ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನೆಯ ಮೇಲೆ ನಡೆದ ದಾಳಿ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಂಟು ಜನರನ್ನು ಗುರುವಾರ ಬಂಧಿಸಿದ್ದಾರೆ. ಇನ್ನೂ ಕೆಲವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಸೌರಭ್ ಭಾರದ್ವಾಜ್ ಅವರು ಮಾರ್ಚ್ 30 ರಂದು ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದ ಮೇಲೆ ದಾಳಿ ಮತ್ತು ಧ್ವಂಸ ಮಾಡಿದ ಆರೋಪದ ವಿರುದ್ಧ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ದಾಳಿ ಮತ್ತು ಅದರ ದುಷ್ಕರ್ಮಿಗಳಿಗೆ ಸಂಬಂಧಿಸಿದಂತೆ ಸ್ವತಂತ್ರ, ನ್ಯಾಯಸಮ್ಮತ ಮತ್ತು ಕಾಲಮಿತಿಯ ಅಪರಾಧ ತನಿಖೆಯನ್ನು ಕೈಗೊಳ್ಳಲು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸುವಂತೆ ಸೌರಭ್ ಭಾರದ್ವಾಜ್ ಮನವಿ ಮಾಡಿದ್ದಾರೆ.
ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಸೌರಭ್ ಭಾರದ್ವಾಜ್ ತಮ್ಮ ಮನವಿಯಲ್ಲಿ ಆರೋಪಿಸಿದ್ದಾರೆ. ಇದು “ದೆಹಲಿ ಪೋಲೀಸರ ನಿಗೂಢ ಸಹಭಾಗಿತ್ವದಿಂದ ನಡೆಯಲಾಗಿದೆ” ಎಂದು ಮನವಿಯಲ್ಲಿ ಹೇಳಲಾಗಿದೆ. ಸದ್ಯ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ.
ಸಿಎಂ ಮನೆ ಸುತ್ತ ಮುತ್ತಲಿನ ಸಿಸಿಟಿವಿ ಕ್ಯಾಮೆರಾ ಒಡೆದಿದ್ದು, ಸಿಎಂ ಮನೆ ಸುತ್ತಲಿನ ಭದ್ರತಾ ತಡೆಗೋಡೆ ಧ್ವಂಸ ಮಾಡಿರುವ ಬಗ್ಗೆ ವರದಿಯಾಗಿದೆ.
ಸಿಎಂ ನಿವಾಸದ ಮೇಲಿನ ದಾಳಿಯ ನಂತರ, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು “ಅರವಿಂದ್ ಕೇಜ್ರಿವಾಲ್ ಅವರನ್ನು ಕೊಲ್ಲಲು ಬಿಜೆಪಿ ಪಿತೂರಿ ನಡೆಸುತ್ತಿದೆ” ಎಂದು ಆರೋಪಿಸಿದರು.
ಮತ್ತೊಬ್ಬ ಎಎಪಿ ನಾಯಕ ಸೌರಭ್ ಭಾರದ್ವಾಜ್ ಕೂಡ ಬಿಜೆಪಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಹತ್ಯೆ ಮಾಡಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ಕೇಜ್ರಿವಾಲ್ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಆಗ್ರಹ!
ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಸುಳ್ಳು ಎಂದು ಆರೋಪಿಸಿ ಕೇಜ್ರಿವಾಲ್ ಅವರ ಹೇಳಿಕೆಯ ವಿರುದ್ಧ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ನೇತೃತ್ವದ ಬಿಜೆಪಿ ಕಾರ್ಯಕರ್ತರ ಗುಂಪು ಕೇಜ್ರಿವಾಲ್ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು. ಬುಧವಾರ, ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರು ಕೇಜ್ರಿವಾಲ್ ಅವರ ನಿವಾಸದಲ್ಲಿ ಪ್ರತಿಭಟಿಸಿದ್ದು ಸಿಸಿಟಿವಿ, ಗೇಟ್ ಅನ್ನು ಸಂಪೂರ್ಣ ಧ್ವಂಸಗೊಳಿಸಿದ್ದಾರೆ.
“ಕಾಶ್ಮೀರ ಹಿಂದೂಗಳ ಹತ್ಯಾಕಾಂಡದ ಬಗ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಪಹಾಸ್ಯ ಮಾಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಯುವ ಮೋರ್ಚಾ, ಕೇಜ್ರಿವಾಲ್ ಬೇಷರತ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ. ಅವರು ಕ್ಷಮೆ ಕೇಳುವವರೆಗೂ ಯುವಮೋರ್ಚಾದ ಪ್ರತಿಭಟನೆ ಮುಂದುವರಿಯಲಿದೆ. ರಾಮಮಂದಿರವನ್ನು ಗೇಲಿ ಮಾಡುವುದು, ಹಿಂದೂ ದೇವತೆಗಳ ಬಗ್ಗೆ ತಮಾಷೆ ಮಾಡುವುದು, ಬಟ್ಲಾ ಹೌಸ್ ಅನ್ನು ಪ್ರಶ್ನಿಸುವುದು, ಸರ್ಜಿಕಲ್ ಸ್ಟ್ರೈಕ್ಗಳನ್ನು ಪ್ರಶ್ನಿಸುವುದು ಆಮ್ ಆದ್ಮಿ ಪಕ್ಷದ ನೀತಿಯಾಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು.
ಕಳೆದ ವಾರ ದಿಲ್ಲಿ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ತೆರಿಗೆ ರಹಿತ ಸೌಲಭ್ಯ ನೀಡಲು ನಿರಾಕರಿಸಿದ್ದರು. ಅಷ್ಟೇ ಅಲ್ಲ, ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಅಷ್ಟೊಂದು ಕಾಳಜಿ ಇದ್ದರೆ ಯೂಟ್ಯೂಬ್ನಲ್ಲಿ ಚಿತ್ರದ ಪ್ರದರ್ಶನಕ್ಕೆ ಏರ್ಪಾಡು ಮಾಡಲಿ ಎಂದು ಸವಾಲೆಸೆದಿದ್ದರು.