ಹಿಂದುತ್ವ ರಾಜಕಾರಣದ ಪ್ರಮುಖ ಕಾನೂನುಗಳಲ್ಲಿ ಒಂದಾಗಿರುವ ಗೋ ಹತ್ಯೆ ನಿಷೇಧ ಕಾಯ್ದೆ, ರೈತರ ಪಾಲಿಗೆ ಅನಗತ್ಯ ನಷ್ಟ ಹಾಗೂ ಹೊರೆಯನ್ನು ತಂದಿಟ್ಟಿದೆ. ಜಾನುವಾರು ವ್ಯಾಪಾರದಲ್ಲಿ ತೊಡಗಿಕೊಂಡಿರುವ ಸಾವಿರಾರು ವರ್ತಕರಿಗೆ, ಅದರ ಕಾರ್ಮಿಕರಿಗೆ ಅವರ ಹೊಟ್ಟೆಪಾಡನ್ನು ಕಿತ್ತುಕೊಂಡಾಗಿದೆ. ಹೀಗೆ ತಮ್ಮ ವೃತ್ತಿಯನ್ನು ಕಳೆದುಕೊಂಡವರಲ್ಲಿ ದಲಿತರು ಮತ್ತು ಮುಸ್ಲಿಮರೇ ಅಧಿಕ. ಗೋಹತ್ಯೆ ನಿಷೇಧ ಕಾಯ್ದೆ ಹೇಗೆ ಬಡ ರೈತರ ಹೊಟ್ಟೆ ಮೇಲೆ ಹೊಡೆದಿದೆ ಎನ್ನುವುದು ಈ ಸ್ಟೋರಿ..
ಹೆಸರು ನಂಜಯ್ಯ, 52 ವರ್ಷ ಪ್ರಾಯ. ಮೈಸೂರು ಜಿಲ್ಲೆಯ ಸಿಂಧುವಳ್ಳಿ ಗ್ರಾಮದವರು. ಅವರ ಗ್ರಾಮದ ಸುತ್ತಮುತ್ತಲಿನ ಹಳ್ಳಿಯಲ್ಲೆಲ್ಲಾ ಜಾನುವಾರು ಸತ್ತರೆ ಕರೆ ಹೋಗುವುದು ನಂಜಯ್ಯ ಅವರಿಗೆ. ಆಸುಪಾಸಿನ ಹಳ್ಳಿಯಲ್ಲಿ ಸತ್ತ ದನ ಕರುಗಳ ಚರ್ಮ ಸುಲಿಯುವುದು ನಂಜಯ್ಯ ವೃತ್ತಿ. ಬಳಿಕ ಅದರ ಕಳೇಬರವನ್ನು ಮಣ್ಣು ಮಾಡಿ ಹಳ್ಳಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಪೌರ ಕಾರ್ಮಿಕ.
ತಮ್ಮ ಮನೆಯ ಸಮೀಪವಿರುವ ಬಯಲೇ ನಂಜಯ್ಯ ಅವರ ಕರ್ಮಭೂಮಿ, ಅವರು ಅಲ್ಲಿ ಸತ್ತ ಜಾನುವಾರುಗಳ ಚರ್ಮ ಸುಲಿಯುತ್ತಾರೆ. ಅದರಿಂದ ಬರುವ ಆದಾಯದಲ್ಲೇ ಅವರ ದಿನನಿತ್ಯದ ಖರ್ಚು. ಎಳಸು ದನಗಳ ಚರ್ಮ ಚರ್ಮವನ್ನು 15 ನಿಮಿಷದಲ್ಲಿ ಸುಲಿಯಬಲ್ಲ ಅವರಿಗೆ, ಸಂಪೂರ್ಣ ಬೆಳೆದ ಎತ್ತು ಅಥವ ಕೋಣದ ಚರ್ಮ ಸುಲಿಯಲು ಕನಿಷ್ಟ ಒಂದು ಗಂಟೆ ಬೇಕಾಗುತ್ತದೆ. ಹೀಗೆಂದು ತಿಳಿಸಿದವರು ಅವರೇ. ಗ್ರಾಮದಲ್ಲಿ ಎಲ್ಲೇ ಜಾನುವಾರು ಸತ್ತು ಬಿದ್ದರೂ ಅದರ ವಿಲೇವಾರಿಗೆ ಗ್ರಾಮ ಪಂಚಾಯತ್ ಸದಸ್ಯರು ಮಂಜಯ್ಯ ಅವರಿಗೆ ಕರೆ ಮಾಡುತ್ತಾರೆ.

ಆದರೆ ಕಳೆದ ವರ್ಷದಲ್ಲಿ ಬಿಜೆಪಿ ಸರ್ಕಾರವು ತಂದು ಜಾನುವಾರು ಹತ್ಯೆ ನಿಷೇಧ ಕಾಯ್ದೆಯು ಅವರ ಬದುಕಿನ ಮಾರ್ಗೋಪಾಯವನ್ನು ಕಿತ್ತುಕೊಂಡಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದ ಬಳಿಕ ನಂಜಯ್ಯ ಅವರು ಒಂದೇ ಒಂದು ಸತ್ತ ಜಾನುವಾರಿನ ಚರ್ಮವನ್ನು ಸುಲಿದಿಲ್ಲ. ಬದಲಾಗಿ ಅದನ್ನು ಹಾಗೆಯೇ ಮಣ್ಣು ಮಾಡುತ್ತಿದ್ದಾರೆ. ಗೋ ರಕ್ಷಣೆಯ ಹೆಸರಿನಲ್ಲಿ ಬಂದ ಕಾಯ್ದೆ ಬಳಿಕ ಸತ್ತ ಹಸುಗಳ ಚರ್ಮವನ್ನು ಸುಲಿಯುವ ಬದಲು ತೆರೆದ ಬರಡು ಭೂಮಿಯಲ್ಲಿ ಹಾಗೆಯೇ ಬಿಡುತ್ತಿದ್ದಾರೆ.
ಪರಿಶಿಷ್ಟ ಜಾತಿಯ ʼಜಾಡುಮಲ್ಲಿʼ ವರ್ಗಕ್ಕೆ ಸೇರಿದ ನಂಜಯ್ಯ ಅವರ ಕುಟುಂಬದ್ದು ತಲೆಮಾರುಗಳಿಂದ ಜಾನುವಾರುಗಳ ಚರ್ಮ ಸುಳಿಯುವ ವೃತ್ತಿ. ಕರ್ನಾಟಕ ಸರ್ಕಾರದ ಜಾರಿಗೆ ತಂದ ವಿವಾದಾತ್ಮಕ ಕಾನೂನು ಬಳುವಳಿಯಾಗಿ ಬಂದ ವೃತ್ತಿಯನ್ನು ಮುಂದುವರೆಸದಂತೆ ತಡೆದಿದೆ.
ಈ ಕಾನೂನನ್ನು ‘ಗೋಮಾಂಸ ನಿಷೇಧ’ ಎಂದು ಬಣ್ಣಿಸಲಾಗಿದ್ದರೂ, ಇತರ ರಾಜ್ಯಗಳಿಂದ ಗೋಮಾಂಸ ತರಲು ಕಾಯಿದೆ ನಿರ್ಬಂಧಿಸದ ಕಾರಣ ಕರ್ನಾಟಕದಲ್ಲಿ ಗೋಮಾಂಸ ಇನ್ನೂ ಲಭ್ಯವಿದೆ. ಆದರೆ, ಈ ಕಾನೂನಿಂದಾಗಿ ಗ್ರಾಮೀಣ ಭಾಗದ ಸಣ್ಣ ಪುಟ್ಟ ರೈತರು, ಚರ್ಮದ ಕೆಲಸಗಾರರು ಮತ್ತು ಮಾಂಸ ಉದ್ಯಮಗಳಲ್ಲಿ ತೊಡಗಿರುವ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಕಳೆದೊಂದು ವರ್ಷದಿಂದ ಗೊಡ್ಡು ಜಾನುವಾರುಗಳನ್ನು ಮಾರಾಟ ಮಾಡಲಾಗದೆ ಮೈಸೂರಿನ ಟಿ ನರಸೀಪುರದ ರೈತ ರಾಮ ಬಸವಯ್ಯ ಕಷ್ಟ ಅನುಭವಿಸುತ್ತಿದ್ದಾರೆ. ಹಳ್ಳಿಯಲ್ಲಿ ನಡೆಯುವ ಜಾನುವಾರು ಮಾರಾಟದ ಜಾತ್ರೆಗೆ ನಿಯಮಿತವಾಗಿ ಹಾಜರಾಗುವ ಅವರಿಗೆ ತಮ್ಮ ಜಾನುವಾರುಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ.
“ನಮ್ಮ ಜಾತ್ರೆಯಲ್ಲಿ ವ್ಯಾಪಾರ ಗಣನೀಯವಾಗಿ ಕುಸಿದಿದೆ. ಹಾಲು ನೀಡದ, ಕರು ಹಾಕದ, ಮುದಿ ಹಸುಗಳು ಅಥವಾ ಅನಾರೋಗ್ಯ ಪೀಡಿತ ಹಾಗೂ ಕೃಷಿಗೆ ಉಪಯೋಗವಾಗದ ಜಾನುವಾರುಗಳನ್ನು ಮಾರಾಟ ಮಾಡಲು ಇಂತಹ ಜಾತ್ರೆಗಳಿಗೆ ಬರುತ್ತೇವೆ. ಆದರೆ, ಇಲ್ಲಿ ಈಗ ಜಾನುವಾರು ಮಾರಾಟವಾಗುತ್ತಿಲ್ಲ ಮೊದಲಿನ ಹಾಗೆ’ ಎನ್ನುತ್ತಾರೆ ರಾಮ ಬಸವಯ್ಯ.
“ಕರ್ನಾಟಕದಾದ್ಯಂತ ಇಂತಹ 2,000 ದನಗಳ ಜಾತ್ರೆಗಳು ನಡೆಯುತ್ತವೆ” ಎಂದು ಹೇಳುವ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ, ಪ್ರಯೋಜನಕ್ಕೆ ಬಾರದ ಜಾನುವಾರುಗಳನ್ನು ರೈತ ಮಾರಬೇಕಾಗುತ್ತದೆ. ಇಲ್ಲದಿದ್ದರೆ, ರೈತನು 6-7 ವರ್ಷಗಳ ಕಾಲ ಅನುತ್ಪಾದಕ ಜಾನುವಾರನ್ನು ಸಾಕಬೇಕಾಗುತ್ತದೆ, ಪ್ರತಿದಿನ ಪ್ರಾಣಿಗಳಿಗೆ ಆಹಾರವನ್ನು ನೀಡಲು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಒಬ್ಬ ಸಾಮಾನ್ಯ ರೈತ ಅದನ್ನು ಹೇಗೆ ಭರಿಸಬಲ್ಲ?” ಎಂದು ಪ್ರಶ್ನಿಸುತ್ತಾರೆ.

ವೀರಸಂಗಯ್ಯನವರ ಅಭಿಪ್ರಾಯವನ್ನು ಮೈಸೂರಿನ ದೊಡ್ಡಕನ್ಯಾ ಗ್ರಾಮದ ಮತ್ತೊಬ್ಬ ರೈತ ರವಿಚಂದ್ರ ಒಪ್ಪುತ್ತಾರೆ. ತನ್ನ ಮನೆಯಲ್ಲಿ ನಾಲ್ಕು ಹಸುಗಳನ್ನು ಸಾಕುತ್ತಿರುವ ಅವರು, ಅವುಗಳನ್ನು ನೋಡಿಕೊಳ್ಳಲು ದಿನಕ್ಕೆ 600 ರೂ. ಖರ್ಚಾಗುವುದಾಗಿ ತಿಳಿಸಿದ್ದಾರೆ.
“12 ವರ್ಷದ ನಂತರ ಹಸುವನ್ನು ಮಾರಾಟ ಮಾಡುವುದು ಸಾಮಾನ್ಯ. ಜಾನುವಾರುಗಳ ಮೇವಿಗಾಗಿ ಖರ್ಚು ಮಾಡಲು ನನಗೆ ಸಾಧ್ಯವಿಲ್ಲ. ನಾವು ಜಾತ್ರೆಗೆ ಹೋಗುತ್ತೇವೆ ಆದರೆ, ಅವನ್ನು ಮಾರಾಟ ಮಾಡದೆ ಹಿಂತಿರುಗುತ್ತೇವೆ. ಏಕೆಂದರೆ ಈಗಿನ ಬೆಲೆಗಳು ತುಂಬಾ ಅಗ್ಗವಾಗಿದೆ ಎಂದು ರವಿಚಂದ್ರ ಹೇಳುತ್ತಾರೆ.
ಈ ವಿವಾದಿಕ ಕಾನೂನು ಬಂದ ಬಳಿಕ ಜಾನುವಾರು ಬೆಲೆ ಮಾರುಕಟ್ಟೆಯಲ್ಲಿ ಕುಸಿತವಾಗಿದೆ ಎಂದು ಮೈಸೂರಿನ ಮುಸ್ಲಿಂ ವ್ಯಾಪಾರಿಯೊಬ್ಬರು ಹೇಳಿದ್ದಾರೆ. ವಾರದ ಸಂತೆಗಳಲ್ಲಿ ಹಸುಗಳನ್ನು ಖರೀದಿಸುವ ಅನೇಕ ವ್ಯಾಪಾರಿಗಳು ಅವುಗಳನ್ನು ಕಸಾಯಿಖಾನೆ ಹಾಗೂ ಮಾಂಸದ ಅಂಗಡಿಗಳಿಗೆ ಕೊಂಡೊಯ್ಯುತ್ತಾರೆ, ಇದು ರೈತರಿಗೆ ಲಾಭದಾಯಕವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಜಾನುವಾರುಗಳನ್ನು ಸಾಗಿಸುವ ಅಥವಾ ಮಾರಾಟ ಮಾಡುವ ಮುಸ್ಲಿಮರ ಮೇಲೆ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ಮಾಡುತ್ತಿರುವುದರಿಂದ ಅವರು ಜಾನುವಾರು ವ್ಯಾಪಾರದಿಂದ ದೂರ ಸರಿದಿದ್ದಾರೆ. ಇದು ಕೃಷಿ ಸಂಬಂಧಿತ ಮಾರಾಟವಾಗುವ ಜಾನುವಾರುಗಳಿಗೂ ಎಫೆಕ್ಟ್ ನೀಡಿದೆ.
“ನಾವು ಕೃಷಿ ಉದ್ದೇಶಗಳಿಗಾಗಿ ಹಸುಗಳ ವ್ಯಾಪಾರವನ್ನು ಮುಂದುವರಿಸಲು ಬಯಸಿದ್ದೇವೆ. ಆದರೆ ಜಾನುವಾರು ಸಾಗಿಸುವ ಮುಸ್ಲಿಮರ ಮೇಲೆ ದಾಳಿಗಳು ನಡೆಯುತ್ತಿರುವಾಗ ಆ ವ್ಯಾಪಾರ ಮಾಡುವುದು ಈಗ ಕಷ್ಟ, ” ಎಂದು ವ್ಯಾಪಾರಿ ಹೇಳಿದ್ದಾರೆ.
ಜನವರಿ 2021 ರಲ್ಲಿ, ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಿಂದ ಮಂಗಳೂರಿಗೆ 12 ಹಸುಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕ ಅಬಿದ್ ಅಲಿ ಅವರನ್ನು ಮಾರ್ಗಮಧ್ಯೆ ಮೇಲೆ ಹಿಂದೂ ಸಂಘಟನೆ ಕಾರ್ಯಕರ್ತರು ಥಳಿಸಿದ್ದರು. ಕೃಷಿ ಉದ್ದೇಶಕ್ಕಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ದಾಖಲೆಗಳಿದ್ದರೂ ತನ್ನನ್ನು ಥಳಿಸಿದ್ದಾರೆ ಎಂದು ಆಬಿದ್ ಅಲಿ ಆರೋಪಿಸಿದ್ದಾರೆ.
ಮಾತ್ರವಲ್ಲ ಜಾನುವಾರು ಸಾಗಾಟದ ಆರೋಪದ ಮೇಲೆ ಪೊಲೀಸರಿಂದ ಬಂಧನಕ್ಕೊಳಗಾದರು. ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಪ್ರಕಾರ, 2020 ರಲ್ಲಿ ಕರ್ನಾಟಕದಲ್ಲಿ ದನದ ವ್ಯಾಪಾರಕ್ಕೆ ಸಂಬಂಧಿಸಿದ ಪ್ರಕರಣಗಳಿಗಾಗಿ 500 ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸ್ವಯಂ ಘೋಷಿತ ‘ಗೋ ರಕ್ಷಕ’ರಿಂದಾಗಿ ಕಾನೂನುಬದ್ಧ ಉದ್ದೇಶಗಳಿಗೂ ಜಾನುವಾರು ಸಾಗಿಸಲು ಸಾಧ್ಯವಾಗುತ್ತಿಲ್ಲ. ಒಂದೆಡೆ, ವ್ಯಾಪಾರಿಗಳು ಜಾನುವಾರುಗಳ ಖರೀದಿಗೆ ಹಣ ಪಾವತಿಸಿರುತ್ತಾರೆ ಮತ್ತು ಇನ್ನೊಂದು ಕಡೆ ಅನೈತಿಕ ದಾಳಿಯಿಂದಾಗಿ ಖರೀದಿಸಿದ ಜಾನುವಾರುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಭಯಕ್ಕೆ ಹೆದರಿ ನ್ಯಾಯಬದ್ಧ ಜಾನುವಾರು ವ್ಯಾಪಾರಕ್ಕೂ ಮುಸ್ಲಿಂ ವರ್ತಕರು ಹಿಂದೆ ಸರಿಯುತ್ತಿದ್ದಾರೆ.
ಇನ್ನು ಗೋಶಾಲೆಯಲ್ಲಿ ಸಾಕುತ್ತೇವೆ ಎನ್ನುವ ಸರ್ಕಾರದ ಬಡಾಯಿ ಅಷ್ಟರಲ್ಲೇ ಇದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಗೋಶಾಲೆಗಳನ್ನು ಸ್ಥಾಪಿಸುವ ಮೂಲಕ ರೈತರ ಮೇಲಿನ ಹೊರೆಯನ್ನು ಕಡಿಮೆ ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿದ್ದರೂ, ಕಾನೂನನ್ನು ಜಾರಿಗೊಳಿಸಿದ ಮೊದಲ ಒಂಬತ್ತು ತಿಂಗಳಿನಲ್ಲಿ ಯಾವುದೇ ಸರ್ಕಾರಿ ಗೋಶಾಲೆಗಳನ್ನು ತೆರೆಯಲಾಗಿಲ್ಲ ಎಂದು ಆರ್‌ಟಿಐ ಮಾಹಿತಿ ಹೇಳಿದೆ.
ರಾಜ್ಯ ಸರ್ಕಾರವು ಸರ್ಕಾರೇತರ ಗೋಶಾಲೆಗಳಿಗೆ ಅನುಪಯುಕ್ತ ಜಾನುವಾರುಗಳನ್ನು ಬಿಡಲು ರೈತರನ್ನು ಕೇಳಿದೆ. ಹೊಸ ಕಾನೂನಿನಡಿಯಲ್ಲಿ ಪೊಲೀಸರು ವಶಪಡಿಸಿಕೊಂಡ ಜಾನುವಾರುಗಳನ್ನು ಸಹ ಖಾಸಗಿ ಗೋಶಾಲೆಗೆ ನೀಡಲಾಗುತ್ತದೆ. ಆದರೆ, ಹೀಗೆ ಬರುವ ಹೆಚ್ಚುವರಿ ಗೋವುಗಳ ಆರೈಕೆಗಾಗಿ ರಾಜ್ಯ ಸರ್ಕಾರದಿಂದ ಸಿಗುವ ನೆರವು ಪುಡಿಗಾಸು, ಅದು ಜಾನುವಾರುಗಳ ನಿರ್ವಹಣೆಯ ವೆಚ್ಚವನ್ನು ಭರಿಸುವುದಿಲ್ಲ ಎಂದು ಗೋಶಾಲೆ ನಿರ್ವಾಹಕರು ಹೇಳಿದ್ದಾರೆ.
ಗೋಶಾಲೆಗಳಲ್ಲಿ ಜಾನುವಾರು ನಿರ್ವಹಣೆಗೆ ರಾಜ್ಯ ಸರ್ಕಾರದ ರೂ. 70 ನಿಗದಿಪಡಿಸಿದೆ. ಆದರೆ, ಸರ್ಕಾರ ನೀಡುತ್ತಿರುವುದು ಕೇವಲ ರೂ. 17.50. ಇದರಿಂದ ಖರ್ಚು ಸರಿದೂಗಿಸಲು ಸಾಧ್ಯವಿಲ್ಲ. ನಾವು ಒಂದು ಹಸುವನ್ನು ನಿರ್ವಹಿಸಲು ಹುಲ್ಲು ಮತ್ತು ಜಾನುವಾರುಗಳ ಮೇವು ಖರೀದಿಸಲು ದಿನಕ್ಕೆ 200 ರೂಪಾಯಿಗಳನ್ನು ಖರ್ಚು ಮಾಡುತ್ತೇವೆ” ಎಂದು ಮೈಸೂರಿನಲ್ಲಿ ಗೋಶಾಲೆ ನಿರ್ವಹಿಸುವ ಪಿಂಜ್ರಾಪೋಲ್ ಸೊಸೈಟಿಯ ಕಾರ್ಯದರ್ಶಿ ವಿನೋದ್ ಖಾಬಿಯಾ ಹೇಳುತ್ತಾರೆ. ಅವರ ಸೊಸೈಟಿಯು ಸುಮಾರು 4,000 ಗೋವುಗಳನ್ನು ಸಾಕುತ್ತಿದೆ.

“ಕಾಯ್ದೆ ಜಾರಿಯಾದ ಬಳಿಕ ನಮ್ಮ ಗೋಶಾಲೆಯಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಿದೆ ಆದರೆ ಅವುಗಳನ್ನು ನೋಡಿಕೊಳ್ಳಲು ಸರ್ಕಾರ ನೀಡಿದ ನೆರವು ಸಾಕಾಗುವುದಿಲ್ಲ. ನಾವು ಮಾಡುತ್ತಿರುವುದು ಸರ್ಕಾರದ ಕೆಲಸ ಆದರೆ ಹೆಚ್ಚಿನ ಹಣವನ್ನು ಸಂಗ್ರಹಿಸದೆ ನಾವು ಮುಂದುವರಿಯಲು ಸಾಧ್ಯವಿಲ್ಲ” ಎಂದು ವಿನೋದ್ ಹೇಳಿದ್ದಾರೆ.
ಆದರೆ, ರೈತರು ಸುಮ್ಮನೆ ಗೋಶಾಲೆಗಳಿಗೆ ಕೊಟ್ಟು ನಷ್ಟವನ್ನು ಮಾಡಿಕೊಳ್ಳಲು ಬಯಸುವುದಿಲ್ಲ. ರಾಮ ಬಸವ, ರವಿಚಂದ್ರ ಅವರಂತಹ ರೈತರು ಗೋಶಾಲೆಗಳಿಗೆ ಹಸ್ತಾಂತರಿಸುವುದಕ್ಕಿಂತ ಹಸುಗಳನ್ನು ಮಾರಲು ಆದ್ಯತೆ ನೀಡುತ್ತಾರೆ.
ʼನಾವು ಹಸುಗಳನ್ನು ಗೋಶಾಲೆಗಳಿಗೆ ಉಚಿತವಾಗಿ ನೀಡಲು ಸಾಧ್ಯವಿಲ್ಲ. ಅವುಗಳನ್ನು ಖರೀದಿಸಲು ವ್ಯಯಿಸಿದ ಹಣದ ಒಂದು ಭಾಗವನ್ನಾದರೂ ಮಾರಾಟ ಮಾಡಿ ಸರಿದೂಗಿಸಬೇಕು. ಶೀಘ್ರದಲ್ಲೇ ನಮ್ಮ ಹಸುಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಗೋಹತ್ಯೆ ಕಾಯಿದೆಯನ್ನು ಬೆಂಬಲಿಸುವವರಿಗೆ ಬೇಕಾಗಿರುವುದು ಇದೇನಾ?’ ಎಂದು ರವಿಚಂದ್ರ ಪ್ರಶ್ನಿಸಿದ್ದಾರೆ.