ರಷ್ಯಾ- ಉಕ್ರೇನ್ ಯುದ್ಧ ಸದ್ಯಕ್ಕೆ ಕೊನೆಗೊಳ್ಳುವ ಸಾಧ್ಯತೆ ಇಲ್ಲದ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ತೀವ್ರವಾಗಿ ಜಿಗಿದಿದೆ. ಮಾರ್ಚ್ 7ರಂದು ದಿನದ ವಹಿವಾಟಿನಲ್ಲಿ ಪ್ರತಿ ಬ್ಯಾರೆಲ್ಲಿಗೆ 139 ಡಾಲರ್ ಗಳಿಗೆ ಏರಿ 13 ವರ್ಷಗಳ ಗರಿಷ್ಠಮಟ್ಟಕ್ಕೆ ಜಿಗಿದಿದೆ. 2008ರ ನಂತರ ಇದೇ ಮೊದಲ ಬಾರಿಗೆ ಕಚ್ಚಾ ತೈಲ 140 ಡಾಲರ್ ಗಳ ಆಜುಬಾಜಿನಲ್ಲಿ ವಹಿವಾಟಾಗಿವೆ. ನಂತರದ ವಹಿವಾಟಿನಲ್ಲಿ ದರ ಕೊಂಚ ಇಳಿಯಿತಾದರೂ, ಬರುವ ದಿನಗಳಲ್ಲಿ ಪ್ರತಿ ಬ್ಯಾರೆಲ್ಲಿಗೆ 150 ಡಾಲರ್ ಗಡಿದಾಟುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಕಚ್ಚಾ ತೈಲ ದರ ಜಿಗಿಯುತ್ತಿದ್ದಂತೆ ಭಾರತದ ರೂಪಾಯಿ ಮೌಲ್ಯವು ಅಷ್ಟೇ ತೀವ್ರವಾಗಿ ಕುಸಿದಿದ್ದ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದಿದೆ. ದಿನದ ಅಂತ್ಯಕ್ಕೆ ಪ್ರತಿ ಡಾಲರ್ ವಿರುದ್ಧ 76.96 ಕ್ಕೆ ಕುಸಿದು ವಹಿವಾಟಾಗಿದೆ. ಈ ಹಿಂದೆ 2020ರಲ್ಲಿ 76.90ಕ್ಕೆ ಕುಸಿದಿದ್ದೆ, ಅತಿ ಕನಿಷ್ಠಮಟ್ಟವಾಗಿತ್ತು.
ಮಾರುಕಟ್ಟೆ ತಜ್ಞರ ಪ್ರಕಾರ, ರಷ್ಯಾ- ಉಕ್ರೇನ್ ಯುದ್ಧ ಮುಗಿಯುವ ವೇಳೆಗೆ ರುಪಾಯಿ ಡಾಲರ್ ವಿರುದ್ಧ 80ರ ಆಜುಬಾಜಿಗೆ ಕುಸಿಯುವ ನಿರೀಕ್ಷೆ ಇದೆ. ಒಂದು ವೇಳೆ ರೂಪಾಯಿ 80ಕ್ಕೆ ಕುಸಿದರೆ ದೇಶೀಯ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲವಾಗಲಿದೆ.
ಈಗಾಗಲೇ ಪ್ರತಿ ಬ್ಯಾರೆಲ್ಲಿಗೆ 140 ಡಾಲರ್ ಆಜುಬಾಜಿನಲ್ಲಿ ಕಚ್ಚಾ ತೈಲ ವಹಿವಾಟಾಗಿದೆ. 150ಕ್ಕೆ ಏರುವ ಸಾಧ್ಯತೆ ಇದೆ. ಇದು ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ತೀವ್ರವಾಗಿ ಏರಿಕೆಯಾಗಲು ಕಾರಣವಾಗಲಿದೆ.
ಉತ್ತರ ಪ್ರದೇಶದಲ್ಲಿ ಚುನಾವಣೆಯಿದ್ದ ಕಾರಣಕ್ಕಾಗಿ ಪ್ರಧಾನಿ ನರೇಂದ್ರಮೋದಿ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ತಟಸ್ಥವಾಗಿಟ್ಟಿದ್ದರು. ಈಗ ಹೇಗೂ ಮತದಾನದ ಪ್ರಕ್ರಿಯೆ ಮುಗಿದಿರುವುದರಿಂದ ಮಾರ್ಚ್ 8ರಿಂದಲೇ ಪೆಟ್ರೋಲ್, ಡಿಸೇಲ್ ದರ ಏರಿಕೆ ಆರಂಭವಾದರೂ ಅಚ್ಚರಿ ಇಲ್ಲ.
ಭಾರತವು ಶೇ.85ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಆಮದು ಮಾಡಿಕೊಂಡ ಕಚ್ಚಾ ತೈಲಕ್ಕೆ ಬಹುತೇಕ ಡಾಲರ್ ಗಳಲ್ಲೇ ಪಾವತಿ ಮಾಡುತ್ತಿದೆ. ಅಂದರೆ, ರೂಪಾಯಿ ಮೌಲ್ಯ ಕುಸಿತದ ಹೊರೆಯ ಜತೆಗೆ ಕಚ್ಚಾ ತೈಲ ದರ ಏರಿಕೆಯೂ ಸೇರಿದಾಗ ಭಾರತದಲ್ಲಿ ಮಾರಟ ಮಾಡುವ ಪೆಟ್ರೋಲ್ ಮತ್ತು ಡಿಸೇಲ್ ದರವು ತೀವ್ರವಾಗಿ ಏರಿಕೆಯಾಗಲಿದೆ.
ಈಗ ಪರಿಸ್ಥಿತಿ ಹೇಗಿದೆಯೆಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಕಚ್ಚಾ ತೈಲ ದರಕ್ಕೆ ಅನುಗುಣವಾಗಿ ಪೆಟ್ರೋಲ್ ಮತ್ತು ಡಿಸೇಲ್ ದರ ನಿಗದಿ ಮಾಡಿದರೂ ಸುಮಾರು 20 ರುಪಾಯಿಗಳಷ್ಟು ಏರಿಕೆ ಮಾಡಬೇಕಾಗುತ್ತದೆ.
ಒಂದು ವೇಳೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹೇರಿರುವ ಭಾರಿ ಮೊತ್ತದ ಸುಂಕಗಳನ್ನು ತಗ್ಗಿಸಿದರೆ ಮಾತ್ರ, ಗ್ರಾಹಕರ ಹೆಗಲಿಗೆ ದರ ಏರಿಕೆಯ ಭಾರ ಕೊಂಚ ತಗ್ಗಬಹುದು.
ರೂಪಾಯಿ ಮೌಲ್ಯ ಕುಸಿತದಿಂದ ಆಮದು ಮಾಡಿಕೊಳ್ಳುವ ಸರಕು ಸೇವೆಗಳು ಹೇಗೆ ಹೊರೆಯಾಗುತ್ತವೋ ಹಾಗೆಯೇ ರಫ್ತು ಮಾಡುವ ಸರಕು ಸೇವೆಗಳ ಪಾಲಿಗೆ ವರವಾಗುತ್ತದೆ. ಅಂದರೆ, ರುಪಾಯಿ ಮೌಲ್ಯ ಕುಸಿದಷ್ಟೂ ರಫ್ತು ಮಾಡಿದ ಸರಕು ಸೇವೆಗಳಿಗೆ ಡಾಲರ್ ರೂಪದಲ್ಲಿ ಪಾವತಿ ಆಗುವುದರಿಂದ ಹೆಚ್ಚಿನ ಲಾಭವಾಗುತ್ತದೆ.
ಆದರೆ, ಈ ಲಾಭದ ಪ್ರಮಾಣವು ಹೆಚ್ಚಿನದಾಗಿರುವುದಿಲ್ಲ. ಏಕೆಂದರೆ, ಭಾರತದ ಸರಕು ಮತ್ತು ಸೇವೆಗಳ ರಫ್ತು ಪ್ರಮಾಣಕ್ಕೆ ಹೋಲಿಸಿದರೆ, ಆಮದು ಪ್ರಮಾಣವು ಹೆಚ್ಚಿದೆ. ಹೀಗಾಗಿ, ರಫ್ತಿನಿಂದ ಬರುವ ಲಾಭಕ್ಕಿಂತಲೂ ಆಮದು ಮಾಡಿಕೊಳ್ಳುವುದರಿಂದಾಗುವ ನಷ್ಠವೇ ಅಧಿಕವಾಗಿರುತ್ತದೆ.
ರಫ್ತು ಆಮದುಗಳ ಲಾಭ- ನಷ್ಟದ ಲೆಕ್ಕಾಚಾರಗಳೇನೇ ಇರಲಿ, ಅಂತಿಮವಾಗಿ ಜನಸಾಮಾನ್ಯರು ಬೆಲೆ ಏರಿಕೆಯ ಬಿಸಿಯನ್ನು ಸಹಿಸಿಕೊಳ್ಳಲು ಸಿದ್ದರಾಗಬೇಕು. ಪೆಟ್ರೋಲ್ ಮತ್ತು ಡಿಸೇಲ್ ದರ ಏರುತ್ತಿದ್ದಂತೆ ಅದಕ್ಕೆ ಪೂರಕವಾಗಿ ಸಾರಿಗೆ ಸೇವೆಗಳು, ಪ್ರಯಾಣ ದರಗಳು, ಅಡುಗೆ ಅನಿಲ ದರವೂ ಏರಲಿದ್ದು, ಹೊಟೆಲ್ ತಿಂಡಿ,ತಿನಿಸುಗಳ ದರವೂ ಏರುತ್ತದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ದರ ಏರಿಕೆ ಮಾಡಬಹುದು. ಹಾಗೆ ಹಣದುಬ್ಬರ ಜಿಗಿಯುವುದರಿಂದ ಬಹುತೇಕ ಜೀವನಾವಶ್ಯಕ ವಸ್ತುಗಳ ದರವೂ ಜಿಗಿಯಲಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗಲಿದೆ.