ಹಣದ ಸ್ವರೂಪದಲ್ಲಿ ಹೊಸ ಕ್ರಾಂತಿ ತರುವ ಕ್ರಿಪ್ಟೋಕರೆನ್ಸಿ ಎಂಬ ಆಧುನಿಕ ತಂತ್ರಜ್ಞಾನ ವಿಶ್ವಾದ್ಯಂತ ಗಮನ ಸೆಳೆಯುತ್ತಿದೆ. ಇದೇ ವೇಳೆ, ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕ್ರಿಪ್ಟೋಕರೆನ್ಸಿಯಿಂದ ಎರಗಬಹುದಾದ ಅಪಾಯಗಳ ಬಗ್ಗೆ ಎಚ್ಚರಿಸಿದ್ದಾರೆ.
ಹೌದು, ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಭೆಯೊಂದರಲ್ಲಿ ಭಾಷಣದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, “ಕ್ರಿಪ್ಟೋ ಕರೆನ್ಸಿಯಿಂದ ಎಲ್ಲಾ ರಾಷ್ಟ್ರಗಳಿಗೂ ಒದಗುವ ಅತಿ ದೊಡ್ಡ ಅಪಾಯ ಎಂದರೆ ಅದು ಹವಾಲಾ ಜಾಲ. ಹಾಗೆಯೇ, ಈ ಹವಾಲ ಮೂಲಕ ಭಯೋತ್ಪಾನೆ ಚಟುವಟಿಕೆಗಳಿಗೆ ಅಕ್ರಮವಾಗಿ ಹಣ ಹರಿವು ಆಗುತ್ತದೆ” ಎಂದು ಹೇಳಿದ್ದಾರೆ.
ಭಾರತದಲ್ಲಿ ಕ್ರಿಪ್ಟೊಕರೆನ್ಸಿ ಬಳಕೆ ಮತ್ತು ಅದನ್ನು ಅಧಿಕೃತಗೊಳಿಸುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಂಡಿಲ್ಲ. ಆದರೆ ಡಿಜಿಟಲ್ ರೂಪದ ಅಂತ ಕರೆನ್ಸಿಗಳ ವಹಿವಾಟಿನಿಂದ ಗಳಿಸುವ ಲಾಭಕ್ಕೆ ತೆರಿಗೆ ವಿಧಿಸಲಾಗಿದೆ ಎಂದು ಹೇಳಿದ್ದಾರೆ.

“ತಂತ್ರಜ್ಞಾನ ಬಳಸಿ ಹೊಸ ನಿಬಂಧನೆಗಳನ್ನ ರೂಪಿಸುವುದೊಂದೇ ಪರಿಹಾರ. ಕ್ರಿಪ್ಟೊಕರೆನ್ಸಿ ಜಾಲವನ್ನು ನಿಯಂತ್ರಿಸುವಷ್ಟು ಆ ತಂತ್ರಜ್ಞಾನವು ಸಮರ್ಥವಾಗಿರಬೇಕು. ಇದು ಬಹುತೇಕ ಸಾಧ್ಯವಿಲ್ಲ. ಈ ಸಮಸ್ಯೆಯನ್ನ ಯಾವುದಾದರೂ ಒಂದು ದೇಶ ನಿರ್ವಹಿಸುತ್ತೆ ಎಂದಾದರೆ ಅದು ಎಲ್ಲಾ ದೇಶಗಳಿಗೂ ಮಾದರಿ ಆಗಬೇಕು, ಎಲ್ಲರೂ ಆ ಬಗ್ಗೆ ಯೋಚಿಸಬೇಕಿದದೆ” ಎಂದು ನಿರ್ಮಲಾ ಸೀತಾರಾಮನ್ ಇಲ್ಲಿ ಅಭಿಪ್ರಾಯಪಟ್ಟಿದ್ದಾರೆ.






