ಹಿಂದಿ ಭಾಷ ವಿಷಯ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿ ಎಲ್ಲ ರಾಜ್ಯದವರು ಈ ಸಂಬಂಧ ಒಮ್ಮತದಿಂದ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬ ತೀರ್ಮಾನಕ್ಕೆ ಬರಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಮಾತನಾಡಿದ ಅವರು, ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ಕನ್ನಡ ಚಿತ್ರ ನಟ ಸುದೀಪ್ ನಡುವಿನ ಹಿಂದಿ ಕನ್ನಡ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ‘ಯಾರೊಬ್ಬರೂ ಹೇಳಿದ ತಕ್ಷಣ ನಾವು ಹಿಂದಿಯನ್ನು ರಾಷ್ಟ್ರಭಾಷೆ ಎಂದು ಒಪ್ಪಿಕೊಳ್ಳಲು ಆಗುವುದಿಲ್ಲ. ರಾಷ್ಟ್ರಮಟ್ಟದಲ್ಲಿ ವಿಚಾರ ಚರ್ಚೆಯಾಗಬೇಕು. ಎಲ್ಲ ರಾಜ್ಯದವರು ಈ ಸಂಬಂಧ ಒಮ್ಮತದಿಂದ ಹೇಳಬೇಕು. ಯಾರೋ ಒಬ್ಬರು ಹೇಳಿದರು ಅಂತ ನಾವೇನು ಮಾಡಲು ಸಾಧ್ಯವಿಲ್ಲ. ನಮಗೆ ಕನ್ನಡ ಭಾಷೆಯೇ ಪ್ರಾಮುಖ್ಯ’ ಎಂದರು.
ಕೆಲ ದಿನಗಳ ಹಿಂದೆ ಕಿಚ್ಚ ಸುದೀಪ್ ತಮ್ಮ ಸಂದರ್ಶನದಲ್ಲಿ, ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದಿದ್ದರು. ಈ ಕುರಿತು ‘ನಿಮ್ಮ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದಾದರೆ, ನಿಮ್ಮ ಮಾತೃ ಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಏಕೆ ಬಿಡುಗಡೆ ಮಾಡುತ್ತೀರಿ? ಹಿಂದಿ ಇಂದು ಮತ್ತು ಎಂದೆಂದಿಗೂ ನಮ್ಮ ಮಾತೃ ಭಾಷೆ ಮತ್ತು ರಾಷ್ಟ್ರ ಭಾಷೆ ಆಗಿರುತ್ತದೆ ಎಂದು ಹೇಳಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ನಟ ಕಿಚ್ಚ ಸುದೀಪ್, ಅಜೇಯ್ ದೇವಗನ್ ಸರ್, ನೀವು ಹಿಂದಿಯಲ್ಲಿ ಕಳುಹಿಸಿದ ಸಂದೇಶ ನನಗೆ ಅರ್ಥವಾಯಿತು. ನಾವೆಲ್ಲರೂ ಗೌರವಿಸಿದ್ದೇವೆ, ಪ್ರೀತಿಸುತ್ತೇವೆ ಮತ್ತು ಹಿಂದಿಯನ್ನು ಕಲಿತಿದ್ದೇವೆ. ತಪ್ಪಿಲ್ಲ ಸರ್, ಆದರೆ ನನ್ನ ಪ್ರತಿಕ್ರಿಯೆಯನ್ನು ನಾನು ಕನ್ನಡದಲ್ಲಿ ಟೈಪ್ ಮಾಡಿದರೆ ಪರಿಸ್ಥಿತಿ ಏನಾಗಬಹುದು ಎಂದು ಆಶ್ಚರ್ಯ ಪಡುತ್ತಿದ್ದೇನೆ. ನಾವೂ ಭಾರತಕ್ಕೆ ಸೇರಿದವರಲ್ಲವೇ ಸರ್ ಎಂದು ಮತ್ತೊಂದು ಟ್ವೀಟ್ ಮಾಡಿ ತೀರಯಗೇಟು ನೀಡಿದ್ದರು.