ದೇಶಾದ್ಯಂತ ಹೆಚ್ಚಿದ್ದ ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ತಾತ್ಕಾಲಿಕವಾಗಿ ಚಾಲ್ತಿಗೆ ಬಂದಿದ್ದ, ದೂರ ಶಿಕ್ಷಣ ವ್ಯವಸ್ಥೆಯು ಮಕ್ಕಳ ಶೈಕ್ಷಣಿಕ ಪ್ರಗತಿಯ ಮೇಲೆ ವ್ಯತಿರಿಕ್ತ ಪರಿಣಾಮಬೀರಿದ್ದು, ಸುಮಾರು ಶೇ. 80ರಷ್ಟು ಮಕ್ಕಳು ದೂರು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಸಮೀಕ್ಷೆ ಬಹಿರಂಗ ಪಡಿಸಿದೆ.
ಮಕ್ಕಳು ಸ್ಮಾರ್ಟ್ ಫೋನ್ ಅಥವಾ ಸಮರ್ಪಕ ಡಿಜಿಟಲ್ ಸೇವೆ ದೊರಕದ ಹಿನ್ನಲೆಯಲ್ಲಿ, ಶೇ. 80 ರಷ್ಟು ಮಕ್ಕಳು ತರಗತಿಗಳನ್ನು ಕೇಳಲು ಡಿಜಿಟಲ್ ಮಾಧ್ಯಮಗಳಿಂದ ವಂಚಿತರಾಗಿದ್ದಾರೆ ಎಂದು ಥಿಂಕ್ ಟ್ಯಾಂಕ್ ಸಮೀಕ್ಷೆ ವರದಿ ಮಾಡಿದೆ.
ಬಡ ಕುಟುಂಬದಲ್ಲಿ ಹುಟ್ಟಿದ ಅನೇಕ ವಿದ್ಯಾರ್ಥಿಗಳಲ್ಲಿ ಸ್ಮಾರ್ಟ್ ಫೋನ್ ಗಳೇ ಇಲ್ಲ. ಇದರಿಂದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ವಂಚಿತರಾಗಿದ್ದಾರೆ. ಅಲ್ಲದೇ ಗ್ರಾಮೀಣ ಪ್ರದೇಶದ ಹೆಚ್ಚಿನ ಮಕ್ಕಳು ಸ್ಮಾರ್ಟ್ ಫೋನ್ ಗಳನ್ನೇ ಹೊಂದಿಲ್ಲ. ಅಕಸ್ಮಾತ್ ಸ್ಮಾರ್ಟ್ ಫೋನ್ ಲಭ್ಯವಿದ್ದರೂ, ಹಳ್ಳಿಗಳಲ್ಲಿ ಸಿಗ್ನಲ್ ಸಿಗುವುದು ಕಷ್ಟ. ಆನ್ ಲೈನ್ ಕಲಿಕೆಗಾಗಿ ಮಕ್ಕಳು ಸಿಗ್ನಲ್ ಸಿಗುವ ಪ್ರದೇಶದಲ್ಲಿ ಕುಳಿತು ಕಲಿಯಬೇಕಾಗಿತ್ತು.

ಶೇ.35ರಷ್ಟು ನಗರ ಪ್ರದೇಶದ ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಯಾವುದೇ ಸಮಸ್ಯೆಯಿಲ್ಲದೇ ಸಂಪೂರ್ಣಗೊಳಿಸಿದ್ದಾರೆ. ಹೆಚ್ಚಿನ ಸಂದರ್ಭದಲ್ಲಿ ಮಕ್ಕಳ ಮನೆಗಳಲ್ಲಿ ಇಂಟರ್ನೆಟ್ ಸೇವೆ ದೊರಕದೇ ಇರುವುದೂ ಕೂಡಾ ದೊಡ್ಡ ಪ್ರಮಾಣದ ಸಮಸ್ಯೆಯಾಗಿ ಪರಿಣಮಿಸಿದೆ. ಇದರ ಜೊತೆಯಲ್ಲಿ ವಾಟ್ಸಾಪ್, ಟೆಲಿಗ್ರಾಂನಂತಹ ಮೈಕ್ರೋ ಮೆಸೇಜ್ ಪ್ಲಾಟ್ಫಾರ್ಮ್ಗಗಳಲ್ಲಿ ಅಧ್ಯಯನ ಸಾಧನಗಳನ್ನು ಶೇರ್ ಮಾಡಲಾಗುತ್ತಿತ್ತು.
ಅದೆಷ್ಟೋ ಗ್ರಾಮೀಣ ಭಾಗದ ಮಕ್ಕಳು ತಮ್ಮ ಊರಿನಲ್ಲಿ ಸರಿಯಾದ ನೆಟ್ ವರ್ಕ್ ಇಲ್ಲದೇ ಇರುವುದರಿಂದ ಓದಲು ಪರದಾಟ ನಡೆಸುತ್ತಿದ್ದರು. ಗುಡ್ಡ ಗಾಡುಗಳಿಗೆ ತೆರಳಿ ಮರದ ಮೇಲೆ ಹತ್ತಿಕೊಂಡು ನೆಟ್ ವರ್ಕ್ ಗಾಗಿ ಓಡಾಡುತ್ತಿದ್ದರು. ಇಂತಹ ಸಮಸ್ಯೆಯಿಂದ ಕಾಡು ಪ್ರದೇಶಗಳಲ್ಲಿ ವಾಸಿಸುವ ಜನಾಂಗವು ವಿಪರೀತ ಸಮಸ್ಯೆಗಳನ್ನು ಅನುಭವಿಸುತ್ತಿದ್ದರು. ಆನ್ ಲೈನ್ ಕ್ಲಾಸ್ ಕೇಳಲು ನೆಟ್ ವರ್ಕ್ ಮುಖ್ಯವಾಗಿರುವುದರಿಂದ ಹೆಚ್ಚಿನ ಮಕ್ಕಳು ಕ್ಲಾಸ್ ಗಳನ್ನೇ ಕೇಳಲಿಲ್ಲ.
ಶಿಕ್ಷಕರಿಗೂ ಡಿಜಿಟಲ್ ಸೇವೆ ಒಗ್ಗಲ್ಲ!
ಕೋವಿಡ್ ಎರಡನೇ ಅಲೆಯ ಬಳಿಕ ಡಿಜಿಟಲ್ ಮಾಧ್ಯಮಗಳಲ್ಲಿ ಶಿಕ್ಷಣವನ್ನು ನೀಡುವುದಕ್ಕೆ ಹೆಚ್ಚಿನ ಮನ್ನಣೆಯುಂಟಾಯಿತು. ವರ್ಚುವಲ್ ಕ್ಲಾಸ್ ಗಳಲ್ಲಿ ತರಗತಿಗಳನ್ನು ನಡೆಸಲು ಶಿಕ್ಷಕರಿಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಟೆಕ್ನಾಲಜಿಗಳ ಬಗ್ಗೆ ಅರಿವಿರಲಿಲ್ಲ. ಇದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಅಂತರ ಜಾಸ್ತಿಯಾಗಿ, ತರಗತಿಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ಒಂದೆಡೆ ಶಿಕ್ಷಕರಿಗೆ ಡಿಜಿಟಲ್ ಸೇವೆಗಳ ಬಳಕೆಯ ಬಗ್ಗೆ ಸಮರ್ಪಕವಾದ ಮಾಹಿತಿಯಿಲ್ಲ. ಇನ್ನೊಂದೆಡೆ, ಇಂಟರ್ ನೆಟ್ ಇದ್ದರೂ, ಬಳಕೆ ಮಾಡಲು ಗೊತ್ತಿಲ್ಲದೇ ಇರುವುದು ಕಾರಣವಾಗಿದೆ.

ಹೆಚ್ಚುತ್ತಿರುವ ಬಾಲಕಾರ್ಮಿಕರು!
ಕೊರೋನಾ ನಂತರ ಮಕ್ಕಳು ಶಾಲೆ ಆರಂಭವಾದರೂ ಶಾಲೆಗಳತ್ತ ಕಾಲಿಡದೇ ಇರುವುದು ಗಂಭೀರವಾದ ವಿಷಯವಾಗಿದೆ. ಮೂಲಭೂತ ಸೌಕರ್ಯಗಳನ್ನೇ ಹೊಂದಿರದೆ ತಂದೆ ತಾಯಿ ನೋವಲ್ಲಿದ್ದರೆ, ಇತ್ತ ಮಕ್ಕಳು ಶಿಕ್ಷಣದ ಕೊರತೆಯಿಂದ ಮನೆಯಲ್ಲಿಯೇ ತಂದೆ ತಾಯಿ ಜೊತೆ ಕೃಷಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದರಿಂದ ಶಾಲೆ ಪ್ರಾರಂಭವಾದರೂ ಮಕ್ಕಳು ಶಾಲೆಗೆ ಹೋಗಲು ಒಲವು ತೋರಿಸದೇ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ರಾಜಸ್ಥಾನದಲ್ಲಿ ಬ್ಯಾಂಗಲ್ ವ್ಯಾಪಾರ ಹೆಚ್ಚಾಗಿರುವುದರಿಂದ ಇಲ್ಲಿ18 ಗಂಟೆ ಕೆಲಸ ಮಾಡಿದರೆ ಕೇವಲ 50 ರೂಪಾಯಿ ಸಂಬಳ ನೀಡಲಾಗುತ್ತಿತ್ತು. ಸಣ್ಣ ವಯಸ್ಸಿನಲ್ಲಿಯೇ ದುಡಿಯಲು ಹೋಗುತ್ತಿರುವ ಮಕ್ಕಳನ್ನು ಶಿಕ್ಷಣದತ್ತ ಸೆಳೆಯಬೇಕಾಗಿದೆ.