ಪುನೀತ್ ರಾಜ್ ಕುಮಾರ್ ( Puneet Rajkumar ) ಅವರ ಸ್ಮಾರಕವನ್ನು ಸದ್ಯದಲ್ಲಿಯೇ ನಿರ್ಮಿಸಲಾಗುವುದು ಹಾಗೂ “ಕರ್ನಾಟಕ ರತ್ನ” ಪ್ರಶಸ್ತಿ ಪ್ರದಾನ ದಿನಾಂಕವನ್ನೂ ಘೋಷಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ( CM Basavaraj Bommai ) ತಿಳಿಸಿದರು.
ಇಂದು ಕಂಠೀರವ ಸ್ಟುಡಿಯೋದಲ್ಲಿ ಚಿತ್ರನಟ ಅಂಬರೀಶ್ ( Actor Ambareesh ) ಅವರ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿ ಅವರು, ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ಸಣ್ಣ ಕೃತಜ್ಞತೆ ಹೇಳುವ ಭಾಗ್ಯ ನನಗೆ ದೊರೆತಿದೆ. ಅವರು ಎಲ್ಲೇ ಇದ್ದರೂ ಅವರು ನಮ್ಮನ್ನು ನೆನೆಸಿಕೊಳ್ಳುತ್ತಾರೆ ಎಂದರು.
“ಅಂಬರೀಶ್ ಅವರನ್ನು ಯಾವಾಗಲೂ ಅಂಬರೀಶ್ ಎಂದೇ ಸಂಬೋಧಿಸುತ್ತಿದ್ದೆ. ಈಗಲೂ ಹಾಗೆಯೇ ಕರೆಯುತ್ತೇನೆ. ನಮ್ಮದು 40 ವರ್ಷಗಳಿಗೂ ಮಿಗಿಲಾದ ಸ್ನೇಹ. ಒಟ್ಟಿಗೆ ಓಡಾಡಿ, ಸಮಯ ಕಳೆದಿದ್ದೇವೆ.ಊಟ ಮಾಡಿದ್ದೇವೆ. ಕರ್ನಾಟಕದಾದ್ಯಂತ ಸುತ್ತಿದ್ದೇವೆ. ಮಾಡಬಹುದಾದ್ದನ್ನು ಮಾಡಬಾರದ್ದನ್ನು ಮಾಡಿದ್ದೇವೆ” ಅಂಬರೀಶ್ ಅವರೊಂದಿಗಿನ ಒಡನಾಟವನ್ನು ಅವರು ಸ್ಮರಿಸಿದರು.
ಪುನೀತ್ ಅವರ ಸ್ಮಾರಕವನ್ನು ಸದ್ಯದಲ್ಲಿಯೇ ನಿರ್ಮಿಸಲಾಗುವುದು ಹಾಗೂ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ದಿನಾಂಕವನ್ನೂ ಘೋಷಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.