ಲೋಕಸಭೆ ಅಥವಾ ವಿಧಾನಸಭೆ ಅಧಿವೇಶನದಲ್ಲಿ ಜನಪ್ರತಿನಿಧಿಗಳಾಗಿ ಆಯ್ಕೆಯಾದವರು ಕ್ಷೇತ್ರದ ಜನರ ಸಮಸ್ಯೆಯನ್ನು ಚರ್ಚೆ ಮಾಡುವುದಕ್ಕೆ ಇರುವ ಅವಕಾಶ. ಸರ್ಕಾರದ ಗಮನ ಸೆಳೆಯುವುದು ಸಂಸದರು, ಶಾಸಕರಾದವರ ಕರ್ತವ್ಯ ಕೂಡ ಹೌದು. ಆದರೆ ಈಗ ನಡೆಯುತ್ತಿರುವ ಲೋಕಸಭೆ ಅಧಿವೇಶನದಲ್ಲಿ ಉಭಯ ಸದನಗಳಿಂದ ದೂರ ಉಳಿಯುವ ನಿರ್ಧಾರವನ್ನು ಕಾಂಗ್ರೆಸ್ ನೇತೃತ್ವದ I.N.D.I.A ಒಕ್ಕೂಟ ನಿರ್ಧಾರ ಮಾಡಲಿದೆ ಎನ್ನಲಾಗಿದೆ. ಇಂದು ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಿರುವ ಎಲ್ಲಾ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಮುಂದಾಗಲಿದ್ದಾರೆ ಎನ್ನಲಾಗ್ತಿದೆ. ಡಿಸೆಂಬರ್ 22ರ ತನಕ ಸಂಸತ್ ಅಧಿವೇಶನ ನಡೆಯಲಿದ್ದು ಬಹಿಷ್ಕಾರ ಮಾಡಲು ಮುಂದಾಗಿದ್ದಾರೆ. ಆದರೆ ಅಧಿವೇಶನದ ಸಮಯದಲ್ಲಿ ಈ ರೀತಿ ಬಹಿಷ್ಕಾರದ ನಿರ್ಧಾರ ಎಷ್ಟು ಸರಿ ಅನ್ನೋ ಪ್ರಶ್ನೆ ಕೂಡ ಉದ್ಬವ ಆಗಿದೆ.
ಲೋಕಸಭೆ ಹಾಗು ರಾಜ್ಯಸಭೆಯಲ್ಲಿ 92 ಸಂಸದರ ಅಮಾನತು..!
ಲೋಕಸಭಾ ಅಧಿವೇಶನದ ಸಮಯದಲ್ಲಿ ಅಸಂಸದೀಯ ವರ್ತನೆಗಾಗಿ ಶುಕ್ರವಾರ 15 ಸಂಸದರನ್ನ ಅಮಾನತು ಮಾಡಿದ ಬಳಿಕ ಸೋಮವಾರ ವಿರೋಧ ಪಕ್ಷಗಳ ಆಕ್ರೋಶ ಹೆಚ್ಚಾಗಿತ್ತು. ವಿಪಕ್ಷದ ಸಂಸದರು ಮತ್ತಷ್ಟು ಗಲಾಟೆ ಮಾಡಿದ್ರು ಅನ್ನೋ ಕಾರಣಕ್ಕೆ ಸೋಮವಾರ 33 ಸಂಸದರನ್ನು ಈ ಮೊದಲು ಅಮಾನತು ಮಾಡಲಾಯ್ತು. ಆ ಬಳಿಕ ಮತ್ತಷ್ಟು ಗಲಾಟೆ ಹೆಚ್ಚಾಯ್ತು ಅನ್ನೋ ಕಾರಣಕ್ಕೆ ಲೋಕಸಭೆ, ರಾಜ್ಯಸಭೆಯಿಂದ ಒಟ್ಟು 77 ಸಂಸದರನ್ನ ಅಧಿವೇಶನದಿಂದ ಹೊರ ಹಾಕಲಾಗಿದೆ. ಒಟ್ಟಾರೆಯಾಗಿ ವಿರೋಧ ಪಕ್ಷಗಳ 92 ಸಂಸದರನ್ನ ಅಮಾನತು ಮಾಡಲಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆಕ್ರೋಶ ಹೊರಹಾಕಿರುವ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಇಂದು ಸಭೆ ಸೇರಲಿದ್ದಾರೆ. ಸರ್ಕಾರವನ್ನು ಪ್ರಶ್ನೆ ಮಾಡುವ ಸಂಸದರನ್ನು ಅಮಾನತು ಮಾಡುವುದನ್ನೇ ಕಾಯಕ ಮಾಡಿಕೊಂಡಿರುವ ಸರ್ಕಾರಕ್ಕೆ ಚಾಟಿ ಬೀಸಲು ನಿರ್ಧಾರ ಮಾಡಲಾಗಿದೆ.
ಅಮಾನತು ಖಂಡಿಸಿ ಸಂಸತ್ ಹೊರಗೆ ಪ್ರತಿಭಟನೆ..!
ಸಂಸದರ ಅಮಾನತು ಖಂಡಿಸಿ ಕಾಂಗ್ರೆಸ್, ಶಿವಸೇನೆ ನಾಯಕರು ಸೇರಿ ಅನೇಕ ಸಂಸದರು ಸಂಸತ್ ಭವನದ ಮೆಟ್ಟಿಲುಗಳ ಮೇಲೆ ಕೂತು ಪ್ರತಿಭಟನೆ ಮಾಡಿದ್ದಾರೆ. ರಘುಪತಿ ರಾಘವ ರಾಜಾರಾಂ ಹಾಡು ಹಾಡುತ್ತ ಮೋದಿ ಸರ್ಕಾರಕ್ಕೆ ಧಿಕ್ಕಾರ ಕೂಗಿದ್ದಾರೆ. ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಾತನಾಡಿ ಸಂಸತ್ ಭವನದ ಮೇಲೆ ದಾಳಿ ಖಂಡನೀಯ, ಇದ್ರಲ್ಲಿ ಗೃಹಸಚಿವ ಅಮಿತ್ಷಾ ನಿರ್ಲಕ್ಷ್ಯವಿದೆ. ಅಮಿತ್ಷಾ ರಕ್ಷಣೆಗಾಗಿ ನಮ್ಮನ್ನ ಟಾರ್ಗೆಟ್ ಮಾಡಿದ್ದಾರೆ. ನಮ್ಮ ಮೇಲೆ ಬುಲ್ಡೋಜರ್ ನೀತಿ ಪ್ರಯೋಗಿಸ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಮಾತನಾಡಿ, ಬಿಜೆಪಿಗೆ ಬಹುಮತ ಸಿಕ್ಕಿರೋದು ಜನರ ರಕ್ಷಣೆಗೆ, ದೇಶದ ರಕ್ಷಣೆಗೆ. ಆದರೆ ದೇಶದ ರಕ್ಷಣೆಗೆ ಭಂಗವಾದ್ರೆ ಅದನ್ನ ವಿರೋಧ ಪಕ್ಷಗಳು ಪ್ರಶ್ನಿಸಬೇಕು. ಪ್ರಶ್ನಿಸುವ ವಿಪಕ್ಷಗಳಿಗೆ ಪ್ರಧಾನಿ ಮೋದಿಯಾಗಲಿ, ಗೃಹ ಸಚಿವ ಅಮಿತ್ಷಾ ಆಗಲಿ ಯಾಕೆ ಉತ್ತರ ಕೊಡುತ್ತಿಲ್ಲ..? ಉತ್ತರ ಕೊಡುವ ಬದಲಿಗೆ ಅಮಾನತು ಮಾಡ್ತಿದ್ದಾರೆ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಸಂಸತ್ನಲ್ಲಿ ಅಮಾನತು ಮಾಡಿದ್ರೆ ಇರುವ ದಾರಿ ಯಾವುದು..?
ಸಂಸತ್ ಭವನದ ಮೇಲೆ ಸ್ಮೋಕ್ ಬಾಂಬ್ ದಾಳಿ ಪ್ರಕರಣದ ಬಗ್ಗೆ ವಿರೋಧ ಪಕ್ಷಗಳು ಮಾತನಾಡುವುದಕ್ಕೆ ಶುರು ಮಾಡಿದರೆ ಸ್ಪೀಕರ್ ತಡೆಯುತ್ತಾರೆ. ಗದ್ದಲ ಮಾಡಿದ್ರೆ ಅಮಾನತು ಮಾಡಿ ಸಂಸತ್ನಿಂದ ಆಚೆ ಹಾಕ್ತಿದ್ದಾರೆ. ವಿಪಕ್ಷಗಳು ಪ್ರಧಾನಿ ಮೋದಿ, ಅಮಿತ್ಷಾ ಉತ್ತರಕ್ಕೆ ಪಟ್ಟು ಹಿಡಿದಿದ್ದೇ ತಪ್ಪಾ..? ತಪ್ಪಲ್ಲ ಪ್ರಧಾನಿ ಈ ಬಗ್ಗೆ ಉತ್ತರ ಕೊಡಬೇಕು ಎನ್ನುವುದಾದರೆ ಅಮಾನತು ಮಾಡಿರುವುದು ತಪ್ಪಾಗುತ್ತದೆ. ಒಂದು ವೇಳೆ ಮೋದಿ, ಅಮಿತ್ ಷಾ ಉತ್ತರ ಅನಾವಶ್ಯಕ ಎಂದರೆ ಸಂಸತ್ನಲ್ಲಿ ಆಗಿರುವ ಘಟನೆ ಸರ್ಕಾರಕ್ಕೆ ಲೆಕ್ಕಕಿಲ್ಲ ಎನ್ನುವಂತಾಗುತ್ತದೆ. ಹೀಗಾಗಿ ಇಂದಿನಿಂದ ಇಡೀ ಸಂಸತ್ ಅಧಿವೇಶನ ಬಹಿಷ್ಕಾರಿಸಲು ಚಿಂತನೆ ಮಾಡಲಾಗಿದೆ. ಲೋಕಸಭೆ ಸ್ಪೀಕರ್, ರಾಜ್ಯಸಭೆ ಸಭಾಪತಿ ನಿರ್ಧಾರ ಖಂಡಿಸಿ ಆಕ್ರೋಶ ಹೊರಹಾಕುತ್ತಿರುವ ವಿಪಕ್ಷಗಳು ಸಂಸತ್ ಕಲಾಪದಿಂದಲೇ ದೂರು ಉಳಿದು ಮೋದಿ ಸರ್ಕಾರದ ಕುತಂತ್ರವನ್ನು ಜನರ ಎದುರು ತೆರೆದಿಡಲು ಮುಂದಾಗಿವೆ.
ಕೃಷ್ಣಮಣಿ