ಯುದ್ದಗ್ರಸ್ಥ ಯುಕ್ರೇನ್ (Ukraine) ನಿಂದ ನೂರಾರು ಸಂಖ್ಯೆಯ ವಿದ್ಯಾರ್ಥಿಗಳನ್ನು ಭಾರತಕ್ಕೆ ವಾಪಸ್ ಕರೆತರಲಾಗಿದೆ. ಆ ವಿದ್ಯಾರ್ಥಿಗಳನ್ನು ಕೇಂದ್ರ ಸಚಿವರು ( Central Ministers), ರಾಜ್ಯಗಳ ಸಚಿವರು ವಿಮಾನ ನಿಲ್ದಾಣದಲ್ಲಿ ಎದುರುಗೊಂಡು ಭಾರತದ ಬಾವುಟ ನೀಡಿ ಫೋಟೋಗೆ ಪೋಸ್ ಕೊಡುವ ಉದ್ದೇಶ ಏನು ? ಯಾವುದೋ ದೇಶದ ಯುದ್ದವನ್ನೂ, ಅಲ್ಲಿಂದ ಬಚಾವಾಗಿ ಬಂದಿರುವ ವಿದ್ಯಾರ್ಥಿಗಳನ್ನು ಪಕ್ಷವೊಂದು ಹೀಗೆ ಪ್ರಚಾರಕ್ಕೆ ಬಳಸುವುದು ನಾಚಿಕೆಗೇಡಿನದ್ದು. ಯುಕ್ರೇನ್ ನಿಂದ ಕೇವಲ ನೂರಾರು ಭಾರತೀಯರನ್ನು ವಾಪಸ್ ಕರೆತರುವ ಚಿಕ್ಕ ಕಾರ್ಯಾಚರಣೆಗೆ “ಅಪರೇಷನ್ ಗಂಗಾ” ( Operation Ganga) ಎಂದು ಹೆಸರು ಕೊಡಲಾಗಿದೆ. ಈ ರೀತಿ ಗಂಗಾ ಎಂದು ಹೆಸರು ಕೊಡಲು ಕಾರಣ ಉತ್ತರ ಪ್ರದೇಶ ಚುನಾವಣೆ !
ಯುದ್ದಪೀಡಿತ ಪ್ರದೇಶದಿಂದ ನಮ್ಮ ದೇಶದವರು ವಾಪಸ್ ಕರೆತರಲು ಶ್ರಮ ವಹಿಸುವುದು ಒಕ್ಕೂಟ ಸರ್ಕಾರದ (Union government) ಜವಾಬ್ದಾರಿ. ಅದರಲ್ಲಿ ಹೆಚ್ಚುಗಾರಿಕೆಯಾಗಲೀ, ಪ್ರದರ್ಶನವಾಗಲೀ ಬೇಕಾಗಿಲ್ಲ.
ಹಾಗೇ ನೋಡಿದರೆ ಮನಮೋಹನ್ ಸಿಂಗ್ (Manmohan Singh ) ಪ್ರಧಾನಿಯಾಗಿದ್ದಾಗ ಮೌನವಾಗಿ ಅತೀ ದೊಡ್ಡ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು. ಅದು ನೂರಾರು ಮಂದಿಯಲ್ಲ, ಬರೋಬ್ಬರಿ ಹದಿನೈದು ಸಾವಿರ ಮಂದಿಯನ್ನು ಲಿಬಿಯಾ ಎಂಬ ದೇಶದಿಂದ ಸಿನಿಮೀಯಾ ರೀತಿಯಲ್ಲಿ ರಕ್ಷಿಸಲಾಯಿತು. ಈ ಅತೀ ದೊಡ್ಡ ಕಾರ್ಯಾಚರಣೆಗೆ ಮನಮೋಹನ್ ಸಿಂಗ್ ಕೊಟ್ಟ ಹೆಸರು “ಆಪರೇಷನ್ ಸೇಫ್ ಹೋಮ್ಕಮಿಂಗ್”! ಎಲ್ಲೂ ಸದ್ದುಗದ್ದಲವಿರಲಿಲ್ಲ, ಪ್ರಚಾರವೂ ಇರಲಿಲ್ಲ. ನೂರು, ಇನ್ನೂರು, ಐನ್ನೂರು ಸಾವಿರವಲ್ಲ, ಬರೋಬ್ಬರಿ 15,000 ಜನ ಭಾರತೀಯರು ಲಿಬಿಯಾ ಯುದ್ದಭೂಮಿಯಿಂದ ( Libya Civil War) ಉಚಿತವಾಗಿ ಭಾರತದ ತಮ್ಮ ಮನೆಗಳನ್ನು ಸುರಕ್ಷಿತವಾಗಿ ಸೇರಿಕೊಂಡಿದ್ದರು.
ಲಿಬಿಯಾ ದೇಶದಲ್ಲಿ ಗಡಾಫಿ ವಿರುದ್ದ ಶುರುವಾದ ಅಂತರ್ಯುದ್ದವು ಜಗತ್ತಿನ ಅತೀ ಕ್ರೂರವಾದ ಮತ್ತು ಅತೀ ದೊಡ್ಡದಾದ ಅಂತರ್ ಯುದ್ಧವಾಗಿತ್ತು. ಭಾರತದ 15 ಸಾವಿರ ನಾಗರಿಕರು ಲಿಬಿಯಾದ ಅಂತರ್ಯುದ್ದದಲ್ಲಿ ಸಿಲುಕಿಕೊಂಡಿದ್ದರು. ಆಗ ಮನಮೋಹನ್ ಸಿಂಗ್ ಸರ್ಕಾರವು ಲಿಬಿಯಾದ ಜೊತೆ ಮಾತನಾಡಿ ಮುಚ್ಚಿದ್ದ ಬಂದರುಗಳನ್ನು ತೆರೆಯುವಂತೆ ಮಾಡಿತ್ತು. ಮನಮೋಹನಸಿಂಗ್ ಮನವಿಯಂತೆ ಲಿಬಿಯಾದಲ್ಲಿ ಬಂದರುಗಳು ಓಪನ್ ಆಗುತ್ತಿದ್ದಂತೆ ಭಾರತದ ನೌಕಾಪಡೆಯ ಹಡಗನ್ನು ಲಿಬಿಯಾಗೆ ರವಾನಿಸಲಾಯ್ತು.
ಭಾರತೀಯ ನೌಕಾಪಡೆಯು (Indian Navy) ತನ್ನ ಅತಿದೊಡ್ಡ ಉಭಯಚರ ನೌಕೆ INS ಜಲಶ್ವಾ ಸೇರಿದಂತೆ ಮೂರು ನೌಕಾ ಯುದ್ಧನೌಕೆಗಳನ್ನು ಲಿಬಿಯಾದಲ್ಲಿ ಅಪಾಯದಲ್ಲಿದ್ದ ಸುಮಾರು 15,000 ಭಾರತೀಯರನ್ನು ಕರೆತರಲು ಕಳುಹಿಸಿತು. 15,000 ಭಾರತೀಯರನ್ನು ಯುದ್ದಗ್ರಸ್ಥ ನೆಲದಿಂದ ಬಚಾವ್ ಮಾಡುವುದಲ್ಲದೇ ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಭಾರತೀಯರನ್ನು ರಕ್ಷಣೆ ಮಾಡಲು ಎರಡು ವಿಧ್ವಂಸಕ ಯುದ್ದ ನೌಕೆ ಮತ್ತು ಐಎನ್ಎಸ್ ಜಲಶ್ವಾ ಸೇರಿದಂತೆ ಮೂರು ಯುದ್ಧನೌಕೆಗಳನ್ನು ಲಿಬಿಯಾಗೆ ಕಳುಹಿಸಿತ್ತು. ಅಂದರೆ ಸಂಧರ್ಭ ಬಂದರೆ ಭಾರತೀಯರ ರಕ್ಷಣೆಯನ್ನು ದೂರದ ಲಿಬಿಯಾದಲ್ಲಿ ಯುದ್ದ ಮಾಡಿಯಾದರೂ ರಕ್ಷಿಸುತ್ತೇವೆ ಎಂದು ಅಂದಿನ ಪ್ರಧಾನಿ ನಿರ್ಧಾರ ತೆಗೆದುಕೊಂಡಿದ್ದಲ್ಲದೇ ಲಿಬಿಯಾಗೆ ಜನರ ರಕ್ಷಣಾ ಹಡಗುಗಳ ಜೊತೆ ಯುದ್ದನೌಕೆಯನ್ನೂ ಕಳುಹಿಸಲಾಯಿತು. ಅದೂ ಲಿಬಿಯಾದಲ್ಲಿ ಮುಚ್ಚಿದ್ದ ಬಂದರನ್ನು ಮನಮೋಹನ್ ಸಿಂಗ್ ಹೇಳಿ ತೆರೆಸಿದ್ದರು. ಹತ್ತು ದಿನಗಳ ಕಾಲ ಯುದ್ದ ನೌಕೆಗಳು ಲಿಬಿಯಾ ಪ್ರಯಾಣ ಮಾಡಿ ಭಾರತೀಯರ ರಕ್ಷಣಾ ಕಾರ್ಯವನ್ನು ಮಾಡಿದವು. ಅಂದರೆ ಯುಕ್ರೆನಿನಂತೆ ಒಂದೆಡೆ ಸೇರಿದ್ದವರನ್ನು ಕರೆದುಕೊಂಡು ಬಂದಂತೆ ಅಲ್ಲ. ಇಡೀ ಲಿಬಿಯಾವೇ ಯುದ್ದಗ್ರಸ್ಥವಾಗಿದ್ದು ಅಲ್ಲಿನ ನೂರಾರು ನಗರಗಳ ಒಳ ನುಗ್ಗಿ ಭಾರತೀಯರನ್ನು ಹುಡುಕಿ ರಕ್ಷಿಸಬೇಕಿತ್ತು !
ಮತ್ತೊಂದೆಡೆ ಏರ್ ಇಂಡಿಯಾ ಮತ್ತು ಏರ್ ಫೋರ್ಸ್ ಬಳಸಿಕೊಂಡು ವಾಯು ಮಾರ್ಗದ ಮೂಲಕವೂ ಲಿಬಿಯಾದಿಂದ ಭಾರತೀಯರನ್ನು ರಕ್ಷಿಸಲಾಯಿತು. ಅಂತರ್ಯುದ್ದವಾದ್ದರಿಂದ ದಿನಬೆಳಗಾಗುವುದರೊಳಗೆ ಹಲವು ಭಾರತೀಯರು ಲಿಬಿಯಾ ಗಡಿ ದಾಟಿ ಪಕ್ಕದ ಈಜಿಪ್ಟ್ ಮತ್ತಿತರ ದೇಶಗಳಿಗೆ ಪಲಾಯನ ಮಾಡಿದ್ದರು. ಅದಕ್ಕೆಂದೇ ಏರ್ ಪೋರ್ಸ್ ಪ್ರತ್ಯೇಕ ಕಾರ್ಯಾಚರಣೆ ಮಾಡಿತ್ತು. ಈ ಮಧ್ಯೆ ವಿಮಾನಗಳು ಸಾಲದಾದಾಗ ಪ್ರತೀ ಖಾಸಗಿ ವಿಮಾನ ಕಂಪನಿಯು ಒಂದೊಂದು ವಿಮಾನವನ್ನು ಭಾರತೀಯರ ರಕ್ಷಣೆಗೆಂದು ಕಳುಹಿಸಬೇಕು ಎಂದು ಮನಮೋಹನ್ ಸಿಂಗ್ ಆದೇಶ ನೀಡಿದರು. ಮಲ್ಯನ ಕಿಂಗ್ ಫಿಶರ್, ಜೆಟ್ ಏರ್ ವೇಸ್ ಸೇರಿದಂತೆ ಎಲ್ಲಾ ವಿಮಾನ ಕಂಪನಿಗಳು ಒಂದೊಂದು ವಿಮಾನವನ್ನು ರಕ್ಷಣಾ ಕಾರ್ಯಾಚರಣೆಗೆಂದು ನೀಡಿದವು. ಈ ವಿಮಾನಗಳ ಜೊತೆ ಅಗತ್ಯ ಬಿದ್ದರೆ ಫೈಟ್ ಮಾಡಲು ವಾಯುಪಡೆಯ ಯುದ್ದವಿಮಾನವನ್ನೂ ಕಳುಹಿಸಿದ್ದರು. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು ಯಶಸ್ವಿಯಾಗಿ ಲಿಬಿಯಾ ಯುದ್ದಭೂಮಿಯಿಂದ 15,000 ಭಾರತೀಯರನ್ನು ಯಶಸ್ವಿಯಾಗಿ ಭಾರತದ ಮನೆಗಳಿಗೆ ತಲುಪಿಸಿತ್ತು. ಅಮೇರಿಕಾದಂತಹ ರಾಷ್ಟ್ರಗಳನ್ನು ಹೊರತುಪಡಿಸಿದರೆ ಈ ರೀತಿಯ ರಕ್ಷಣಾ ಕಾರ್ಯಾಚರಣೆಯನ್ನು ಮನಮೋಹನ್ ಸಿಂಗ್ ನೇತೃತ್ವದ ಭಾರತ ಸರ್ಕಾರ ಮಾತ್ರ ನಡೆಸಿರುವುದು !
ಯಾವ ಸದ್ದು ಗದ್ದಲವಿಲ್ಲದೇ, ಚುನಾವಣೆಯ ಲಾಭಕ್ಕಾಗಿ ಆ ರಕ್ಷಣಾ ಕಾರ್ಯಾಚರಣೆಗೆ ಭಾವನಾತ್ಮಕ ಹೆಸರುಗಳನ್ನು ಇಡದೇ, ಫೋಟೋಗೆ ಪೋಸ್ ಕೊಡದೇ ಮನಮೋಹನ್ ಸಿಂಗ್ ಸರ್ಕಾರ ಮೌನವಾಗಿ ತಮ್ಮ ಕರ್ತವ್ಯ ಪೂರೈಸಿದ್ದರು. ಈಗ ಐನೂರರಷ್ಟಿರುವ ಭಾರತೀಯರನ್ನು ಯುಕ್ರೇನ್ ವಿಮಾನನಿಲ್ದಾಣದಿಂದ ಕರೆತಂದಿರುವುದನ್ನು ಪ್ರದರ್ಶನ ಮಾಡಲಾಗುತ್ತಿದೆ.