗದಗ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸೀದಿಗಳ ಮೇಲಿನ ಅನಧಿಕೃತ ಧ್ವನಿವರ್ಧಕ ತೆರವುಗೊಳಿಸುವಂತೆ ೨೦೨೧ ಅಕ್ಟೋಬರ್ ತಿಂಗಳಲ್ಲಿ ಎರಡು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೂ ಪರಿಸರ ಇಲಾಖೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಹಿಂದುಗಳ ಕಾರ್ಯಕ್ರಮ ಆರಂಭಗೊಳ್ಳುವ ಮುನ್ನವೇ ಪ್ರಕರಣ ದಾಖಲಿಸಿಕೊಳ್ಳುವ ಅಧಿಕಾರಿಗಳು, ಮಸೀದಿಗಳ ಮೇಲಿನ ಧ್ವನಿವರ್ಧಕ ತೆರವಿಗೆ ಯಾಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ಅತಿಯಾದ ಶಬ್ಧದಿಂದ ಜನರ ಆರೋಗ್ಯದ ಮೇಲೆ ವ್ಯಕ್ತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಅದರಲ್ಲೂ ಶಾಲೆ, ಆಸ್ಪತ್ರೆ ಸಮೀಪದಲ್ಲಿರುವ ಮಸೀದಿಗಳು ಜನರ ಆರೋಗ್ಯದ ಬಗ್ಗೆ ಕನಿಷ್ಠ ಕಾಳಜಿ ಇಲ್ಲದಂತೆ ಜೋರಾಗಿ ಶಬ್ಧ ಮಾಡುವುದು ಸರಿಯಲ್ಲ. ಹೀಗಾಗಿ ಸರಕಾರ ಕೇವಲ ಮಸೀದಿ ಮಾತ್ರವಲ್ಲದೇ, ಮಂದಿರ, ಚರ್ಚ್ ಅನೇಕ ಕಡೆಗಳಲ್ಲಿ ಶಬ್ಧ ಮಾಲಿನ್ಯ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗದಗ ಬೆಟಗೇರಿಯಲ್ಲಿ ಸಂವಿಧಾನ ರಕ್ಷಣೆಗಾಗಿ ಅನೇಕ ಜನ ಹೋರಾಟ ಮಾಡುತ್ತಿದ್ದಾರೆ. ೫೦ ಡೆಸಿಬಲ್ ಶಬ್ಧದ ಮಿತಿಯನ್ನು ಮೀರಿಯೂ ಮಸೀದಿಗಳಲ್ಲಿ ಧ್ವನಿವರ್ಧಕ ಬಳಸಲಾಗುತ್ತಿದೆ. ಈ ವಿಷಯದಲ್ಲಿ ಸುಪ್ರಿಂಕೋರ್ಟ್ ನೀಡಿರುವ ತೀರ್ಪನ್ನು ಮಸೀದಿಗಳು ಪಾಲಿಸುತ್ತಿಲ್ಲ. ಆ ಮೂಲಕ ಸಂವಿಧಾನಕ್ಕೆ ಅಗೌರವ ತೋರುತ್ತಿದ್ದಾರೆ. ಸಂವಿಧಾನ ರಕ್ಷಣೆ ಹೋರಾಟಗಾರರು ಸಂವಿಧಾನ ಉಳಿಸುವ ಈ ಹೋರಾಟದಲ್ಲಿ ಭಾಗಿಯಾಗಬೇಕು, ಇಲ್ಲವೇ ಪ್ರತ್ಯೇಕವಾಗಿ ಹೋರಾಟ ಮಾಡಿ ಸಂವಿಧಾನ ಉಳಿಸುವ ಕೆಲಸ ಮಾಡಬೇಕು ಎಂದು ಪ್ರಗತಿಪರ ಸಂಘಟನೆಗಳ ಮುಖಂಡರ ಕುರಿತಾಗಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮುತ್ತಣ್ಣ ಪವಾಡಶೆಟ್ಟರ್, ಸೋಮು ಗುಡಿ, ಮಹೇಶ ರೋಖಡೆ, ಸತೀಶ ಕುಂಬಾರ, ಕಿರಣ ಹಿರೇಮಠ, ಬಸವರಾಜ್ ಕುರ್ತಕೋಟಿ, ವೆಂಕಟೇಶ ಪೂಜಾರ ಇತರರು ಉಪಸ್ಥಿತರಿದ್ದರು..











