ದೇಶಾದ್ಯಂತ ರೈತ ಹೋರಾಟದ ಕಾವೇರಿದ್ದರೆ, ಕರ್ನಾಟಕದಲ್ಲಿ ಮಾತ್ರ ಜಾತಿಜಾತಿಗಳ ನಡುವೆ ಮೀಸಲಾತಿ ಕಿತ್ತಾಟ ಭುಗಿಲೆದ್ದಿದೆ.
ತೀರಾ ಇತ್ತೀಚಿನವರೆಗೆ ಮೀಸಲಾತಿ ಎಂಬುದು ಶತಮಾನಗಳ ಕಾಲ ಅವಕಾಶವಂಚಿತ ಸಮುದಾಯಗಳಿಗೆ ಸಮಾನ ಅವಕಾಶದ ನೆಲೆ ಒದಗಿಸುವ ಒಂದು ವ್ಯವಸ್ಥೆಯಾಗಿತ್ತು. ಸಂವಿಧಾನದ ಆಶಯ ಕೂಡ ಅದೇ ಆಗಿತ್ತು. ಆದರೆ, ಮೀಸಲಾತಿಯನ್ನು ಮತಬ್ಯಾಂಕ್ ರಾಜಕಾರಣದ ಅಸ್ತ್ರ ಮಾಡಿಕೊಂಡ ರಾಜಕೀಯ ಪಕ್ಷಗಳ ವರಸೆಯಿಂದಾಗಿ ಈಗ, ಮೀಸಲಾತಿ ವ್ಯವಸ್ಥೆ ಜಾರಿಯ ಅನಿವಾರ್ಯತೆ ಸೃಷ್ಟಿಸಿದ ಅಸಮಾನತೆಯ ಸಮಾಜ ನಿರ್ಮಾಣದಲ್ಲಿ ಪಾಲುದಾರರಾದವರೂ ಪಾಲು ಕೇಳುವ ನಗೆಪಾಟಲಿನ ಸಂಗತಿಯಾಗಿದೆ.
ಅದೂ ಕೂಡ ಸೈದ್ಧಾಂತಿಕವಾಗಿ ಮೀಸಲಾತಿಯ ವಿರುದ್ಧ ಇರುವ ಮತ್ತು ಭಾರತೀಯ ಸಮಾಜದಲ್ಲಿ ಶೋಷಣೆ, ಅಸಮಾನತೆ, ಅಸ್ಪೃಶ್ಯತೆಯಂತಹ ಅಮಾನವೀಯ ಪದ್ಧತಿಗಳೇ ಸಮಾಜದ ಸರ್ವಾಂಗೀಣ ಏಳಿಗೆಗೆ, ಸಮಗ್ರ ಪ್ರಗತಿಗೆ ತೊಡಕು ಎಂಬುದನ್ನು ನಿರಾಕರಿಸುವ ಬಿಜೆಪಿ ಮತ್ತು ಅದರ ಸಂಘಪರಿವಾರಗಳ ನಾಯಕರೇ ಈಗ ಇಂತಹ ಮೀಸಲಾತಿ ಹೋರಾಟಗಳ ವಕಾಲತು ವಹಿಸುತ್ತಿದ್ದಾರೆ. ಇಂತಹ ವಿಪರ್ಯಾಸಕರ ವಿದ್ಯಮಾನಗಳಿಗೆ ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟಗಳು ವೇದಿಕೆಯಾಗಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರಾಜ್ಯದಲ್ಲಿ ಮೀಸಲಾತಿ ಬೇಡಿಕೆ ಎಷ್ಟು ವ್ಯಾಪಕವಾಗಿದೆ ಎಂದರೆ; ರಾಜ್ಯದ ಮೂರು ಪ್ರಮುಖ ಸಮುದಾಯಗಳು ಇಂದು ಮೀಸಲಾತಿ ಹಕ್ಕೊತ್ತಾಯದ ಹೋರಾಟದ ಮುಂಚೂಣಿಯಲ್ಲಿವೆ. ಶತಮಾನಗಳಿಂದ ರಾಜ್ಯದ ಭೂ ಒಡೆತನ, ಶಿಕ್ಷಣ, ರಾಜಕಾರಣ, ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ಎಲ್ಲಾ ವಲಯಗಳಲ್ಲಿ ಒಂದು ರೀತಿಯ ಏಕಸ್ವಾಮ್ಯದಂತಹ ಅಧಿಪತ್ಯ ಸ್ಥಾಪಿಸಿ, ಬದುಕಿನ ಎಲ್ಲ ರಂಗಗಳಲ್ಲಿ ಬಲಾಢ್ಯರಾಗಿರುವ ಈ ಮೂರೂ ಸಮುದಾಯಗಳು ಈಗ ಸ್ವಾತಂತ್ರ್ಯ ಬಂದು ಮುಕ್ಕಾಲು ಶತಮಾನ ಉರುಳಿದ ಬಳಿಕ ದಿಢೀರನೇ ಮೀಸಲಾತಿಗಾಗಿ ಕೂಗೆಬ್ಬಿಸಿರುವುದು ಕುತೂಹಲಕಾರಿ.
ವಿಚಿತ್ರವೆಂದರೆ; ಈ ಮೂರೂ ಬಲಾಢ್ಯ ಸಮುದಾಯಗಳ ಶಿಕ್ಷಿತ-ಅರೆಶಿಕ್ಷಿತ ವರ್ಗ, ತೀರಾ ಇತ್ತೀಚಿನವರೆಗೆ ಮೀಸಲಾತಿಯ ವಿರುದ್ಧದ ದೊಡ್ಡ ದನಿಯಾಗಿ ಕೆಲಸ ಮಾಡಿದ್ದವರು. ಮೀಸಲಾತಿ ಎಂದರೆ ಕೇವಲ ದಲಿತರು ಮಾತ್ರ ಪಡೆಯುತ್ತಿರುವ ಬಿಟ್ಟಿ ಉಂಬಳಿ ಮತ್ತು ಮುಂದುವರಿದ ತಮ್ಮ ಸಮುದಾಯಗಳನ್ನು ತುಳಿಯಲೆಂದೇ ಇರುವ ಒಂದು ಸರ್ಕಾರಿ ವ್ಯವಸ್ಥೆ ಎಂದೇ ಈ ಮಂದಿ ಈವರೆಗೆ ಮೀಸಲಾತಿಯ ವಿರುದ್ಧ ಕೆಂಡ ಕಾರುತ್ತಿದ್ದವರು. ಆದರೆ, ಈಗ ಹೀಗೆ ಏಕಾಏಕಿ ಮೀಸಲಾತಿಗಾಗಿ ಪೈಪೋಟಿಗೆ ಇಳಿದಿರುವುದರ ಹಿಂದೆ ಇತರೆಲ್ಲಾ ಕಾರಣಗಳಿಗಿಂತ ರಾಜಕೀಯ ಕಾರಣಗಳೇ ಹೆಚ್ಚು ಢಾಳಾಗಿ ಕಾಣುತ್ತಿವೆ ಎಂಬುದು ಗುಟ್ಟೇನಲ್ಲ.
ಸಮಾಜವಾದ, ಸಮತಾವಾದ, ಮಾರ್ಕ್ಸ್ ವಾದ, ಅಂಬೇಡ್ಕರ್ ವಾದ ಮುಂತಾದ ತತ್ವ ಸಿದ್ಧಾಂತಗಳ ಬದಲಿಗೆ ರಾಜಕಾರಣ ಮತ್ತು ಸಾರ್ವಜನಿಕ ಜೀವನದಲ್ಲಿ ಮತ- ಧರ್ಮ ಮತ್ತು ಜಾತಿಗಳು ಕೇಂದ್ರಬಿಂದುವಾದಾಗ ಮತ್ತು ರಾಜಕೀಯ ನಾಯಕರು ಜಾತಿ ಮತ್ತು ಧರ್ಮದ ಬಲವೊಂದನ್ನೇ ನೆಚ್ಚಿಕೊಂಡು ಚುನಾವಣಾ ದಾಳಗಳನ್ನು ಉರುಳಿಸುವುದೇ ಯಶಸ್ಸಿನ ಸೂತ್ರವಾದಾಗ, ರಾಜಕಾರಣಿ ಮತ್ತು ಆತನ ಪಕ್ಷವಷ್ಟೇ ಅಲ್ಲ; ಸದ್ಯ ಈಗ ರಾಜ್ಯದಲ್ಲಿ ಆಗುತ್ತಿರುವಂತೆ ಒಂದಿಡೀ ಸರ್ಕಾರವೇ ಜಾತಿ-ಧರ್ಮಗಳ ದಾಳವಾಗುತ್ತದೆ. ಬಿ ಎಸ್ ಯಡಿಯೂರಪ್ಪ ಎಂಬ ಸುದೀರ್ಘ ರಾಜಕೀಯ ಅನುಭವದ ನಾಯಕ, ಮುಖ್ಯಮಂತ್ರಿ ಗಾದಿಯನ್ನು ಪಡದೇ ಪಡೆಯುವ ಎಂಬ ಜಿದ್ದಿಗೆ ಬಿದ್ದು ದಶಕದ ಹಿಂದೆ ಎಬ್ಬಿಸಿದ ಲಿಂಗಾಯತ ರಾಜಕಾರಣದ ಹೊಸ ಅಲೆ ಅವರನ್ನು ಸಿಎಂ ಕುರ್ಚಿಯಲ್ಲಿ ಕೂರಿಸಿದ್ದು ನಿಜ. ಆದರೆ, ಈ ಹತ್ತು ವರ್ಷಗಳಲ್ಲಿ ಆ ಅಲೆ ಯಾವ ಮಟ್ಟದ ಸುನಾಮಿಯಾಗಿ ಬೆಳೆದಿದೆ ಎಂಬುದಕ್ಕೆ ಈಗ ಲಿಂಗಾಯತ ಪಂಚಮಸಾಲಿ ಸಮುದಾಯವೂ ಸೇರಿದಂತೆ ವಿವಿಧ ಲಿಂಗಾಯತ ಒಳಪಂಗಡಗಳ ಮೀಸಲಾತಿ ಹಕ್ಕೊತ್ತಾಯದ ಕೂಗೇ ಸಾಕ್ಷಿ. ಅಧಿಕಾರದ ಆಸೆಗಾಗಿ ಯಡಿಯೂರಪ್ಪ ಅಂದು ಹುಟ್ಟಿಸಿದ ಅಲೆ ಈಗ ಸುನಾಮಿಯಾಗಿ ತಿರುಗುಬಾಣವಾಗಿದೆ. ಜಾತಿ ರಾಜಕಾರಣದ ದಾಳ ಈಗ ಅವರದೇ ಕೊರಳಿಗೆ ಉರುಳಾಗಿ ಪರಿಣಮಿಸಿದೆ!
ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡಬೇಕು ಎಂದು ಸಮುದಾಯದ ಸ್ವಾಮೀಜಿಗಳೇ ಪಾದಯಾತ್ರೆ ಆರಂಭಿಸಿದ್ದರೆ, ಮತ್ತೊಂದು ಕಡೆ ಮತ್ತೊಂದು ಬಲಾಢ್ಯ ಸಮುದಾಯವಾದ ಕುರುಬ ಸಮುದಾಯ ಕೂಡ ತಮ್ಮ ಮಠಾಧೀಶರ ನೇತೃತ್ವದಲ್ಲಿ ಪಾದಯಾತ್ರೆ, ಬೃಹತ್ ಸಮಾವೇಶ ನಡೆಸಿ ತಮಗೆ ಪರಿಶಿಷ್ಟ ಪಂಗಡ(ಎಸ್ ಟಿ) ಮೀಸಲಾತಿ ನೀಡಬೇಕು ಎಂದು ಪಟ್ಟು ಹಿಡಿದಿದೆ. ರಾಜ್ಯದ ಈ ಎರಡು ಪ್ರಬಲ ಸಮುದಾಯಗಳೇ ಮೀಸಲಾತಿಗೆ ಹಕ್ಕೊತ್ತಾಯ ಮಂಡಿಸಿರುವಾಗ ತಾವ್ಯಾಕೆ ಸುಮ್ಮನಿರುವುದು ಎಂದು ಒಕ್ಕಲಿಗರೂ ತಮಗೂ 2ಎ ಮೀಸಲಾತಿ ನೀಡಿ ಎಂದು ಮುಖ್ಯಮಂತ್ರಿಗಳಿಗೆ ಒತ್ತಡ ತಂದಿದ್ದಾರೆ.

ಹೀಗೆ ರಾಜ್ಯದ ಅಧಿಕಾರ, ಸಂಪತ್ತು, ಆಸ್ತಿಪಾಸ್ತಿ ಅನುಭವಿಸಿದ ಮೂರು ಬಲಾಢ್ಯ ಸಮುದಾಯಗಳು, ಅತ್ಯಂತ ಅವಕಾಶವಂಚಿತ, ಶೋಷಿತ ಸಮುದಾಯಗಳಿಗೆ ನೀಡುವ ಮೀಸಲಾತಿಯನ್ನು ತಮಗೂ ನೀಡಿ ಎಂದು ಹೋರಾಟಕ್ಕಿಳಿದಿರುವುದು ಸಹಜವಾಗೇ ಉಳಿದ ಚಿಕ್ಕಪುಟ್ಟ, ನಿಜವಾಗಿಯೂ ಅವಕಾಶವಂಚಿತ ಸಮುದಾಯಗಳಲ್ಲೂ ಆತಂಕ ಹುಟ್ಟಿಸಿದೆ. ಹಾಗಾಗಿ, ಒಂದು ಕಡೆ, ತಮ್ಮ ಮೀಸಲಾತಿ ವರ್ಗೀಕರಣದ ಗುಂಪಿಗೆ ಬಲಿಷ್ಟ ಜಾತಿಗಳನ್ನು ಸೇರಿಸಬೇಡಿ ಎಂದು 2 ಎ ಗುಂಪಿನ ಹಾಲಿ ಸಮುದಾಯಗಳಿಂದ ಪ್ರತಿರೋಧ ಕೇಳಿಬಂದಿದೆ. ಎಸ್ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಎಂಬ ಮತ್ತೊಂದು ಹಕ್ಕೊತ್ತಾಯವೂ ಎದ್ದಿದೆ. ಮತ್ತೊಂದು ಕಡೆ, ಗಾಣಿಗ, ಮಾದಿಗ ಮುಂತಾದ ಈಗಾಗಲೇ ಮೀಸಲಾತಿಯ ಪ್ರಯೋಜನ ಪಡೆಯುತ್ತಿರುವ ಸಮುದಾಯಗಳು ಕೂಡ ಹೆಚ್ಚಿನ ಮೀಸಲಾತಿಯಾಗಿ, ಒಳಮೀಸಲಾತಿಗಾಗಿ ಒತ್ತಾಯಿಸತೊಡಗಿವೆ.
ಕಳೆದೊಂದು ದಶಕದಿಂದ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಸಾಕಷ್ಟು ನಿರ್ಣಾಯಕ ಪಾತ್ರ ವಹಿಸುತ್ತಿರುವ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿ ಕೂಡಲೇ ಜಾರಿಯಾಗಬೇಕು. ಮಾದಿಗರು ಸೇರಿದಂತೆ ವಿವಿಧ ಅವಕಾಶವಂಚಿತ ಪರಿಶಿಷ್ಟ ಜಾತಿಗಳಿಗೆ ನ್ಯಾಯಬದ್ಧವಾಗಿ ಅವಕಾಶ ಸಿಗುವಂತೆ ಒಳಮೀಸಲಾತಿ ಜಾರಿ ಮಾಡಿ ಎಂಬ ಕೂಡ ಭುಗಿಲೆದ್ದಿದ್ದು, ಮಾರ್ಚ್ 25ರಿಂದ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸುವುದಾಗಿ ಸಮುದಾಯದ ಪ್ರಮುಖರು ಘೋಷಿಸಿದ್ದಾರೆ. ಗಾಣಿಗ ಸಮುದಾಯ ಕೂಡ ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಆ ಬಗ್ಗೆ ಹಾಲಿ ಬಜೆಟ್ ಅಧಿವೇಶದಲ್ಲೇ ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು. ಇಲ್ಲವಾದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಸಮುದಾಯದ ನಾಯಕರು ಹೇಳಿದ್ದಾರೆ.
ಈ ನಡುವೆ, ಕುರುಬ ಮೀಸಲಾತಿ ಹೋರಾಟ ಆ ಸಮುದಾಯದ ಇಬ್ಬರು ಪ್ರಮುಖ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಹಾಲಿ ಸಚಿವ ಕೆ ಎಸ್ ಈಶ್ವರಪ್ಪ ನಡುವಿನ ವೈಯಕ್ತಿಕ ಪ್ರತಿಷ್ಠೆಯ ಪ್ರಶ್ನೆಯಾಗಿಯೂ ವಿಸ್ತರಿಸಿದ್ದು, ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಮೀಸಲಾತಿ ಹೋರಾಟ ಸಮಾವೇಶದಿಂದ ಸಿದ್ದರಾಮಯ್ಯ ಅಂತರ ಕಾಯ್ದುಕೊಂಡಿದ್ದಾರೆ. ಆದರೆ, ಬಿಜೆಪಿ ನಾಯಕ ಈಶ್ವರಪ್ಪ, ಸಿದ್ದು ಗೈರು ಹಾಜರಿಯನ್ನೇ ಅವರ ವಿರುದ್ಧದ ಪ್ರಬಲ ಟೀಕಾಸ್ತ್ರವಾಗಿ ಬಳಸಿದ್ದಾರೆ. ವಾಸ್ತವವಾಗಿ ಸಮುದಾಯದಲ್ಲಿ ಸಿದ್ದುಗೆ ಪ್ರತಿಯಾಗಿ ತಮ್ಮ ವರ್ಚಸ್ಸು ಬೆಳೆಸಿಕೊಂಡು ರಾಜ್ಯದ ಸಿಎಂ ಗಾದಿಯ ತಮ್ಮ ಬಹುದಿನಗಳ ಕನಸನ್ನು ನನಸು ಮಾಡಿಕೊಳ್ಳುವ ಉದ್ದೇಶದಿಂದಲೇ ಹಿಂದಿನ ರಾಯಣ್ಣ ಬ್ರಿಗೇಡಿನ ಸುಧಾರಿತ ಆವೃತ್ತಿಯಾಗಿ ಈಶ್ವರಪ್ಪ ಈ ಹೋರಾಟವನ್ನು ಬಳಸಿಕೊಳ್ಳಲು ಯತ್ನಿಸಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಈ ಹೋರಾಟದಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಮಾತು ಆರಂಭದಿಂದಲೂ ಕೇಳಿಬರುತ್ತಿದೆ.
ಆ ಹಿನ್ನೆಲೆಯಲ್ಲಿ; ಇದೀಗ ಸಿದ್ದರಾಮಯ್ಯ ಕೂಡ ಮೀಸಲಾತಿ ವಿಷಯದಲ್ಲಿ ಹಿಂದುಳಿದ ವರ್ಗಗಳ ಮುಂಚೂಣಿ ನಾಯಕರಾಗಿ ತಾವು ಹಕ್ಕೊತ್ತಾಯದ ಕೂಗಿಗೆ ಸ್ಪಂದಿಸಲಿಲ್ಲ ಎಂಬ ಚಾರಿತ್ರಿಕ ಅಪಖ್ಯಾತಿಯಿಂದ ತಪ್ಪಿಸಿಕೊಳ್ಳಲು ಹೊಸ ತಂತ್ರ ಹೂಡಿದ್ದಾರೆ. ಕೇವಲ ತಮ್ಮ ಕುರುಬ ಸಮುದಾಯದ ಮೀಸಲಾತಿಗೆ ದನಿ ಎತ್ತಿ, ಅಹಿಂದ ನಾಯಕ ಕುರಬರ ನಾಯಕರಾದರು ಎಂಬ ಟೀಕೆಗೂ ಗುರಿಯಾಗದೆ, ಸಮುದಾಯದ ಹಕ್ಕೊತ್ತಾಯಕ್ಕೆ ವಿಮುಖರಾದರು ಎಂಬ ಅಸಹನೆಗು ಗುರಿಯಾಗದ ರೀತಿಯಲ್ಲಿ ಹೊಸ ಹೋರಾಟ ಕಟ್ಟಲು ಸಜ್ಜಾಗಿದ್ದಾರೆ. ಕುರುಬ ಮಾತ್ರವಲ್ಲದೆ, ಇತರೆ ಶೋಷಿತ ಸಮುದಾಯಗಳಾದ ನಾಯಕ, ಉಪ್ಪಾರ, ಈಡಿಗ, ತಿಗಳ, ಸವಿತಾ ಸಮಾಜದಂತಹ ಹತ್ತಾರು ಜಾತಿಗಳಿಗೆ ಈಗಿರುವ ಮೀಸಲಾತಿ ಪ್ರಮಾಣ ತೀರಾ ಕಡಿಮೆ. ಅವರಿಗೆ ಹೆಚ್ಚಿನ ಮೀಸಲಾತಿ ಸೌಲಭ್ಯ ಸಿಗಬೇಕು ಎಂಬ ಬೇಡಿಕೆಯನ್ನಿಟ್ಟುಕೊಂಡು ಎಲ್ಲಾ ಸಮುದಾಯಗಳ ಸಂಘಟಿತ ಹೋರಾಟ ಕಟ್ಟಲು, ಸರಣಿ ಸಮಾವೇಶಗಳನ್ನು ಮಾಡಲು ಸಿದ್ದರಾಮಯ್ಯ ತಯಾರಿ ನಡೆಸಿದ್ದಾರೆ!
ಹಾಗಾಗಿಯೇ ಒಂದು ಕಡೆ ಈಶ್ವರಪ್ಪ ಕೇವಲ ತಮ್ಮ ಸಮುದಾಯದ ಹಕ್ಕೊತ್ತಾಯ ಮಂಡಿಸುತ್ತಿದ್ದರೆ, ಮತ್ತೊಂದು ಕಡೆ ಸಿದ್ದರಾಮಯ್ಯ ಕುರುಬರೂ ಸೇರಿದಂತೆ ಇತರೆ ಶೋಷಿತರ ಹಕ್ಕುಗಳ ಬಗ್ಗೆ ಹೆಚ್ಚು ಮಾತನಾಡತೊಡಗಿದ್ದಾರೆ. ಎಸ್ಟಿ ಮೀಸಲಾತಿಯ ಒಟ್ಟು ಪ್ರಮಾಣವನ್ನು ಈಗಿರುವ ಶೇ.3ರಿಂದ ಶೇ.20ಕ್ಕೆ ಹೆಚ್ಚಿಸಬೇಕು. ಆ ಮೂಲಕ ಕುರುಬರೂ ಸೇರಿದಂತೆ ಆ ಗುಂಪಿಗೆ ಸೇರಬೇಕಾದ ಇತರೆ ಸಮುದಾಯಗಳಿಗೂ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ನಡುವೆ, “ಮೀಸಲಾತಿ ವ್ಯವಸ್ಥೆ ಜಾರಿಗೆ ಬಂದು 71 ವರ್ಷಗಳಲ್ಲಿ ಈ ವ್ಯವಸ್ಥೆಯಿಂದ ಅನುಕೂಲ ಮತ್ತು ಅವಕಾಶ ಪಡೆದವರಿಗಿಂತ ಪಡೆಯದವರ ಸಂಖ್ಯೆಯೇ ದೊಡ್ಡದಿದೆ. ಅಲೆಮಾರಿ, ದೇವದಾಸಿ, ಕೊಳಚೆ ನಿವಾಸಿಗಳು ಮುಂತಾದವರು ಇಂದಿಗೂ ಪ್ರಾಥಮಿಕ ಶಿಕ್ಷಣದಿಂದಲೇ ವಂಚಿತರಾಗಿ ಬದುಕುತ್ತಿದ್ದಾರೆ. ಅಂಥವರಿಗೆ ಈ ಮೀಸಲಾತಿಯ ಲವಲೇಶವೂ ಸಿಕ್ಕಿಲ್ಲ. ಹಾಗಾಗಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳಲ್ಲ ಯಾರಿಗೆ ಮೀಸಲಾತಿಯಲ್ಲಿ ವಂಚನೆಯಾಗಿದೆ, ಯಾರಿಗೆ ಅನುಕೂಲವಾಗಿದೆ ಎಂಬುದರ ಕುರಿತು ವೈಜ್ಞಾನಿಕ ಅಧ್ಯಯನಗಳು ಆಗಬೇಕಿದೆ. ಹಾಗೇ ಒಳ ಮೀಸಲಾತಿ ಬಗ್ಗೆ ಮತ್ತು ಕೆನೆ ಪದರ ವ್ಯವಸ್ಥೆಯ ಬಗ್ಗೆಯೂ ನಿರ್ಧಾರ ಕೈಗೊಳ್ಳಬೇಕಿದೆ. ಆ ಬಳಿಕ ಇಡೀ ಮೀಸಲಾತಿ ವ್ಯವಸ್ಥೆಯನ್ನು ಸದ್ಯದ ವಾಸ್ತವಿಕ ಅಂಶಗಳ ಆಧಾರದ ಮೇಲೆ ಪುನರ್ ರಚಿಸಬೇಕಿದೆ. ಆಗ ಮಾತ್ರ ಈಗ ಕೇಳಿಬರುತ್ತಿರುವ ಹಕ್ಕೊತ್ತಾಯದ ದನಿಗಳಿಗೆ ಸಮಾಧಾನಕರ ನ್ಯಾಯ ಒದಗಿಸಲು ಸಾಧ್ಯ. ಇಲ್ಲವಾದಲ್ಲಿ ಈ ಮೀಸಲಾತಿ ಕೂಗು ರಾಜ್ಯದ ದೊಡ್ಡ ಬಿಕ್ಕಟ್ಟಾಗಿ ಕಾಡಲಿದೆ” ಎಂದು ನಿವೃತ್ತ ನ್ಯಾಯಮೂರ್ತಿ ಎಚ್ ಎಸ್ ನಾಗಮೋಹನ್ ದಾಸ್ ಅಭಿಪ್ರಾಯಪಟ್ಟಿದ್ದಾರೆ.
ಹೌದು, ರಾಜಕೀಯ ಲಾಭನಷ್ಟ, ಸಮುದಾಯಗಳ ಮೇಲಿನ ಹಿಡಿತದ ದಾಳವಾಗಿ ಪ್ರಯೋಗವಾಗುತ್ತಿರುವ ವಿವಿಧ ಸಮುದಾಯಗಳ ಮೀಸಲಾತಿ ಹೋರಾಟ ಎಂಬ ಸಾಮಾಜಿಕ ವಿದ್ಯಮಾನ, ಸದ್ಯ ರಾಜ್ಯದ ಬಿಜೆಪಿ ಸರ್ಕಾರ ಮತ್ತು ಸಿಎಂ ಯಡಿಯೂರಪ್ಪ ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ; ಸದ್ಯದಲ್ಲೇ ಈ ವಿದ್ಯಮಾನ ಅಧಿಕಾರಸ್ಥರ ಕೊರಳಿಗೆ ಉರುಳಾಗುವ ಜೊತೆಗೆ, ಇಡೀ ರಾಜ್ಯದ ಪಾಲಿಗೆ ಬಗೆಹರಿಸಲಾಗದ ಬಿಕ್ಕಟ್ಟಾಗಿ ಪರಿಣಮಿಸುವುದರಲ್ಲಿ ಸಂದೇಹವೇ ಇಲ್ಲ!