ನವದೆಹಲಿ:ದೇಶಾದ್ಯಂತ ಮಳೆಯ (Heavy Rain Effect) ಅಬ್ಬರ ಜೋರಾಗಿದೆ. ಕರ್ನಾಟಕ, ಕೇರಳ ಮಾತ್ರವಲ್ಲದೇ ನಿನ್ನೆ ದೆಹಲಿಯಲ್ಲಿ ಕೂಡ ಮಳೆಯ ಆರ್ಭಟ ಜೋರಾಗಿದ್ದು, ಅಚ್ಚರಿಯ ಸಂಗತಿಯೆಂದರೆ ₹970 ಕೋಟಿ ವೆಚ್ಚದಲ್ಲಿ ನಿರ್ಮಿಸಲ್ಪಟ್ಟ ನೂತನ ಸಂಸತ್ ಭವನದಲ್ಲಿ ಮೊದಲ ಮಳೆಗೆ ಸೋರಿಕೆಯಾಗಿದೆ (New Parliament Building Roof Leak) ಎಂಬ ಗಂಭೀರ ಆರೋಪ ಕೇಳಿ ಬಂದಿದೆ.ಕೇಂದ್ರದ ನರೇಂದ್ರ ಮೋದಿ ಸರ್ಕಾರ ಸುಮಾರು ₹970 ಕೋಟಿ ವೆಚ್ಚದಲ್ಲಿ ನಿರ್ಮಿಸಲ್ಪಟ್ಟ ನೂತನ ಪಾರ್ಲಿಮೆಂಟ್ ಭವನದಲ್ಲಿ ಮೊದಲ ಮಳೆಗೆ ಸೋರಿಕೆ ಉಂಟಾಗಿದ್ದು,ಈ ಕುರಿತು ವಿಪಕ್ಷಗಳು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡಿವೆ.ಗುರುವಾರ ಭಾರೀ ಮಳೆಯಿಂದಾಗಿ ಲಾಬಿಯಲ್ಲಿ ನೀರು ಸೋರಿಕೆಯಾಗಿದೆ ಎಂದು ಹೇಳಲಾದ ವೀಡಿಯೊವನ್ನು ಕಾಂಗ್ರೆಸ್ ಸಂಸದ ಮಾಣಿಕ್ಕಂ ಟ್ಯಾಗೋರ್ ಅವರು ಕೂಡ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಮಾಣಿಕ್ಕಂ ಟ್ಯಾಗೋರ್ (ManickamTagore B) ಅವರು ಈ ವಿಷಯದ ಕುರಿತು ಮುಂದೂಡಿಕೆ ನಿರ್ಣಯವನ್ನು ಮಂಡಿಸಿದರೆ, ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ಹೊಸ ಸಂಸತ್ತನ್ನು ನಿರ್ಮಿಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ ಎಂದು ಬಿಜೆಪಿಯನ್ನು ಲೇವಡಿ ಮಾಡಿದ್ದಾರೆ. ಅಲ್ಲದೇ, ನೂತನ ಸಂಸತ್ ಭವನದಲ್ಲಿ ನೀರು ಸೋರಿಕೆ ತಡೆಗಟ್ಟುವ ತನಕ ಕಲಾಪವನ್ನು ಹಳೆಯ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ‘ಹಳೆ ಸಂಸದರು ಕೂಡ ಬಂದು ಭೇಟಿಯಾಗುತ್ತಿದ್ದ ಹಳೆಯ ಸಂಸತ್ ಭವನ ಇದಕ್ಕಿಂತ ಚೆನ್ನಾಗಿತ್ತು, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಟ್ಟಡದಲ್ಲಿ ‘ನೀರು ತೊಟ್ಟಿಕ್ಕುವ ಕಾರ್ಯಕ್ರಮ’ ನಡೆಯುವವರೆಗೂ ಹಳೇ ಸಂಸತ್ತಿಗೆ ಏಕೆ ಹೋಗಬಾರದು’ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ, ‘ಬಿಜೆಪಿ ಸರ್ಕಾರದಲ್ಲಿ ನಿರ್ಮಿಸಿದ ಪ್ರತಿ ಹೊಸ ಛಾವಣಿಯಿಂದಲೂ ನೀರು ಸೋರಿಕೆಯಾಗುತ್ತಿರುವುದು ಅವರ ಸುಸಜ್ಜಿತ ವಿನ್ಯಾಸದ ಭಾಗವೇ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.
Paper leakage outside,
— Manickam Tagore .B🇮🇳மாணிக்கம் தாகூர்.ப (@manickamtagore) August 1, 2024
water leakage inside. The recent water leakage in the Parliament lobby used by the President highlights urgent weather resilience issues in the new building, just a year after completion.
Moving Adjournment motion on this issue in Loksabha. #Parliament pic.twitter.com/kNFJ9Ld21d
ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮಹತ್ವಾಕಾಂಕ್ಷೆಯ ರೂ 20,000 ಕೋಟಿ ರೂಪಾಯಿ ವೆಚ್ಚದ ಕೇಂದ್ರ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿರುವ ಹೊಸ ಸಂಸತ್ ಕಟ್ಟಡವನ್ನು ಮೇ 28, 2023ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಆದರೆ, ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಸಮಾರಂಭವನ್ನು ಬಹಿಷ್ಕರಿಸಿದ್ದವು.ಅತ್ಯಾಧುನಿಕ ಸೌಲಭ್ಯಗಳೊಂದಿಗೆ 64,500 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಹೊಸ ಸಂಸತ್ ಕಟ್ಟಡವನ್ನು 970 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.