ಮಂಗಳೂರು : ವೃದ್ಧೆಯ ಸಮಯೋಚಿತ ಕಾರ್ಯದಿಂದಾಗಿ ಭಾರೀ ರೈಲು ದುರಂತವೊಂದು ತಪ್ಪಿದ ಘಟನೆಯು ಮಂಗಳೂರು ಹೊರವಲಯದಲ್ಲಿರುವ ಪಚ್ಚನಾಡಿ ಸಮೀಪದ ಮಂದಾರ ಎಂಬಲ್ಲಿ ಸಂಭವಿಸಿದೆ. ವೃದ್ಧೆಯ ಸಮಯ ಪ್ರಜ್ಞೆಯಿಂದಾಗಿ ಮಂಗಳೂರು – ಮುಂಬೈ ಮತ್ಸ್ಯಗಂಧ ರೈಲು ದುರಂತದಿಂದ ಪಾರಾಗಿದೆ.
ಮಂಗಳೂರು- ಮುಂಬೈ ಮತ್ಸ್ಯಗಂಧ ರೈಲು ಮಧ್ಯಾಹ್ನದ ವೇಳೆಗೆ ಪ್ರತಿನಿತ್ಯ ಮಂದಾರ ರೈಲ್ವೆ ಹಳಿ ಮಾರ್ಗದಲ್ಲಿ ಸಂಚರಿಸಬೇಕಿತ್ತು. ಆದರೆ ಅದೇ ವೇಳೆಗೆ ಸರಿಯಾಗಿ ಭಾರೀಗಾತ್ರದ ಮರವೊಂದು ಹಳಿಯ ಮೇಲೆ ಬಿದ್ದಿತ್ತು. ರೈಲು ಹಳಿಯ ಪಕ್ಕದಲ್ಲೇ ಮನೆಹೊಂದಿದ್ದ ವೃದ್ಧೆ ಚಂದ್ರಾವತಿ ಮನೆಯಲ್ಲಿದ್ದ ಕೆಂಪು ಬಣ್ಣದ ವಸ್ತ್ರ ಹಿಡಿದು ರೈಲಿನಲ್ಲಿದ್ದ ಲೋಕೋಪೈಲಟ್ಗೆ ಅಪಾಯದ ಮುನ್ಸೂಚನೆ ನೀಡಿದ್ದಾರೆ.
ಅಪಾಯವನ್ನು ಅರಿತ ಲೊಕೋಪೈಲಟ್ ಕೂಡಲೇ ರೈಲು ನಿಲ್ಲಿಸಿದ್ದಾರೆ. ರೈಲು ಸಿಬ್ಬಂದಿ ಅರ್ಧಗಂಟೆಯ ಕಾರ್ಯಾಚರಣೆ ಬಳಿಕ ಮರ ತೆರವು ಕಾರ್ಯ ಪೂರ್ಣಗೊಳಿಸಿದ್ದಾರೆ. ಸಮಯೋಚಿತ ಕಾರ್ಯದ ಮೂಲಕ ಆಗುವ ದೊಡ್ಡ ಅನಾಹುತ ತಪ್ಪಿಸಿದ ಚಂದ್ರಾವತಿ ನಿವಾಸಕ್ಕೆ ಭೇಟಿ ನೀಡಿದ ಮಂಗಳೂರು ರೈಲ್ವೇ ಪೊಲೀಸ್ ಇನ್ಸ್ಪೆಕ್ಟರ್ ಮೋಹನ್ ಕೊಟ್ಟಾರಿ ತಂಡ ಚಂದ್ರಾವತಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಚಂದ್ರಾವತಿ ನನ್ನ ಪತಿ ಇದೇ ಟ್ರ್ಯಾಕ್ನಲ್ಲಿ ಆಯತಪ್ಪಿ ಬಿದ್ದು ಏಳು ತಿಂಗಳ ಹಿಂದೆ ಮೃತಪಟ್ಟಿದ್ದರು ಎಂಬ ನೋವಿನ ಕತೆಯನ್ನು ಹೇಳಿಕೊಂಡಿದ್ದಾರೆ. ಪತಿಯು ಸಾವಿಗೀಡಾದ ಜಾಗದಲ್ಲಿಯೇ ಇಂದು ಸಾವಿರಾರು ಜನರ ಪ್ರಾಣ ಉಳಿಸುವ ಮೂಲಕ ಚಂದ್ರಾವತಿ ಮಾದರಿ ಎನಿಸಿದ್ದಾರೆ.