ಕೆಲವು ವರ್ಷಗಳ ಹಿಂದೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದ ಅಹಿತಕರ ಘಟನೆಯ ನಂತರವೂ ರಾಜ್ಯಾದ್ಯಂತ ಅಲ್ಲಲ್ಲಿ ಅತ್ಯಾಚಾರದ ಘಟನೆಗಳು ನಡೆಯುತ್ತಲೇ ಇದೆ. ಇದೀಗ ಮತ್ತೊಂದು ಘಟನೆ ಯುಪಿಯಲ್ಲಿ ನಡೆದಿದೆ ಎಂದು ಶಂಕಿಸಲಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೆಲಸದ ಮೊದಲ ದಿನವೇ ಈ ಘಟನೆ ನಡೆದಿದೆ. ಮಹಿಳೆಯ ಕುಟುಂಬಸ್ಥರು ಅತ್ಯಾಚಾರ ನಡೆದಿರುವ ಬಗ್ಗೆ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಪೋಷಕರ ದೂರಿನ ಮೇರೆಗೆ ಪೊಲೀಸರು ದೂರು ದಾಖಲಿಸಿಕೊಂಡು ಆಸ್ಪತ್ರೆಯ ಮಾಲೀಕ ಹಾಗೂ ಇನ್ನಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿ ಶಶಿ ಶೇಖರ್ ಸಿಂಗ್, ಮರಣೋತ್ತರ ಪರೀಕ್ಷೆ ನಡೆಸಿದ ವೇಳೆ ಅತ್ಯಾಚಾರ ನಡೆದಿರುವ ಬಗ್ಗೆ ಕಂಡು ಬಂದಿಲ್ಲ. ತನಿಖೆ ನಡೆಯುತ್ತಿದ್ದು ಯಾರೇ ಆದರು ಸಹ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಶುಕ್ರವಾರವಷ್ಟೇ ಮಹಿಳೆ ನ್ಯೂ ಜೀವನ್ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದರು ನಂತರ ಅವರ ಶವ ಆಸ್ಪತ್ರೆಯ ಮೇಲ್ಛಾವಣಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ ಎಂದು ಪ್ರಾಥನಿಕ ವರದಿಯಲ್ಲಿ ತಿಳಿದು ಬಂದಿದೆ.
ಸದ್ಯ ಪೊಲೀಸರು ಆಸ್ಪತ್ರೆಯ ಮಾಲೀಕ ಹಾಗೂ ಇನ್ನಿಬ್ಬರ ವಿರುದ್ದ ಎಪ್ಐಆರ್ ದಾಖಲಿಸಿ ತನಿಖೆಯನ್ನು ನಡೆಸುತ್ತಿದ್ದಾರೆ.