ಬೆಂಗಳೂರು : ಇಡೀ ರಾಜ್ಯದ 63 ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರು ವಲಸೆ ಹೋಗ್ತಿದ್ದಾರೆ. ಇವರಲ್ಲಿ ಶೇಕಡಾ 90ರಷ್ಟು ಮಂದಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು. ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ಸಂದರ್ಭದಲ್ಲಿ ಮಾತನಾಡಿದ ಅವರು, ಇನ್ನು 5 ವರ್ಷಗಳ ಕಾಲ ವಿಧಾನ ಪರಿಷತ್ ಅಧಿಕಾರವಿದ್ದರೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ.ಆಪರೇಷನ್ ಕಮಲ ಮಾಡಿದಾಗ ಮುಂದೆ ತಮಗೆ ಟಿಕೆಟ್ ನೀಡುವುದಾಗಿ ಬಿಜೆಪಿ ನಾಯಕರು ಇವರಿಗೆ ಮಾತು ಕೊಟ್ಟಿದ್ದರು. ಆದರೆ ನುಡಿದಂತೆ ನಡೆಯಲಿಲ್ಲ. ಹೀಗಾಗಿ ಬೇಸತ್ತು ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ ಎಂದು ಹೇಳಿದ್ರು.

ಲಕ್ಷ್ಮಣ ಸವದಿ ತಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಚರ್ಚೆ ಮಾಡಿ ಯಾವುದೇ ಷರತ್ತಿಲ್ಲದೇ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಶಾಸಕಾಂಗ ಪಕ್ಷದ ನಾಯಕರ ಜತೆ ಸಭೆ ಮಾಡಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಲಕ್ಷ್ಮಣ ಸವದಿ, ಸುಮಾರು 25 ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿ ಅನೇಕ ಹುದ್ದೆ ನಿಭಾಯಿಸಿ, ಆ ಪಕ್ಷ ಬಿಟ್ಟು ಕಾಂಗ್ರೆಸ್ ಸೇರುತ್ತಿರುವುದರ ಬಗ್ಗೆ ಕೆಲವರಿಗೆ ಪ್ರಶ್ನೆ ಇರಬಹುದು.ಆದರೆ ನಾನು ಕಾರ್ಯಕರ್ತರ ಜೊತೆ ಚರ್ಚಿಸಿ ಅವರ ಮಾರ್ಗದರ್ಶನದಂತೆ ಕಾಂಗ್ರೆಸ್ ಸೇರಿದ್ದೇನೆ ಎಂದು ಹೇಳಿದರು.