ಬೆಂಗಳೂರಿನ ಶಾಲೆಯೊಂದರಲ್ಲಿ ಬೈಬಲ್ ಹೇರಿಕೆ ಆರೋಪದ ನಡುವೆ, ರಾಜ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಏಪ್ರಿಲ್ 27 ಬುಧವಾರ, ಬೈಬಲ್ ಮತ್ತು ಕುರಾನ್‌ನಂತಹ ಧಾರ್ಮಿಕ ಪಠ್ಯಗಳನ್ನು ಭಗವದ್ಗೀತೆಯೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
“ಬೈಬಲ್ ಮತ್ತು ಕುರಾನ್ ಧಾರ್ಮಿಕ ಗ್ರಂಥಗಳು. ಧರ್ಮವನ್ನು ನಂಬುವವರು ಆಯಾ ಧಾರ್ಮಿಕ ಪಠ್ಯಗಳನ್ನು ಓದಬೇಕು ಎಂದು ಪುಸ್ತಕವು ಹೇಳುತ್ತದೆ. ಆದರೆ ಭಗವದ್ಗೀತೆ ಧರ್ಮದ ಬಗ್ಗೆ ಮಾತನಾಡುವುದಿಲ್ಲ ಬದಲಿಗೆ ಜೀವನ ನಡೆಸಲು ಅಗತ್ಯವಾದ ಮೌಲ್ಯಗಳ ಬಗ್ಗೆ ಮಾತ್ರ ಹೇಳುತ್ತದೆ” ಎಂದು ನಾಗೇಶ್ ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ನಾವು ಕುರಾನ್ ಮತ್ತು ಬೈಬಲ್‌ನಂತಹ ಇತರ ಧಾರ್ಮಿಕ ಪುಸ್ತಕಗಳೊಂದಿಗೆ ಭಗವದ್ಗೀತೆಯನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ನೀವು ಸ್ವಾಮಿ ವಿವೇಕಾನಂದ ಮತ್ತು ಇತರರಂತೆ ಯೇಸುವಿನ ಜೀವನದ ಬಗ್ಗೆ ಬೋಧಿಸಬಹುದು ಆದರೆ ವಿದ್ಯಾರ್ಥಿಗಳ ಮೇಲೆ ಧಾರ್ಮಿಕ ಪಠ್ಯವನ್ನು ಹೇರಬಾರದು” ಎಂದು ಸಚಿವ ನಾಗೇಶ್ ಹೇಳಿದ್ದಾರೆ.

ಏನಿದು ವಿವಾದ?
ಬೆಂಗಳೂರು ನಗರದ ಪಾಟರಿ ಟೌನ್ ನಲ್ಲಿರುವ ಕ್ಲಾರೆನ್ಸ್ ಶಾಲೆ ಬೈಬಲ್ ಕಡ್ಡಾಯ ಮಾಡಿರುವ ಆರೋಪ ಈಗ ಕೇಳಿ ಬಂದಿದ್ದು, ಆಕ್ರೋಶ ವ್ಯಕ್ತವಾಗುತ್ತಿದೆ. ಕ್ಲಾರೆನ್ಸ್ ಹೈ ಸ್ಕೂಲ್‌ನ ಪಠ್ಯಕ್ರಮದಲ್ಲಿ ಬೈಬಲ್ ಕಡ್ಡಾಯ ಮಾಡಲಾಗಿದ್ದು, ಹಿಂದೂ ಮಕ್ಕಳಿಗೆ ಒತ್ತಾಯದಿಂದ ಬೈಬಲ್ ಓದುವಂತೆ ಮಾಡಲಾಗುತ್ತಿದೆ ಎಂದು ಆರೋಪ ಮಾಡಲಾಗಿದೆ.
ಡೆಪ್ಯುಟಿ ಕಮಿಷನರ್ ಮತ್ತು ಬೆಂಗಳೂರು ನಗರ ಜಿಲ್ಲಾ ಮ್ಯಾಜಿಸ್ಟ್ರೇಟ್, ಜೆ ಮಂಜುನಾಥ್, ಮಕ್ಕಳ ಮೇಲೆ ಬಲವಂತವಾಗಿ ಬೈಬಲ್ ಹೇರಿದ್ದಾರೆ ಎಂದು ಕ್ಲಾರೆನ್ಸ್ ಪ್ರೌಢಶಾಲೆ ಮೇಲೆ ಆರೋಪ ಕೇಳಿ ಬಂದಿದ್ದು, ಈ ಕುರಿತು ವಿಚಾರಣೆಯನ್ನು ಪ್ರಾರಂಭಿಸಿದ್ದಾರೆ.
ಏಪ್ರಿಲ್ 25 ರಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (NCPCR) ಅಧಿಕಾರಿಗೆ ಬರೆದ ಪತ್ರದ ಪ್ರಕಾರ, ಶಾಲೆಯು ಬೈಬಲ್ ಅಧ್ಯಯನವನ್ನು ಕಡ್ಡಾಯಗೊಳಿಸಿ ಬೆಳಗಿನ ಧಾರ್ಮಿಕ ಪ್ರಾರ್ಥನೆ ಮತ್ತಿತರ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅಪ್ರಾಪ್ತ ವಯಸ್ಕರಿಗೆ ಸೂಚಿಸಿದ್ದುಎಂದು ಈ ಕುರಿತು ಸ್ಪಷ್ಟೀಕರಣ ಕೇಳಿದೆ.












