ರಾಜ್ಯ ರಾಜಕಾರಣದಲ್ಲಿ ಈಗ ‘ಕಮಿಷನ್’ ಪಾಲಿಟಿಕ್ಸ್ ರಂಗೇರಿದೆ. ಕರ್ನಾಟಕ ಬಿಜೆಪಿ ಸರ್ಕಾರ ಕಮೀಷನ್ ಸರ್ಕಾರ ಎಂದು ಈಗಾಗಲೇ ಎಲ್ಲೆಡೆ ಚರ್ಚೆಯಾಗುತ್ತಿರುವ ಬೆನ್ನಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶೇ. 40 ಕಮೀಷನ್ ಸರ್ಕಾರ ಎಂದು ವ್ಯಂಗ್ಯವಾಡಿ, ಇದು ನಾನು ಹೇಳ್ತಿರೋದಲ್ಲ, ಗುತ್ತಿಗೆದಾರರೇ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ನೋವು ತೋಡಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬಂದು ಭ್ರಷ್ಟಾಚಾರದ ವಿರುದ್ಧ ಮಾತನಾಡುವಂತೆಯೇ ಇಲ್ಲ. ಏಕೆಂದರೆ ಇಲ್ಲಿನ ಬಿಜೆಪಿ ಸರ್ಕಾರವನ್ನು ಶೇ. 40 ಕಮೀಷನ್ ಸರ್ಕಾರ ಎಂದೇ ಆರೋಪಿಸಲಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬಂದು ವೇದಿಕೆ ಮೇಲೆ ನಿಂತು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದರೆ, ಇಡೀ ಕರ್ನಾಟಕವೇ ನಗುತ್ತದೆ. ಏನು ಮಾತನಾಡ್ತಿದ್ದೀರಿ ಎಂದು ರಾಜ್ಯದ ಜನರೇ ಪ್ರಶ್ನಿಸುತ್ತಾರೆ.
ದೇಶದಲ್ಲೇ ಅತಿ ಹೆಚ್ಚು ಭ್ರಷ್ಟ ಸರ್ಕಾರ ಕರ್ನಾಟಕ ರಾಜ್ಯದಲ್ಲಿದೆ. ಇದು ಶೇ. 40 ರಷ್ಟು ಕಮೀಷನ್ ಸರ್ಕಾರ. ಈ ಆರೋಪವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿಲ್ಲ. ಗುತ್ತಿಗೆದಾರರು ಮಾಡುತ್ತಿದ್ದಾರೆ. ಆದರೆ, ಪ್ರಧಾನ ಮಂತ್ರಿಗಳು ಮಾತ್ರ ತಾವು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿರೋದಾಗಿ ಹೇಳುತ್ತಾರೆ. ಇದು ನಿಜಕ್ಕೂ ತಮಾಷೆ. ಹೀಗಾಗಿ, ಭ್ರಷ್ಟಾಚಾರದ ವಿರುದ್ಧ ನಾನು ಹೋರಾಟ ಮಾಡ್ತೇನೆ ಎಂದು ಕರ್ನಾಟಕ ಮಾತ್ರವಲ್ಲ, ದೇಶಾದ್ಯಂತ ಯಾವುದೇ ವೇದಿಕೆಯಲ್ಲಿ ಪ್ರಧಾನಿ ಮೋದಿ ಹೇಳಿಕೆ ನೀಡುವಂತಿಲ್ಲ ಎಂದು ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಹಿಂದೆ ರಾಜ್ಯದ ಹಲವು ಗುತ್ತಿಗೆದಾರರು ಪರ್ಸೆಂಟೇಜ್ ಮಾಫಿಯಾ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಸಚಿವ ಈಶ್ವರಪ್ಪ ವಿರುದ್ಧವೂ ಗುತ್ತಿಗೆದಾರರೊಬ್ಬರು ಆರೋಪಿಸಿ ಬರೆದಿದ್ದ ಪತ್ರ ಭಾರೀ ಸದ್ದು ಮಾಡಿತ್ತು.