ನಿಂತಿದ್ದ ಲಾರಿಗೆ ಗುದ್ದಿದ ಕ್ರೂಸರ್ ಗುದ್ದಿದ ಪರಿಣಾಮ 9 ಮಂದಿ ಬಲಿಯಾಗಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳದ ಬಾಲೆನಹಳ್ಳಿ ಬಳಿ ಗುರುವಾರ ಮುಂಜಾನೆ ಸಂಭವಿಸಿದೆ.
ಮುಂಜಾನೆ ನಿಂತಿದ್ದ ಲಾರಿಗೆ ಗುದ್ದಿದ ಕ್ರೂಸರ್ ಗುದ್ದಿದ ಪರಿಣಾಮ 9 ಮಂದಿ ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಮೃತರನ್ನು ರಾಯಚೂರು ಮೂಲದ ಕಷ್ಣಪ್ಪ, ಸುಜಾತ, ವಿನೋದ ಹಾಗೂ ನಾಲ್ಕು ವರ್ಷದ ಎರಡು ಹೆಣ್ಣು ಮಕ್ಕಳು ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ದುರ್ಗಮ್ಮ, ಬಾಲಾಜಿ, ಉಮೇಶ್, ಯಲ್ಲಮ್ಮ, ಅನಿಲ್, ದೇವರಾಜ್, ಮೌನಿಕ, ನಾಗಮ್ಮ, ನಾಗಪ್ಪ, ವಸಂತ, ವೈಶಾಲಿ, ಲಿಲಿತ ಎಂದು ಗುರುತಿಸಲಾಗಿದೆ.

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ವಾಹನದಲ್ಲಿ 20ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಮೃತಪಟ್ಟವರು ರಾಯಚೂರು ಮೂಲದ ಕಾರ್ಮಿಕರು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಕ್ರೂಸರ್ ವಾಹನದ ಕಂಡೀಷನ್ ಸಂಪೂರ್ಣ ಕೆಟ್ಟಿತ್ತು. ನಾಲ್ಕೂ ಚಕ್ರಗಳು ಸಂಪೂರ್ಣ ಸವೆದು ಹೋಗಿದ್ದವು. 12 ಜನ ಸಾಮರ್ಥ್ಯದ ವಾಹನದಲ್ಲಿ 20 ಜನರು ಪ್ರಯಾಣಿಸುತ್ತಿದ್ದರು. ಟಯರ್ ಸವೆದಿದ್ದರಿಂದ ಬ್ಲಾಸ್ಟ್ಗೊಂಡು ಡಿವೈಡರ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಕಳ್ಳಂಬೆಳ್ಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನೆಡೆಸಿದರು. ಭೀಕರ ಅಪಘಾತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪವನ್ನು ಸೂಚಿಸಿದ್ದು, ಮೃತರ ಕುಟುಂಬದವರಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಘಟನೆಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ, ಟ್ವೀಟ್ ಮಾಡಿ ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿ ನಡೆದ ಅಪಘಾತ ಹೃದಯ ವಿದ್ರಾವಕ. ಅಪಘಾತದಲ್ಲಿ ಜೀವ ಕಳೆದುಕೊಂಡವರಿಗೆ ಸಂತಾಪಗಳು. ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.