ರಾಜ್ಯದ ಆರ್ಥಿಕ ಹಿನ್ನೆಡೆಗಿರುವ ಹಲವು ಕಾರಣಗಳಲ್ಲಿ ಕೊರೊನಾ ಕೂಡ ಒಂದು ಆದರೆ ಅದೊಂದೇ ಕಾರಣವಲ್ಲ, ಬಹಳ ಮುಖ್ಯವಾಗಿ ಕೇಂದ್ರ ಸರ್ಕಾರದಿಂದ ನಮಗೆ ಬರಬೇಕಿದ್ದ ತೆರಿಗೆ ಪಾಲು ಮತ್ತು ಅನುದಾನದ ಪಾಲು ಕಡಿಮೆಯಾಗಿದ್ದರಿಂದ ರಾಜಸ್ವ ಸ್ವೀಕೃತಿ ಕಡಿಮೆಯಾಯಿತು ಎಂದು ಮಾಜಿ ಮುಖ್ಯಮಂತರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಇಂದಿನ ವಿಧಾನಸಭಾ ಅಧಿವೇಶನದಲ್ಲಿ ಬಜೆಟ್ ಕುರಿತಾದ ಚರ್ಚೆಯಲ್ಲಿ ಭೋಜನ ವಿರಾಮದ ನಂತರ ಮಾತನಾಡಿದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ದೇಶದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಸುಮಾರು 11 ಕೋಟಿ ಜನ ಉದ್ಯೋಗಿಗಳು ಇದ್ದರು. ನೋಟು ಅಮಾನ್ಯೀಕರಣ, ಜಿಎಸ್ಟಿ ಜಾರಿ ಹಾಗೂ ಕೊರೊನಾ ಆರ್ಭಟದ ನಂತರ ಈ ಕೈಗಾರಿಕೆಗಳು ಸ್ಥಗಿತಗೊಂಡು ಇಂದು ಕೇವಲ 2.5 – 3 ಕೋಟಿ ಉದ್ಯೋಗಗಳು ಉಳಿದಿವೆ. ಕೃಷಿ ಮತ್ತು ಸಣ್ಣ ಕೈಗಾರಿಕೆಗಳು ದೇಶದ ಪ್ರಮುಖ ಉದ್ಯೋಗ ನೀಡುವ ಕ್ಷೇತ್ರಗಳು. ಇಂದು ಈ ಕ್ಷೇತ್ರಗಳೇ ಸಂಕಷ್ಟದಲ್ಲಿವೆ. ಇದರ ಜೊತೆಗೆ ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ನಿರುದ್ಯೋಗ ದರ ಏರಿಕೆಯಾಗಿದೆ. ನಿರುದ್ಯೋಗ ಹೆಚ್ಚಾಗುವುದರಿಂದ ರಾಜ್ಯದ ಜಿಡಿಪಿ ಕುಸಿತವಾಗುತ್ತದೆ, ಇದರಿಂದ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡಲು ಆಗಲ್ಲ.
ರಾಜ್ಯದ ಆರ್ಥಿಕ ಹಿನ್ನೆಡೆಗಿರುವ ಹಲವು ಕಾರಣಗಳಲ್ಲಿ ಕೊರೊನಾ ಕೂಡ ಒಂದು ಆದರೆ ಅದೊಂದೇ ಕಾರಣವಲ್ಲ, ಬಹಳ ಮುಖ್ಯವಾಗಿ ಕೇಂದ್ರ ಸರ್ಕಾರದಿಂದ ನಮಗೆ ಬರಬೇಕಿದ್ದ ತೆರಿಗೆ ಪಾಲು ಮತ್ತು ಅನುದಾನದ ಪಾಲು ಕಡಿಮೆಯಾಗಿದ್ದರಿಂದ ರಾಜಸ್ವ ಸ್ವೀಕೃತಿ ಕಡಿಮೆಯಾಯಿತು. ಇದರಿಂದ ರಾಜಸ್ವ ಕೊರತೆ ಉಂಟಾಗಿದೆ. ನಮಗೆ ಬರುವ ತೆರಿಗೆ ಪಾಲು ಹೇಗೆ ಕಡಿಮೆಯಾಗುತ್ತಿದೆ ಎಂದು ಈಗಾಗಲೇ ಹೇಳಿದ್ದೇನೆ.
2012-13 ರಲ್ಲಿ ರೂ. 12,647 ಕೋಟಿ,
2013 – 14 ರಲ್ಲಿ ರೂ. 13,894 ಕೋಟಿ,
2014-15 ರಲ್ಲಿ ರೂ. 14,654 ಕೋಟಿ,
2015-16 ರಲ್ಲಿ ರೂ. 23,983 ಕೋಟಿ,
2017-18 ರಲ್ಲಿ ರೂ. 31,752 ಕೋಟಿ,
2018-19 ರಲ್ಲಿ ರೂ. 35,895 ಕೋಟಿ,
2019-20 ರ ಬಜೆಟ್ನಲ್ಲಿ ಅಂದಾಜಿಸಿದ್ದು ರೂ. 39,806 ಕೋಟಿ, ಆದರೆ ಬಂದಿದ್ದು ರೂ. 30,919 ಕೋಟಿ,
2020-21 ರಲ್ಲಿ ರೂ. 28,000 ಕೋಟಿ ಬಜೆಟ್ ಅಂದಾಜು, ಆದರೆ ಬಂದಿದ್ದು ರೂ. 21,495 ಕೋಟಿ.
2021-22 ಕ್ಕೆ ರೂ. 27,145 ಕೋಟಿ ಬರಲಿದೆ ಎಂದು ಪರಿಷ್ಕೃತ ವರದಿಯಲ್ಲಿ ಅಂದಾಜಿಸಲಾಗಿದೆ, ಆದರೆ ಕಳೆದ ಡಿಸೆಂಬರ್ ಕೊನೆ ವಾರದ ವರೆಗೆ ಬಂದಿರುವುದು ಕೇವಲ ರೂ. 16,000 ಕೋಟಿ. ಇನ್ನುಳಿದ ಪಾಲು ಬಂದರೆ ಬಂತು, ಇಲ್ಲದಿದ್ದರೆ ಇಲ್ಲ.

ಮುಂದಿನ ವರ್ಷ ರೂ. 29,793 ಕೋಟಿ ತೆರಿಗೆ ಪಾಲು ಬರಲಿದೆ ಎಂದು ಅಂದಾಜಿಸಲಾಗಿದೆ.
2013-14 ರಲ್ಲಿ ಕೇಂದ್ರ ಸರ್ಕಾರದ ಬಜೆಟ್ ಗಾತ್ರ ರೂ. 16 ಲಕ್ಷದ 06 ಸಾವಿರ ಕೋಟಿ ಇತ್ತು, ಈಗಿನ ಬಜೆಟ್ ಗಾತ್ರ ರೂ. 39 ಲಕ್ಷದ 45 ಸಾವಿರ ಕೋಟಿಗೆ ಹೆಚ್ಚಾಗಿದೆ. ಆದರೆ ರಾಜ್ಯದ ತೆರಿಗೆ ಪಾಲಿನ ಏರಿಕೆ ಎಷ್ಟಾಗಿದೆ?
ಜಿಎಸ್ಟಿ ಬರುವ ಮೊದಲು ರಾಜ್ಯದ ತೆರಿಗೆ ಸಂಗ್ರಹದ ಬೆಳವಣಿಗೆ ದರ 13 – 14% ಇತ್ತು, ಈ ನಷ್ಟವನ್ನು ಕೇಂದ್ರ ಸರ್ಕಾರ ಭರಿಸಿ ಕೊಡಬೇಕಲ್ವ? 14 ಮತ್ತು 15ನೇ ಹಣಕಾಸು ಆಯೋಗದ ವರದಿಗಳ ನಡುವೆ ನಮ್ಮ ರಾಜ್ಯದ ತೆರಿಗೆ ಪಾಲು 1.07% ಕಡಿಮೆಯಾಯಿತು. ಆಂದ್ರ ಪ್ರದೇಶ 0.26%, ಅಸ್ಸಾಂ 0.18%, ಕೇರಳ 0.58% ಕಡಿಮೆಯಾಗಿದೆ. ಈ ಎಲ್ಲಾ ರಾಜ್ಯಗಳಲ್ಲಿ ಹೆಚ್ಚು ನಷ್ಟವಾಗಿರುವುದು ಕರ್ನಾಟಕಕ್ಕೆ. ಇದೇ ಕಾರಣಕ್ಕೆ 15 ನೇ ಹಣಕಾಸು ಆಯೋಗ ಮಧ್ಯಂತರ ವರದಿಯಲ್ಲಿ ನಮ್ಮ ರಾಜ್ಯಕ್ಕೆ ರೂ. 5,495 ಕೋಟಿ ವಿಶೇಷ ಅನುದಾನ ಶಿಫಾರಸು ಮಾಡಿತ್ತು, ಆದರೆ ಹಣಕಾಸು ಸಚಿವರು ತಿರಸ್ಕಾರ ಮಾಡಿದ್ದರಿಂದ ಇಷ್ಟು ದೊಡ್ಡ ಅನುದಾನ ರಾಜ್ಯದ ಕೈತಪ್ಪಿ ಹೋಯಿತು.
ಈ ವರ್ಷದ ಜೂನ್ 30 ಕ್ಕೆ ಜಿಎಸ್ಟಿ ಪರಿಹಾರ ಬರುವುದು ಕೂಡ ಕೊನೆಯಾಗಲಿದೆ. ಇದರಿಂದ ವರ್ಷಕ್ಕೆ ಕನಿಷ್ಠ 20 ಸಾವಿರ ಕೋಟಿ ನಷ್ಟವಾಗುತ್ತೆ. ಮತ್ತೆ ಮೂರು ವರ್ಷ ಮುಂದುವರೆಸಿ ಎಂದು ಪತ್ರ ಬರೆದರೆ ಸಾಕ? ಅವರು ಕೊಡಲಿಲ್ಲ ಅಂದ್ರೆ ಪರವಾಗಿಲ್ವ? ಆಗಲೂ ಸುಮ್ಮನಿರ್ತೀರ? ಒತ್ತಾಯ ಮಾಡಬೇಕು ಅಲ್ವ?
ಈ ವರ್ಷ 18,109 ಕೋಟಿ ರೂಪಾಯಿ ಜಿಎಸ್ಟಿ ಪರಿಹಾರದ ರೂಪದಲ್ಲಿ ಸಾಲ ಕೊಟ್ಟಿದ್ದಾರೆ. ಈ ಸಾಲವನ್ನು ನಮ್ಮ ರಾಜ್ಯದ ಜನರಿಂದಲೇ ಸೆಸ್ ಮೂಲಕ ಕೇಂದ್ರ ಸರ್ಕಾರ ಸಂಗ್ರಹಿಸುತ್ತದೆ. ಇದು ನಮ್ಮ ಜನರಿಗೆ ಹೊರೆಯಲ್ಲವೇ?
ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಒಂದೇ ಒಂದು ಹೊಸ ಮನೆಯನ್ನು ಮಂಜೂರು ಮಾಡಿಲ್ಲ, ಹೊಸದಾಗಿ ರಸ್ತೆ ನಿರ್ಮಾಣ ಮಾಡಿಲ್ಲ. ಇದನ್ನು ಹೇಳಿದರೆ ವಸತಿ ಸಚಿವ ಸೋಮಣ್ಣ ಅವರಿಗೆ ಕೋಪ ಬರುತ್ತದೆ. ಸತ್ಯ ಏನೆಂದು ಜನರಿಗೆ ಗೊತ್ತಾಗಬೇಕಲ್ವ? ನಾವು ಸುಮ್ಮನಿರೋಕಾಗುತ್ತ?

ತೆರಿಗೆ ಸಂಗ್ರಹ ಜಿಎಸ್ಟಿ ನಂತರ ಕಡಿಮೆಯಾಗುತ್ತಾ ಬಂತು.
2017-18 ರಲ್ಲಿ ರೂ. 1,47,000 ಕೋಟಿ ಆಯಿತು.
2018-19 ರಲ್ಲಿ 1,64,979 ಕೋಟಿ ರೂಪಾಯಿ ಆಯಿತು.
2019-20 ರಲ್ಲಿ 1,75,443 ಕೋಟಿ ರೂಪಾಯಿ ಆಯಿತು.
2020-21 ರಲ್ಲಿ 1,56,716 ಕೋಟಿ ರೂಪಾಯಿ ಆಯಿತು.
2021-22 ರಲ್ಲಿ 1,89,579 ಕೋಟಿ ರೂಪಾಯಿ ಎಂದು ಪರಿಷ್ಕೃತ ಅಂದಾಜು ಮಾಡಲಾಗಿದೆ.
ಮುಂದಿನ ಸಾಲಿನಲ್ಲಿ ರೂ. 1,89,987 ಕೋಟಿ ಎಂದು ಅಂದಾಜಿಸಲಾಗಿದೆ.
ನಮ್ಮ ರಾಜ್ಯದಲ್ಲಿ 14% ತೆರಿಗೆ ದರದ ಪ್ರಕಾರ ತೆರಿಗೆ ಸಂಗ್ರಹ ಆಗಿದ್ದರೆ
2017-18 ರಲ್ಲಿ 1,54,415 ಕೋಟಿ ರೂಪಾಯಿ ಆಗಬೇಕಿತ್ತು,
2018-19 ರಲ್ಲಿ 1,76,036 ಕೋಟಿ ರೂಪಾಯಿ ಆಗಬೇಕಿತ್ತು,
2019-20 ರಲ್ಲಿ 2,00,679 ಕೋಟಿ ರೂಪಾಯಿ ಆಗಬೇಕಿತ್ತು,
2020-21 ರಲ್ಲಿ 2,28,775 ಕೋಟಿ ರೂಪಾಯಿ ಆಗಬೇಕಿತ್ತು,
2021-22 ರಲ್ಲಿ 2,60,803 ಕೋಟಿ ರೂಪಾಯಿ ಆಗಬೇಕಿತ್ತು, ಆದರೆ ರೂ. 1,89,579 ಕೋಟಿ ಆಗಿದೆ.
ಜಿಎಸ್ಟಿ ಜಾರಿ, ನೋಟು ಅಮಾನ್ಯೀಕರಣದಿಂದ ನಮ್ಮ ರಾಜ್ಯ ಸರ್ಕಾರಕ್ಕೆ ಒಟ್ಟು ಅಂದಾಜು ರೂ. 2,96,655 ಕೋಟಿ ನಷ್ಟವಾಗಿದೆ.2013 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜನರಿಗೆ 165 ಭರವಸೆಗಳನ್ನು ನೀಡಿತ್ತು, ನಾವು ಅಧಿಕಾರಕ್ಕೆ ಬಂದ ನಂತರ ಆ ಭರವಸೆಗಳಲ್ಲಿ ಶೇ. 99 ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ. ಈ ಭರವಸೆಗಳಲ್ಲದೆ ಸುಮಾರು 25 ಹೊಸ ಯೋಜನೆಗಳನ್ನು ಜಾರಿಮಾಡಿದ್ದೆವು. ನಾವು ನುಡಿದಂತೆ ನಡೆದಿದ್ದೇವೆ.
ಬಿಜೆಪಿ ಪಕ್ಷ 2018 ರ ಚುನಾವಣೆಯಲ್ಲಿ ಸುಮಾರು 599 ಆಶ್ವಾಸನೆಗಳನ್ನು ಜನರ ಮುಂದೆ ಇಟ್ಟಿತ್ತು, ಅವುಗಳಲ್ಲಿ ಶೇ. 90 ಆಶ್ವಾಸನೆಗಳು ಈಡೇರಿಲ್ಲ.
ಬಿಜೆಪಿಯವರ ಪ್ರಮುಖ ಭರವಸೆಗಳಲ್ಲಿ ಮೊದಲನೆಯದು ರೈತರ ಒಂದು ಲಕ್ಷದ ವರೆಗಿನ ರಾಷ್ಟ್ರೀಕೃತ ಮತ್ತು ಸಹಕಾರ ಬ್ಯಾಂಕುಗಳಲ್ಲಿನ ಸಾಲವನ್ನು ಮೊದಲ ಸಚಿವ ಸಂಪುಟ ಸಭೆಯಲ್ಲೇ ಮನ್ನಾ ಮಾಡಲಾಗುವುದು. ನಾವು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳದಿದ್ದರೂ ರೈತರು ಸಹಕಾರಿ ಬ್ಯಾಂಕುಗಳಲ್ಲಿ ಮಾಡಿದ್ದರು ರೂ. 50,000 ವರೆಗಿನ ಸಾಲ ಮನ್ನಾ ಮಾಡಿದ್ದೆವು.
ಎರಡನೆಯದು ನೇಗಿಲ ಯೋಗಿ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರ ನೇರ ಆದಾಯ ವೃದ್ಧಿಗಾಗಿ ರೂ. 10 ಸಾವಿರದಿಂದ ರೂ. 20 ಲಕ್ಷದ ವರೆಗೂ ಆರ್ಥಿಕ ನೆರವು.
ರೈತರಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ ಒಂದೂವರೆ ಪಟ್ಟು ಅಧಿಕ ಆದಾಯದ ಭರವಸೆ.
ರೈತ ಸ್ನೇಹಿ ಯೋಜನೆಗಳ ಮೇಲೆ ನಿಗಾ ಇಡಲು ಮುಖ್ಯಮಂತ್ರಿಗಳ ಕಚೇರಿಯಲ್ಲೇ ರೈತ ಬಂಧು ಇಲಾಖೆ ಸ್ಥಾಪನೆ.
ಭೂರಹಿತ ಕೃಷಿ ಕಾರ್ಮಿಕರಿಗಾಗಿ ಮುಖ್ಯಮಂತ್ರಿ ರೈತ ಸುರಕ್ಷಾ ಯೋಜನೆಯಡಿಯಲ್ಲಿ ರೂ. 2 ಲಕ್ಷದ ವರೆಗಿನ ಅಪಘಾತ ವಿಮೆ ಸೌಲಭ್ಯ.
ಬೆಲೆಯೇರಿಕೆ ಸಂದರ್ಭದಲ್ಲಿ ರೈತರಿಗೆ ತೊಂದರೆಯಾಗದಂತೆ ನಿರ್ವಹಿಸಲು ರೂ. 5000 ಕೋಟಿ ರೈತ ಬಂಧು ಮಾರುಕಟ್ಟೆ ನಿರ್ವಹಣಾ ವೆಚ್ಚ.

2023 ರೊಳಗಡೆ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ‘ಸುಜಲಾಂ ಸುಫಲಾಂ’ ಯೋಜನೆಯಡಿಯಲ್ಲಿ ಒಂದೂವರೆ ಲಕ್ಷ ಕೋಟಿ ರೂಪಾಯಿ ನೀಡಲಾಗುವುದು. ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ಸರ್ಕಾರ ನೀರಾವರಿಗಾಗಿ ಖರ್ಚು ಮಾಡಿರುವುದು ಕೇವಲ ರೂ. 40,000 ಕೋಟಿ ಮಾತ್ರ, ಈ ಬಜೆಟ್ನಲ್ಲಿ ರೂ. 20,000 ಕೋಟಿ ಇಟ್ಟಿದ್ದಾರೆ. ಒಟ್ಟು ರೂ. 60,000 ಕೋಟಿ ಆಯ್ತು. ಇನ್ನುಳಿದ 90,000 ಕೋಟಿ ರೂಪಾಯಿ ಎಲ್ಲಿ?
ಬಿಜೆಪಿಯವರು 2018 ರಲ್ಲಿ ಜನರಿಗೆ ನೀಡಿದ್ದ ಭರವಸೆಗಳಲ್ಲಿ ಶೇ. 90 ಈ ವರೆಗೆ ಈಡೇರಿಲ್ಲ ಮತ್ತು ಈ ಬಾರಿಯ ಬಜೆಟ್ನಲ್ಲೂ ಅದಕ್ಕೆ ಅವಕಾಶ ನೀಡಿಲ್ಲ.
ಮುಖ್ಯಮಂತ್ರಿಗಳು ತಮ್ಮ ಬಜೆಟ್ ಭಾಷಣದಲ್ಲಿ ದೇವರಾಜ ಅರಸು ಅಭಿವೃದ್ಧಿ ನಿಗಮದ ಮೂಲಕ ಅವುಗಳ ಕೆಳಗೆ ಬರುವ ಎಲ್ಲಾ ಅಭಿವೃದ್ಧಿ ನಿಗಮಗಳಿಗೆ ರೂ. 400 ಕೋಟಿ ಒದಗಿಸುತ್ತೇವೆ ಎಂದಿದ್ದಾರೆ. ಈ 400 ಕೋಟಿ ಅನುದಾನದಲ್ಲಿ ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ ರೂ. 100 ಕೋಟಿ, ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ರೂಪಾಯಿ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ 11 ಕೋಟಿ ರೂಪಾಯಿ, ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ರೂ. 7.5 ಕೋಟಿ, ಆರ್ಯವೈಶ್ಯ ಅಭಿವೃದ್ಧಿ ನಿಗಮಕ್ಕೆ ಸೊನ್ನೆ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಒಂದು ರೂಪಾಯಿ, ಒಕ್ಕಲಿಗರ ಅಭಿವೃದ್ಧಿ ನಿಗಮಕ್ಕೆ ಶೂನ್ಯ, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮಕ್ಕೆ ಸೊನ್ನೆ, ಸವಿತಾ ಸಮಾಜ ಅಭಿವೃದ್ಧಿ ನಿಗಮಕ್ಕೆ ಸೊನ್ನೆ, ಕರ್ನಾಟಕ ಕಾಡೊಗೊಲ್ಲ ಅಭಿವೃದ್ಧಿ ನಿಗಮಕ್ಕೆ ಸೊನ್ನೆ, ಕರ್ನಾಟಕ ಮರಾಠ ಅಭಿವೃದ್ಧಿ ನಿಗಮಕ್ಕೆ ಸೊನ್ನೆ, ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಸೊನ್ನೆ, ಒಟ್ಟು 400 ಕೋಟಿಯಲ್ಲಿ ಕೇವಲ 129 ಕೋಟಿ 51 ಲಕ್ಷ ಹಣವನ್ನು ಮಾತ್ರ ನೀಡಲಾಗಿದೆ. ಉಳಿದ 270 ಕೋಟಿ 49 ಲಕ್ಷ ಹಣವನ್ನು ಬಜೆಟ್ನಲ್ಲಿ ಇಟ್ಟಿಲ್ಲ. ಬಿಜೆಪಿಯವರು ಹೇಳೋದೊಂದು ಮಾಡೋದೊಂದು. ಇದಕ್ಕೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ ಎಂಬ ನಂಬಿಕೆ ನನಗಿದೆ.