ಯದುನಂದನ
ಬದಲಾವಣೆ ಜಗದ ನಿಯಮ ಎಂಬ ಮಾತು ರಾಜಕಾರಣದ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚು ಸೂಕ್ತ ಎನಿಸುತ್ತದೆ. 2012ರಲ್ಲಿ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಅವರನ್ನು ಸೇರಿಕೊಂಡು ಅಂದಿನ ವಿಧಾನಸಭಾ ಚುನಾವಣೆಗೆ ಮತ್ತು 2014ರ ಲೋಕಸಭೆ ಚುನಾವಣೆಗೆ ಅವರ ಪರ ಕಾರ್ಯತಂತ್ರ ರೂಪಿಸಿದ್ದ ಪ್ರಶಾಂತ್ ಕಿಶೋರ್ ಈಗ ಸತತ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷದ ಕದ ತಟ್ಟುತ್ತಿದ್ದಾರೆ. ಪ್ರಶಾಂತ್ ಕಿಶೋರ್ ಸ್ಟ್ರೈಕ್ ರೇಟ್ (ಯಶಸ್ಸಿನ ಪ್ರಮಾಣ) ಚೆನ್ನಾಗಿಯೇ ಇದೆ. ಆದರೂ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮನೆ ಬಾಗಿಲು ಕಾಯುತ್ತಿರುವುದೇಕೆ? ಎಂಬ ಕುತೂಹಲ ಕೂಡ ಇದೆ. ಇರಲಿ.
ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪರವಾಗಿ ಚುನಾವಣೆಗೆ ಕೆಲಸ ಮಾಡಿರುವುದು ಇದು ಮೊದಲೇನಲ್ಲ. ಅಥವಾ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಕಿವಿಗೆ ಅಪ್ಪಳಿಸುತ್ತಿರುವುದು ಕೂಡ ಹೊಸದೇನಲ್ಲ. ಆದರೆ ಈ ಬಾರಿ ವಿಷಯ Serious ಇದ್ದಹಾಗೆ ಕಾಣುತ್ತಿದೆ. ಏಕೆಂದರೆ ಈ ಬಾರಿ ಅವರು ಪ್ರತ್ಯೇಕವಾಗಿ ಹೋಗಿ ರಾಹುಲ್ ಗಾಂಧಿ ಅವರನ್ನೋ ಅಥವಾ ಸೋನಿಯಾ ಗಾಂಧಿ ಅವರನ್ನೋ ಭೇಟಿ ಮಾಡಿಕೊಂಡು ಬಂದಿಲ್ಲ. ನೇರಾನೇರ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಅದೂ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್, ಎ.ಕೆ. ಅಂಟೋನಿ, ದಿಗ್ವಿಜಯ ಸಿಂಗ್, ಮುಖುಲ್ ವಾಸ್ನಿಕ್, ಅಂಬಿಕಾ ಸೋನಿ ಮತ್ತಿತರರಿದ್ದ ಮಹತ್ವದ ಸಭೆಯಲ್ಲಿ. ಅದಕ್ಕೆ ಹೇಳಿದ್ದು Serious ಅಂತಾ…
ಈ ಸಭೆಯಲ್ಲಿ ಎರಡು ಪ್ರಮುಖ ಸಂಗತಿಗಳ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮೊದಲನೆಯದಾಗಿ 2024ರ ಲೋಕಸಭಾ ಚುನಾವಣೆಗೆ ಪ್ರಶಾಂತ್ ಕಿಶೋರ್ ಕಾರ್ಯತಂತ್ರ ರೂಪಿಸುವ ಬಗ್ಗೆ. ಎರಡನೆಯದಾಗಿ ಪ್ರಶಾಂತ್ ಕಿಶೋರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ.

ಮೊದಲ ವಿಷಯಕ್ಕೆ ಬರುವುದಾದರೆ 2024ರ ಲೋಕಸಭಾ ಚುನಾವಣೆ ಬೇರೆಲ್ಲಾ ಪಕ್ಷಗಳಿಗಿಂತ ಕಾಂಗ್ರೆಸಿಗೆ ಬಹಳ ನಿರ್ಣಾಯಕವಾದ ಚುನಾವಣೆ. 2014 ಮತ್ತು 2019ರಲ್ಲಿ ಕಾಂಗ್ರೆಸ್ Principal Opposition Party ಸ್ಥಾನಮಾನ ಪಡೆಯುವುದಕ್ಕೂ ಸಾಧ್ಯವಾಗಿರಲಿಲ್ಲ. ಈಗ 10 ವರ್ಷದ ಬಿಜೆಪಿ ಆಡಳಿತದ ವಿರುದ್ಧ ಪ್ರಬಲ ಹೋರಾಟ ರೂಪಿಸಿದರೆ ‘ತಾನು ಅಧಿಕಾರಕ್ಕೆ ಬರಲು ಸಾಧ್ಯವಾಗದಿದ್ದರೂ ಬಿಜೆಪಿಯೇತರ ಸರ್ಕಾರ ರಚನೆ ಆಗುವಂತೆ ಮಾಡಬಹುದೆಂಬ’ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯೋನ್ಮುಖವಾಗಬೇಕಿದೆ. ಅದಕ್ಕಾಗಿ ಪರಿಣಾಮಕಾರಿಯಾದ ಕಾರ್ಯತಂತ್ರವನ್ನು ರೂಪಿಸಬೇಕಾಗಿದೆ. ಸದ್ಯ ಕಾಂಗ್ರೆಸ್ ಪಕ್ಷದ ವಲಯದಲ್ಲಿ ಅಂತಹ ತಲೆಗಳು ಕಾಣುತ್ತಿಲ್ಲ. ಹಾಗಾಗಿ ಕಾಂಗ್ರೆಸ್ ಪಕ್ಷ ಪ್ರಶಾಂತ್ ಕಿಶೋರ್ ಮೇಲೆ ನಿರೀಕ್ಷೆ ಇಟ್ಟುಕೊಂಡಿದೆ.
ಇನ್ನೊಂದೆಡೆ ಪ್ರಶಾಂತ್ ಕಿಶೋರ್ ಮತ್ತು ಬಿಜೆಪಿ ನಡುವಿನ ಸಂಬಂಧ ಮತ್ತೆ ಸರಿಯಾಗಲಾರದ ಹಂತ ತಲುಪಿದಂತಿದೆ. ತೃಣಮೂಲ ಕಾಂಗ್ರೆಸ್ ಅಥವಾ ಆಮ್ ಆದ್ಮಿ ಪಕ್ಷಗಳಿಗಾಗಿ ಎಷ್ಟೇ ಬೆವರು ಹರಿಸಿದರೂ ನಿರೀಕ್ಷಿತ ಬೆಳೆ ತೆಗೆಯುವುದು ಸಾಧ್ಯವಿಲ್ಲ ಎಂಬ ಸಂಗತಿ ‘ಚುನಾವಣಾ ತಂತ್ರಜ್ಞ’ ಎಂದೇ ಖ್ಯಾತರಾಗಿರುವ ಪ್ರಶಾಂತ್ ಕಿಶೋರ್ ಗೆ ತಿಳಿಯದ ವಿಷಯವೇನಲ್ಲ. ಚುನಾವಣಾ ತಂತ್ರಜ್ಞನಾಗಿ ಅಸ್ತಿತ್ವ ಉಳಿಸಿಕೊಳ್ಳಲು ಮತ್ತು ರಾಷ್ಟ್ರ ರಾಜಕಾರಣದ ಪಡಸಾಲೆಯಲ್ಲಿ ಪ್ರಭಾವ ಉಳಿಸಿಕೊಳ್ಳಲು ಪ್ರಶಾಂತ್ ಕಿಶೋರ್ ಗೆ ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡುವುದು ಹೆಚ್ಚು ಅನಿವಾರ್ಯವಾಗಿದೆ. ಹೀಗೆ ಪರಸ್ಪರ ಅನಿವಾರ್ಯತೆಗಾಗಿ ಕಾಂಗ್ರೆಸ್ ನಾಯಕರು ಮತ್ತು ಪ್ರಶಾಂತ್ ಕಿಶೋರ್ ಒಂದೆಡೆ ಸೇರುವ ಚರ್ಚೆಗಳಾಗಿವೆ.
ಎರಡನೇ ವಿಷಯಕ್ಕೆ ಬರುವುದಾದರೆ, ಅಂದರೆ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರುವ ವಿಷಯ ಚರ್ಚೆ ಮಾಡುವುದಾದರೆ ಅವರು 2020ರಿಂದಲೇ ಕಾಂಗ್ರೆಸ್ ಸೇರಲು ಸನ್ನದ್ಧರಾಗಿದ್ದಾರೆ. ಆದರೆ ಮಹತ್ವದ ಹುದ್ದೆ ನಿರೀಕ್ಷೆ ಮಾಡುತ್ತಿರುವುದರಿಂದ ತಡವಾಗುತ್ತಿದೆ. ಈ ನಡುವೆ ಪ್ರಶಾಂತ್ ಕಿಶೋರ್ ಬಿಜೆಪಿ, ಟಿಎಂಸಿ, ಆಪ್, ಡಿಎಂಕೆಗೆ ರಣತಂತ್ರ ರೂಪಿಸಿ ಸೈ ಎನಿಸಿಕೊಂಡಿದ್ದರೂ ಕಾಂಗ್ರೆಸ್ ಪರವಾಗಿ ಮಾಡಿದ ಅವರ ತಂತ್ರಗಾರಿಕೆ ಯಶಸ್ಸು ಸಾಧಿಸಿಲ್ಲ. 2017ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ರಣತಂತ್ರ ರೂಪಿಸಲು ನಿಯೋಜಿಸಲ್ಪಟ್ಟರಾದರೂ ಇವರನ್ನು ಕ್ಯಾಪ್ಟನ್ ಅಮರೀಂದರ್ ಸಿಂಗ್ ಅಮೃತಸರಕ್ಕೆ ಕಾಲಿಡಲು ಬಿಟ್ಟಿರಲಿಲ್ಲ. 2017 ಮತ್ತು 2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಪಿಕೆ ಕಾಂಗ್ರೆಸ್ ಪರ ತಂತ್ರಗಾರಿಕೆ ಮಾಡುತ್ತಾರೆ ಎಂಬ ಸುದ್ದಿಬಂತು. ಆದರೆ ಇವರು ಕೆಲಸ ಮಾಡಿದ ಕುರುಹುಗಳಿಲ್ಲ. ಈಗ ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಪ್ರಶಾಂತ್ ಕಿಶೋರ್ ಅವರದೇ ಕಾರ್ಯತಂತ್ರ ಎಂದು ಹೇಳಲಾಗುತ್ತಿದೆ, ಆ ಬಗ್ಗೆಯೂ ಖಾತರಿ ಇಲ್ಲ.
ಆದರೂ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷದ ಮೇಲಿನ ಭರವಸೆಯನ್ನು ಕಳಕೊಂಡಿಲ್ಲ. ಇತ್ತೀಚೆಗೆ ‘ಇಂಡಿಯಾ ಟುಡೆ’ ವಾಹಿನಿಯ ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್ ‘ಈಗಲೂ ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದರೆ 2024ಕ್ಕೆ ಬಿಜೆಪಿಗೆ ಸೋಲುಣಿಸಬಹುದು’ ಎಂದು ಹೇಳಿದ್ದರು. ‘136 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ 25 ಕೋಟಿ ಜನರ ಆಶೀರ್ವಾದ ಸಿಕ್ಕರೂ ಸಾಕು ಅಧಿಕಾರ ಹಿಡಿಯಬಹುದು. ಕಾಂಗ್ರೆಸ್ 2019ರಲ್ಲಿ 11 ಕೋಟಿ ಮತ ಪಡೆದಿತ್ತು. ದೇಶದ ಬೇರಾವುದೇ ಪಕ್ಷಕ್ಕೆ (ಬಿಜೆಪಿ ಬಿಟ್ಟು) ಇಷ್ಟು ದೊಡ್ಡ ಪ್ರಮಾಣದಲ್ಲಿ ಮತ ಪಡೆಯುವ ತಾಖತ್ತಿಲ್ಲ’ ಎನ್ನುವ ಖಚಿತ ಅಭಿಪ್ರಾಯ ಹೊರಹಾಕಿದ್ದರು.
ಆದುದರಿಂದ ಪ್ರಶಾಂತ್ ಕಿಶೋರ್ ಅವರಂತೂ ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನೊಂದೆಡೆ ಮೊದಲಿಗೆ ಪ್ರಶಾಂತ್ ಕಿಶೋರ್ ಬಗ್ಗೆ ಮೂಗು ಮುರಿಯುತ್ತಿದ್ದ ಕಾಂಗ್ರೆಸ್ ನಾಯಕರು ಕೂಡ ‘ಅವರು (ಪ್ರಶಾಂತ್ ಕಿಶೋರ್) ಹೊರಗಿನಿಂದ ಪಕ್ಷದ ಪರ ಕಾರ್ಯತಂತ್ರ ರೂಪಿಸುವ ಬದಲು, ಪಕ್ಷ ಸೇರಿ ನಮ್ಮೊಳಗೊಬ್ಬರಾಗಿಯೇ ಕೆಲಸ ಮಾಡಲಿ’ ಎನ್ನುವ ಹಂತ ತಲುಪಿದ್ದಾರೆ. ಶೀಘ್ರವೇ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಿದರೆ ಅದು ಅಚ್ಚರಿಯ ವಿಷಯವಾಗುವುದಿಲ್ಲ. ಜೊತೆಗೆ 2024ಕ್ಕೆ ಕಾಂಗ್ರೆಸ್ ಪರ ಪ್ರಶಾಂತ್ ಕಿಶೋರ್ ಕಾರ್ಯತಂತ್ರ ರೂಪಿಸಲಿದ್ದಾರೆ ಎಂಬುದನ್ನೂ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.






