ಉರ್ದು ಬರಲ್ಲ ಅಂತ ದಲಿತ ಸಮುದಾಯದ ಯುವಕನ ಕೊಲೆಯಾಗಿದೆ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ ಉಲ್ಟಾ ಹೊಡೆದಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಬಿಜೆಪಿ ಕಚೇರಿಗೆ ಭೇಟಿ ನೀಡಿದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಜೆಜೆ ನಗರದಲ್ಲಿ ಚಂದ್ರು ಎಂಬಾತನ ಕೊಲೆ ಆಗಿದ್ದು ಉರ್ದು ಮಾತನಾಡಲು ಬರಲ್ಲ ಎಂದಿದ್ದಕ್ಕೆ ಕೊಲೆಯಾಗಿದೆ ಎಂದಿದ್ದರು.
ಚಂದ್ರು ಹತ್ಯೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ಆತ ಚಿಕನ್ ಖರೀದಿಸಲು ಹೋದಾಗ ಅಂಗಡಿಯವರು ಉರ್ದು ಮಾತಾಡಲು ಹೇಳಿದ್ದಾರೆ. ಆದರೆ ಚಂದ್ರುವಿಗೆ ಉರ್ದು ಮಾತಾಡಲು ಬರಲ್ಲ ಎಂದಿದ್ದಕ್ಕೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದರು.

ಚಂದ್ರುವಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ಅಂತ ಹೇಳಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಚೂರಿಯಿಂದ ಚುಚ್ಚಿ-ಚುಚ್ಚಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಚಂದ್ರು ಒಬ್ಬ ದಲಿತ ಯುವಕ. ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದರು.
ಅರಗ ಜ್ಞಾನೇಂದ್ರ ಹೇಳಿಕೆಗೆ ಜೆಡಿಎಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಉಲ್ಟಾ ಹೊಡೆದ ಸಚಿವ ಅರಗ ಜ್ಞಾನೇಂದ್ರ, ಕೂಡಲೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಚಂದ್ರು ಕೊಲೆ ಬೈಕ್ ವಿಚಾರದಲ್ಲಿ ಆಗಿದೆ. ಉರ್ದು ಬರಲ್ಲ ಅಂತ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.










