ದೇಶಾದ್ಯಂತ ಕಳೆದ 15 ದಿನಗಳಲ್ಲಿ 13ನೇ ಬಾರಿಗೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ. ಕಳೆದ ಎರಡು ವಾರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ ಸುಮಾರು 9.20 ರೂ. ಏರಿಕೆಯಾಗಿದ್ದು ಹೊಸ ದರಗಳು ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಅನ್ವಯವಾಗಲಿದೆ.
ಹೌದು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಸತತವಾಗಿ ಏರಿಕೆ ಮಾಡಲಾಗುತ್ತಿದ್ದು, ಇಂದಿನ ಬೆಲೆ ಏರಿಕೆಯ ಬಳಿಕ (ಏಪ್ರಿಲ್ 5, 2022) ಇಂಧನ ದರದಲ್ಲಿ ಮತ್ತೆ ಪರಿಷ್ಕರಣೆ ಮಾಡಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈಗ ಪೆಟ್ರೋಲ್ ಬೆಲೆ 80 ಪೈಸೆ ಏರಿಕೆ ಹೊಂದಿ, ಪ್ರತಿ ಲೀಟರ್ಗೆ ರೂ. 104.61 ಆಗಿದೆ. ಇನ್ನು ಡಿಸೇಲ್ ಬೆಲೆಯು ಕೂಡಾ ಲೀಟರ್ಗೆ 80 ಪೈಸೆ ಹೆಚ್ಚಳವಾಗಿ, 95.87ಗೆ ತಲುಪಿದೆ.
ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ 84 ಪೈಸೆ ಏರಿಕೆ ಹೊಂದಿ, 110.25 ರೂಪಾಯಿ ಆಗಿದೆ. ಇನ್ನು ಡೀಸೆಲ್ ಬೆಲೆಯು ಕೂಡಾ ಏರಿಕೆಯಾಗಿದೆ. ಡಿಸೇಲ್ ಬೆಲೆಯು 78 ಪೈಸೆ ಏರಿಕೆಯಾಗಿದ್ದು, 94.01 ರೂ ಆಗಿದೆ.

ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮವಾಗಿ ಕಚ್ಚಾತೈಲ ಬೆಲೆ ದಶಕದ ಬಳಿಕ ಮೊದಲ ಬಾರಿಗೆ ಭಾರೀ ಏರಿಕೆ ಕಂಡು ಬಂದಿದೆ. ಈ ಬೆನ್ನಲ್ಲೇ ದೇಶದಲ್ಲಿ ಸುಮಾರು 137 ದಿನಗಳ ನಂತರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಕೆ ಮಾಡಲಾಗಿದೆ. ಪೆಟ್ರೋಲ್, ಡೀಸೆಲ್ ದರ ಕಳೆದ 15 ದಿನಗಳಲ್ಲಿ ಒಂದೆರಡು ದಿನ ಮಾತ್ರ ಸ್ಥಿರವಾಗಿದ್ದು, ಉಳಿದ ದಿನಗಳಲ್ಲಿ ಏರಿಕೆ ಕಂಡಿದೆ.






