ಮುಂಬರುವ ವಿಧಾನಸಭೆಗೆ ಚುನಾವಣೆ ನಡೆಸದೆ ಎಲ್ಲ ರಾಜಕೀಯ ಪಕ್ಷಗಳಿಂದ ಪ್ರತಿನಿಧಿಸುವ ಜನಪ್ರತಿನಿಧಿಗಳನ್ನು ನೇರವಾಗಿ ಆಯ್ಕೆ ಮಾಡಲು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬೆಂಗಳೂರು ಹೈಕೋರ್ಟ್ನ ಮುಖ್ಯ ನ್ಯಾ. ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ.
ಬೆಂಗಳೂರಿನ ಮುರಳಿ ಕೃಷ್ಣ ಬ್ರಹ್ಮಾನಂದಂ ಎಂಬುವವರು,2023ರಲ್ಲಿ ರಾಜ್ಯ ವಿಧಾಸನಸಭೆಗೆ ಚುನಾವಣೆ ನಡೆಸದೆ ಎಲ್ಲ ರಾಜಕೀಯ ಪಕ್ಷಗಳಿಂದ ಪ್ರತಿನಿಧಿಸುವ ಜನಪ್ರತಿನಿಧಿಗಳನ್ನು ಶಾಸಕರಾಗಿ ನೇರ ಆಯ್ಕೆ ಮಾಡಬೇಕು ಎಂದು ಕೋರಿದ್ದರು. ಅಲ್ಲದೇ ಜನಪ್ರತಿನಿಧಿಗಳ ಕಾಯ್ದೆ- 1951ರ ಅಡಿಯಲ್ಲಿ ವಿಧಾನ ಸಭೆ ಚುನಾವಣೆ ನಡೆಸುವ ವಿಚಾರವಾಗಿ ಅರ್ಜಿದಾರರು ತಮ್ಮ ಅರ್ಜಿ ಯಲ್ಲಿ ಕುಂದು ಕೊರತೆಗಳನ್ನು ವ್ಯಕ್ತಪಡಿಸಿದ್ದರು.

ಆದರೆ, ಕಾಯ್ದೆಯ ನಿಯಮಗಳನ್ನು ಪ್ರಶ್ನಿಸಿಲ್ಲ. ಅರ್ಜಿದಾರರು ಎತ್ತಿರುವ ವಿಚಾರಗಳ ಕುರಿತು ನ್ಯಾಯಾ ಲಯ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ. ಇದೊಂದು ತಪ್ಪು ಗ್ರಹಿಕೆಯಿಂದ ಸಲ್ಲಿಸಿರುವ ಅರ್ಜಿಯಾಗಿದ್ದು, ಅದನ್ನು ವಜಾ ಗೊಳಿಸಲಾಗುತ್ತಿದೆ ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.












