ಜವಹರ್ಲಾಲ್ ನೆಹರೂ ವಿಶ್ವವಿದ್ಯಾನಿಲಯದ (JNU) ಮಾಜಿ ವಿದ್ಯಾರ್ಥಿ ನಾಯಕ, ಹೋರಾಟಗಾರ ಉಮರ್ ಖಾಲಿದ್ಅವರನ್ನು ಮತ್ತೆ ಕೈಕೋಳಗಳೊಂದಿಗೆ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಉಮರ್ ಖಾಲಿದ್ ಅವರನ್ನು “ಕೈಕೋಳ ಅಥವಾ ಸಂಕೋಲೆಗಳನ್ನು ಬಳಸದೆ” ಹಾಜರುಪಡಿಸಬೇಕೆಂದು ಇತ್ತೀಚಿನ ನ್ಯಾಯಾಲಯದ ಆದೇಶದ ಹೊರತಾಗಿಯೂ, ಫೆಬ್ರವರಿ 17 ರಂದು ಅವರನ್ನು ಕೈಕೋಳದೊಂದಿಗೆ ಪಟಿಯಾಲಾ ಹೌಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಕಳೆದ ವರ್ಷ, ದೆಹಲಿ ನ್ಯಾಯಾಲಯವು ಖಾಲಿದ್ ಮತ್ತು ಇನ್ನೊಬ್ಬ ಆರೋಪಿ ವಿದ್ಯಾರ್ಥಿ ಹೋರಾಟಗಾರ ಖಾಲಿದ್ ಸೈಫಿಯನ್ನು ಕೈಕೋಳದಲ್ಲಿ ಹಾಜರುಪಡಿಸಲು ದೆಹಲಿ ಪೊಲೀಸರ ನೀಡಿದ್ದ ಮನವಿಯನ್ನು ವಜಾಗೊಳಿಸಿತ್ತು, ಸೂಕ್ತ ಕಾರಣ ಕೇಳಿ ಉಪ ಪೊಲೀಸ್ ಆಯುಕ್ತರಿಂದ (ಡಿಸಿಪಿ) ವಿವರಣೆಯನ್ನು ಸಹ ಕೇಳಿತ್ತು.
2020 ರಿಂದ ದೆಹಲಿ ಗಲಭೆ ಎಫ್ಐಆರ್ ಸಂಖ್ಯೆ 59 ಗೆ ಸಂಬಂಧಿಸಿದ ಪ್ರಕರಣದಲ್ಲಿ ಖಾಲಿದ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದೆ.
ಕೈಕೋಳದೊಂದಿಗೆ ಕೋರ್ಟಿಗೆ ಹಾಜರುಪಡಿಸಿರುವುದನ್ನು ಉಮರ್ ಖಾಲಿದ್ ವಕೀಲ ಸ್ಪಷ್ಟಪಡಿಸಿದ್ದಾರೆ. ಈ ಕ್ರಮದ ವಿರುದ್ಧ ಪ್ರಶ್ನಿಸಿರುವ ಅವರು, ಕಳೆದ ಮೇ 6 ರಂದು ಉಮರ್ ಖಾಲಿದ್ ಮತ್ತು ಸೈಫಿ ಅವರನ್ನು ಕೈಕೋಳದೊಂದಿಗೆ ಕೋರ್ಟ್ಗೆ ಹಾಜರುಪಡಿಸಲು ದೆಹಲಿ ಪೊಲೀಸರು ಅನುಮತಿ ಕೋರಿದ್ದರು. ASJ ವಿನೋದ್ ಯಾದವ್ ಈ ಮನವಿಯನ್ನು ನಿರಾಕರಿಸಿದ್ದರು ಎಂದು ತಿಳಿಸಿದ್ದಾರೆ.
ಸಬ್-ಇನ್ಸ್ಪೆಕ್ಟರ್ ರಣಬೀರ್ ಸಿಂಗ್ ಮತ್ತು ಸಹಾಯಕ ಸಬ್-ಇನ್ಸ್ಪೆಕ್ಟರ್ ಕ್ರಿಶನ್ ಕುಮಾರ್, ಖಾಲಿದ್ನನ್ನು ಕೈಕೋಳದಲ್ಲಿ ಹಾಜರುಪಡಿಸುವ ಕ್ರಮದ ಬಗ್ಗೆ ಕೇಳಿದಾಗ, 2021 ಏಪ್ರಿಲ್ 7 ರಂದು ಪಟಿಯಾಲ ಹೌಸ್ ಕೋರ್ಟ್ನ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಂಕಜ್ ಶರ್ಮಾ ಅವರು ನೀಡಿದ ಆದೇಶದ ಮೇರೆಗೆ ನಾವು ಹಾಗೆ ಮಾಡಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಸಿಎಂಎಂ) ಶರ್ಮಾ ಅವರು ನೀಡಿದ್ದಾರೆ ಎನ್ನಲಾದ ಅಂತಹ ಯಾವುದೇ ಆದೇಶದ ಅಸ್ತಿತ್ವವನ್ನು ಖಾಲಿದ್ ಪರ ವಕೀಲರು ಪ್ರಶ್ನಿಸಿದ್ದಾರೆ. 2021 ರ ಏಪ್ರಿಲ್ 7ರಂದು ʼಖಾಲಿದ್ ಅವರನ್ನು ಕೈಕೋಳದಲ್ಲಿ ಹಾಜರುಪಡಿಸಬಹುದೆಂದುʼ ಬಂದ ವರದಿಯ ಆಧಾರದ ಮೇಲೆ ಖಾಲಿದ್ ಪರ ವಕೀಲರು ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಆದರೆ, ಅಂತಹ ಆದೇಶ ಇದೆಯಾದರೆ ಅದರ ಪ್ರತಿಯನ್ನು ನೀಡುವಂತೆ ಕೋರ್ಟ್ ಕೇಳಿತ್ತು. ಬಳಿಕ ಅಂತಹ ಯಾವುದೇ ನಿರ್ದೇಶನವನ್ನು ನ್ಯಾಯಾಲಯ ನೀಡಿಲ್ಲ ಎನ್ನುವುದು ಸ್ಪಷ್ಟವಾಗಿತ್ತು.
2016 ರಿಂದ ಜೆಎನ್ಯು ದೇಶದ್ರೋಹ ಪ್ರಕರಣದ ವಿಚಾರಣೆ ನಡೆಸುತ್ತಿರುವ ಶರ್ಮಾ ಅವರು ಈ ವಿಷಯದಲ್ಲಿಲಾಕಪ್ ಉಸ್ತುವಾರಿ ಮತ್ತು ತಿಹಾರ್ ಸೆಂಟ್ರಲ್ ಜೈಲಿನ ಜೈಲು ಅಧೀಕ್ಷಕರಿಗೆ ನೋಟಿಸ್ ಜಾರಿ ಮಾಡಿದ್ದರು.

ಬಳಿಕ, ಅವರು ಜನವರಿ 17, 2022 ರಂದು, ಖಾಲಿದ್ಗೆ ಕೈಕೋಳ ಅಥವಾ ಸಂಕೋಲೆ ಹಾಕಬಾರದು ಎಂದು ನಿರ್ದಿಷ್ಟ ಆದೇಶವನ್ನು ಜಾರಿಗೊಳಿಸಿದರು.
ಈ ಆದೇಶದಲ್ಲಿ, ಚಾಲ್ತಿಯಲ್ಲಿರುವ COVID-19 ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು, ಖಾಲಿದ್ನನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರುಪಡಿಸಬೇಕು ಎಂದು ಸಿಎಂಎಂ ಶರ್ಮಾ ಹೇಳಿದ್ದಾರೆ.
ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ, ಖಾಲಿದ್ ಅವರನ್ನು “ನಿಯಮಿತ ರೀತಿಯಲ್ಲಿ, ಕೈಕೋಳ ಅಥವಾ ಸಂಕೋಲೆಗಳನ್ನು ಬಳಸದೆ” ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಅವರು ಉಲ್ಲೇಖಿಸಿದ್ದರು.
ಖಾಲಿದ್ ಮತ್ತು ಇತರರನ್ನು ಕೈಕೋಳದಲ್ಲಿ ಹಾಜರುಪಡಿಸಲು ಕೇಳಿದ್ದ ಮನವಿಯನ್ನು ತಳ್ಳಿಹಾಕಿದ ಬಳಿಕ, ಜನವರಿ 17 ರ ತನ್ನ ಆದೇಶದಲ್ಲಿ, ಸಿಎಂಎಂ ನ್ಯಾಯಾಲಯವು ಆದೇಶದ ಪ್ರತಿಯನ್ನು ಜೈಲು ಅಧೀಕ್ಷಕರಿಗೆ ಕಳುಹಿಸುವಂತೆ ಸೂಚಿಸಿತ್ತು.
ಇದಕ್ಕೂ ಮೊದಲು, ಮತ್ತೊಂದು ದೆಹಲಿ ನ್ಯಾಯಾಲಯ ಕೂಡಾ ಖಾಲಿದ್ ನನ್ನು ಕೈಕೋಳದಲ್ಲಿ ಹಾಜರುಪಡಿಸಬಾರದು ಎಂದು ನಿರ್ದಿಷ್ಟ ನಿರ್ದೇಶನಗಳನ್ನು ನೀಡಿತ್ತು.
ಏಪ್ರಿಲ್, 2021 ರಲ್ಲಿ, ಖಾಲಿದ್ ಮತ್ತು ಸೈಫಿ “ಅಪಾಯಕಾರಿ ಕೈದಿಗಳು” ಎಂದು ಉಲ್ಲೇಖಿಸಿ, ಅವರನ್ನು ಕೈಕೋಳದಲ್ಲಿ ಕರೆತರಲು ದೆಹಲಿ ಪೊಲೀಸರು ಮನವಿ ಸಲ್ಲಿಸಿದಾಗ, ASJ ಯಾದವ್ ಅವರು ಪೊಲೀಸರ ಮನವಿಯಲ್ಲಿ ಹುರುಳಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತ್ತು.
ಹೀಗೆ ವಿವಿಧ ನ್ಯಾಯಾಲಯಗಳಿಂದ ಉಮರ್ ಖಾಲಿದ್ ಅವರನ್ನು ಕೈಕೋಳ ಅಥವಾ ಸಂಕೋಲೆಗಳಿಂದ ಕೋರ್ಟಿಗೆ ಕರೆತರಬಾರದೆಂಬ ಸ್ಪಷ್ಟ ಉದ್ದೇಶ ಇದ್ದರೂ ದೆಹಲಿ ಪೊಲೀಸರು ಕೈಕೋಳಗಳಿಂದ ಉಮರ್ ಖಾಲಿದ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿರುವುದು ಚರ್ಚೆಗೆ ಕಾರಣವಾಗಿದೆ.