ಪಂಚರಾಜ್ಯ ಚುನಾವಣೆ ಮುಗಿದ ತಕ್ಷಣ ಜನ ಸಾಮಾನ್ಯರ ಜೇಬಿಗೆ ಮತ್ತೆ ಕತ್ತರಿ ಬಿದ್ದಿದ್ದು, ಮಂಗಳವಾರದಿಂದ ಗೃಹಬಳಕೆಯ LPG ಸಿಲಿಂಡರ್ಗಳ ಬೆಲೆ 50 ರೂಪಾಯಿ ಏರಿಕೆ ಕಂಡಿದೆ.
ಕಳೆದ ಬಾರಿ ಅಕ್ಟೋಬರ್ 6 ರಂದು ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಹೆಚ್ಚಿಸಲಾಗಿತ್ತು. ಸರ್ಕಾರಿ ತೈಲ ಕಂಪನಿಗಳು ಮಂಗಳವಾರ ಎಲ್ಪಿಜಿ ಸಿಲಿಂಡರ್ಗಳ ಹೊಸ ದರಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ 50 ರೂಪಾಯಿ ಏರಿಕೆಯಾಗಿದೆ. ಅದರಂತೆ 14.2 ಕೆಜಿಯ LPG ಸಿಲಿಂಡರ್ ಬೆಲೆ ದೆಹಲಿಯಲ್ಲಿ 949.50 ರೂ. ಆಗಿದೆ. ಇಂದಿನಿಂದಲೇ ಅನ್ವಯವಾಗುವಂತೆ (ಮಾರ್ಚ್ 22, 2022) ಈ ದರ ಏರಿಕೆ ಮಾಡಲಾಗಿದೆ.
5 ಕಿಲೋಗ್ರಾಂ (ಕೆಜಿ) ಎಲ್ಪಿಜಿ ಸಿಲಿಂಡರ್ನ ಬೆಲೆ ಈಗ ₹ 349 ಆಗಿದ್ದರೆ, 10 ಕೆಜಿ ಕಾಂಪೋಸಿಟ್ ಬಾಟಲ್ ₹ 669 ಕ್ಕೆ ಬರಲಿದೆ ಎಂದು ಮೂಲಗಳು ತಿಳಿಸಿವೆ. 19 ಕೆಜಿಯ ವಾಣಿಜ್ಯ ಸಿಲಿಂಡರ್ ಈಗ ₹ 2003.50 ಬೆಲೆಯಲ್ಲಿ ಲಭ್ಯವಿದೆ.

ಇನ್ನು ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿರುವ ಕಾರಣ ವಿಶ್ವಾದ್ಯಂತ ದೂರಗಾಮಿ ಪರಿಣಾಮ ಬೀರಿದೆ. ಇದಕ್ಕೆ ಭಾರತ ಕೂಡ ಹೊರತಲ್ಲ. ದೇಶದಲ್ಲಿ ಪೆಟ್ರೋಲ್ ಹಾಗೂ ಅಗತ್ಯವಸ್ತುಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಬೆಲೆ ಏರಿಕೆ ಮಾಡಿರಲಿಲ್ಲ. ಆದರೆ ಚುನಾವಣೆ ಮುಗಿಯುತ್ತಿದ್ದಂತೆಯೇ ಸಬ್ಸಿಡಿ ರಹಿತ ಸಿಲಿಂಡರ್ ದುಬಾರಿಯಾಗಿದೆ.