ಕ್ಲಾರೆನ್ಸ್ ಶಾಲೆಯಲ್ಲಿ ಮಕ್ಕಳಿಗೆ ಒತ್ತಾಯಪೂರ್ವಕ ಬೈಬಲ್ ಹೇರಿಕೆ ಪ್ರಕರಣವನ್ನ ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಇದು ರಾಜ್ಯ ಶಿಕ್ಷಣ ಕಾಯ್ದೆಯ ಉಲ್ಲಂಘನೆ ಎಂದಿರುವ ಶಿಕ್ಷಣ ಸಚಿವರು ಕಠಿಣ ಕ್ರಮದ ಮುನ್ಸೂಚನೆ ನೀಡಿದ್ದಾರೆ. ಇನ್ನೊಂದ್ಕಡೆ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಪಠ್ಯದ ಪರಿಶೀಲನೆ ಹೊಣೆಯನ್ನ ಬಿಇಓಗಳ ಹೆಗಲಿಗೆ ಹೊರಿಸಲಾಗಿದೆ.
ಕ್ಲಾರೆನ್ಸ್ ಶಾಲೆಯ ಬೈಬಲ್ ಹೇರಿಕೆ ವಿರುದ್ಧ ಸಿಡಿದೆದ್ದ ಶಿಕ್ಷಣ ಇಲಾಖೆ!
ಕಳೆದ ಎರಡು ದಿನಗಳಿಂದ ಭಾರಿ ಸದ್ದು ಮಾಡಿದ್ದ ಕ್ಲಾರೆನ್ಸ್ ಸ್ಕೂಲ್ ಬೈಬಲ್ ಹೇರಿಕೆ ವಿಚಾರವನ್ನ ಈಗ ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಇಂದು ಈ ಬಗ್ಗೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕ್ಲಾರೆನ್ಸ್ ಶಾಲೆ ಕಾನೂನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಕರ್ನಾಟಕ ಎಜುಕೇಷನ್ ಆ್ಯಕ್ಟ್ ಪ್ರಕಾರ ಯಾವುದೇ ಶಿಕ್ಷಣ ಸಂಸ್ಥೆ ಧಾರ್ಮಿಕ ಗ್ರಂಥಗಳನ್ನ ಪಠ್ಯವಾಗಿ ಬೋಧಿಸಬಾರದು. ಇದು ಕಾನೂನಿಗೆ ವಿರುದ್ಧ. ಸದ್ಯ ಕ್ಲಾರೆನ್ಸ್ ಶಾಲೆ ವಿದ್ಯಾರ್ಥಿಗಳಿಗೆ ಬೈಬಲ್ ಪಾಠ ಮಾಡ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿಯಿಂದ ವರದಿ ಕೇಳಿದ್ದೇವೆ. ಅವರು ವರದಿ ನೀಡಿದ ಬಳಿಕ ಮುಂದಿನ ಕಾನೂನು ಕ್ರಮಕೈಗೊಳ್ಳೋದಾಗಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನ ಕ್ರೈಸ್ತ ಮೆಷಿನರಿಗಳು ನಡೆಸುತ್ತಿವೆ. ಇಲ್ಲೂ ಸಹ ಇದೇ ರೀತಿ ಪಠ್ಯ ಬೋಧನೆ ಆಗ್ತಿರುವ ಬಗ್ಗೆ ಅನುಮಾನ ಇದೆ. ಹೀಗಾಗಿ ರಾಜ್ಯದ ಎಲ್ಲಾ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಪಠ್ಯ ಪರಿಶೀಲನೆಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಶಿಕ್ಷಣ ಸಚಿವರು ಘೋಷಿಸಿದ್ದಾರೆ. ಅಲ್ಲದೇ ಭಗವದ್ಗೀತೆ, ಹರಿಶ್ಚಂದ್ರನ ಕಥೆ ಹೀಗೆ ಸರ್ಕಾರ ಮಾರೆಲ್ ಶಿಕ್ಷಣ ಬೋಧಿಸೋ ವಿಚಾರಕ್ಕೂ ಇದಕ್ಕೂ ಸಂಬಂಧ ಇಲ್ಲ. ಕೆಲವರು ಭಗವದ್ಗೀತೆ ವಿಚಾರ ಬಂದಾಗ ಮಾತನಾಡುತ್ತಾರೆ. ಆದರೆ ಬೈಬಲ್ ವಿಚಾರ ಬಂದಾಗ ಸುಮ್ಮನಾಗುತ್ತಾರೆ. ಶಿಕ್ಷಣ ಇಲಾಖೆ ಮಾತ್ರ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳೋದಾಗಿ ತಿಳಿಸಿದರು.
ಸೂಕ್ತ ತನಿಖೆ ನಡೆಸುವಂತೆ ಡಿಸಿಗೆ NCPCR ಸೂಚನೆ!
ಇನ್ನು ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಬೋಧನೆ ವಿಚಾರವಾಗಿ ಹಿಂದೂ ಜನಜಾಗೃತಿ ಸಮಿತಿ NCPCRಗೆ ದೂರು ನೀಡಿತ್ತು. ಸದ್ಯ ಈ ದೂರಿನನ್ವಯ ನ್ಯಾಷನಲ್ ಕಮಿಷನ್ ಪಾರ್ ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್ ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ನಗರದ ಜಿಲ್ಲಾಧಿಕಾರಿಗಳಿಗೆ ಸೂಚನೆ ರವಾನಿಸಿದೆ. ತನಿಖೆಯ ವರದಿಯನ್ನ ಮುಂದಿನ 7 ದಿನಗಳೊಳಗಾಗಿ ಸಲ್ಲಿಸುವಂತೆ NCPCR ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ. ಒಟ್ಟಿನಲ್ಲಿ ಬಗವದ್ಗೀತೆ ಹಾಗೂ ಟಿಪ್ಪು ಪಠ್ಯ ಕಡಿತದಿಂದ ವಿಪಕ್ಷಗಳಿಗೆ ಆಹಾರವಾಗಿದ್ದ ಶಿಕ್ಷಣ ಇಲಾಖೆಗೆ ಈಗ ಕ್ಲಾರೆನ್ಸ್ ಶಾಲೆಯ ಬೈಬಲ್ ಅಸ್ತ್ರ ಸಿಕ್ಕಿದೆ. ಇದನ್ನೇ ವಿರೋಧ ಪಕ್ಷಗಳಿಗೆ ತಿರುಗುಬಾಣ ಮಾಡುವ ಸರ್ವಪ್ರಯತ್ನದಲ್ಲಿದೆ ಸರ್ಕಾರ.