ಹಿಜಾಬ್ ಗೊಂದಲದ ನಡುವೆಯೇ SSLC ಪರೀಕ್ಷೆ ಮುಗೀತು. ಈಗ ನಾಳೆಯಿಂದ ಸೆಕೆಂಡ್ ಪಿಯುಸಿ ಪರೀಕ್ಷೆಗಳು ಆರಂಭವಾಗ್ತಿದೆ. ಶಿಕ್ಷಣ ಇಲಾಖೆಗೆ ಮತ್ತೊಂದು ಟೆನ್ಷನ್ ಶುರುವಾಗಿದೆ. ಹಿಜಾಬ್ ಗೊಂದಲದ ನಡುವೆ SSLC ಪರೀಕ್ಷೆ ಸಾಂಗವಾಗಿ ಜರುಗಿತು. ಇದೀಗ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ವೃತ್ತಿಪರ ಕೋರ್ಸ್ ಗೆ ಪಿಯುಸಿ ಪರೀಕ್ಷೆ ಪ್ರಮುಖ ಘಟ್ಟ. ಮಕ್ಕಳಿಗೆ ಮುಂದಿನ ಭವಿಷ್ಯಕ್ಕೆ ಈ ಪರೀಕ್ಷೆ ತುಂಬಾ ಮುಖ್ಯ. ಹೀಗಾಗಿ ನಾಳೆಯಿಂದ ನಡೆಯುವ ಸೆಕೆಂಡ್ ಪಿಯುಸಿ ಪರೀಕ್ಷೆ ನಡೆಸಲು ಪಿಯು ಬೋರ್ಡ್ ಸಕಲ ಸಿದ್ಧತೆ ಮಾಡಿಕೊಂಡಿದೆ. ಕೊರೊನಾ ಕೇಸ್ ಕಡಿಮೆ ಇದ್ದರೂ ಆರೋಗ್ಯ ಇಲಾಖೆಯ SOP ಪ್ರಕಾರ ಪರೀಕ್ಷೆ ಕೇಂದ್ರಗಳನ್ನ ರೆಡಿ ಮಾಡಿದ್ದಾರೆ. ನಾಳೆಯಿಂದ ಶುರುವಾಗುವ ಪಿಯುಸಿ ಪರೀಕ್ಷೆಗೆ ಮೇ18ಕ್ಕೆ ಮುಗಿಯಲಿದೆ.
ನಾಳೆ ಮೊದಲ ಪರೀಕ್ಷೆ ತರ್ಕಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನ ವಿಷಯ ಇರಲಿದೆ. ನಾಳೆ ಬೆಳಗ್ಗೆ 10:15 ರಿಂದ ಮಧ್ಯಾಹ್ನ 1:30ರವರೆಗೆ ಪರೀಕ್ಷೆ ಮುಗಿಯಲಿದೆ. ಮೊದಲ ಪರೀಕ್ಷೆಗೆ ಒಟ್ಟು 6 ಲಕ್ಷದ 84 ಸಾವಿರ 255 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದು, ಈ ಪೈಕಿ 3 ಲಕ್ಷ 46 ಸಾವಿರ 936 ಬಾಲಕರು ಹಾಗೂ 3 ಲಕ್ಷ 37 ಸಾವಿರ 319 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. ರಾಜ್ಯಾದ್ಯಂತ ಒಟ್ಟು 1,076 ಕೇಂದ್ರಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಿದ್ದು, ರೆಗ್ಯುಲರ್ ವಿದ್ಯಾರ್ಥಿಗಳು 6,00,519, ಪುನರಾವರ್ತಿತ ಅಭ್ಯರ್ಥಿಗಳು 61,808 ಹಾಗೂ ಖಾಸಗಿ ಅಭ್ಯರ್ಥಿಗಳ ಸಂಖ್ಯೆ 21,928 ಇದೆ. ಎಕ್ಸಾಂ ಕೇಂದ್ರದ ಸುತ್ತ 144 ಸೆಕ್ಷನ್ ಜಾರಿ ಇರಲಿದ್ದು, 200 ಮೀಟರ್ ನಿಷೇದಾಜ್ಞೆ ಜಾರಿಯಾಗಿದೆ. ಪರೀಕ್ಷೆ ಪ್ರವೇಶ ಪತ್ರ ತೋರಿ KSRTC ಹಾಗೂ BMTC ಬಸ್ ನಲ್ಲಿ ಉಚಿತ ಸೇವೆ ಇರಲಿದೆ.

SSLC ರೀತಿಯಲ್ಲಿ ಪಿಯು ಪರೀಕ್ಷೆಗೂ ಸಮವಸ್ತ್ರ ನಿಯಮ ಜಾರಿಯಾಗಿದೆ. ಹಿಜಾಬ್ ಧರಿಸಿ ಬಂದರೆ ಪರೀಕ್ಷೆಗೆ ಅವಕಾಶ ಇಲ್ಲ. ಹೀಗಾಗಿ ಪರೀಕ್ಷಾರ್ಥಿಗಳಿಗೆ ಸಮವಸ್ತ್ರ ಪಾಲನೆ ನಿಯಮ ಕಡ್ಡಾಯವಾಗಿದೆ. ಈಗಾಗಲೇ ಆಯಾ ಕಾಲೇಜುಗಳ ಅಭಿವೃದ್ಧಿ ಕಮಿಟಿಗಳಿಗೆ ಸೂಚನೆ ನೀಡಿದೆ. ಕೋರ್ಟ್ ಅದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಆರ್. ರಾಮಚಂದ್ರನ್ ತಿಳಿಸಿದ್ದಾರೆ. ಪಿಯು ಕಾಲೇಜಿನಲ್ಲಿ ಉಡುಪಿಯಿಂದ ಆರಂಭವಾದ ಹಿಜಾಬ್ ಗಲಾಟೆ ನಾಳೆ ನಡೆಯುವ ಪಿಯು ಪರೀಕ್ಷೆಯಲ್ಲಿ ಸದ್ದು ಮಾಡಬಹುದು. ಪ್ರಾಯೋಗಿಕ ಹಾಗೂ ಪೂರ್ವ ಸಿದ್ದತಾ ಪರೀಕ್ಷೆಯಂತೆಯೇ ಕೆಲವರು ಅಂತಿಮ ಪರೀಕ್ಷೆಗೆ ಗೈರಾಗ್ತಾರಾ ಎಂಬ ಪ್ರಶ್ನೆ ಸದ್ಯದ್ದು.