ಆರು ವರ್ಷಗಳು ಪೂರೈಸಿ ಏಳನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿರುವ ಮಹದಾಯಿ ಮತ್ತು ಕಳಸಾ- ಬಂಡೂರಿ ಹೋರಾಟದ ಕಿಚ್ಚು ಮತ್ತೊಮ್ಮೆ ಭುಗಿಲೇಳುವ ಲಕ್ಷಣಗಳು ಕಾಣಿಸುತ್ತಿವೆ. ಮಹಾದಾಯಿ ಯೋಜನೆ ವಿಳಂಬ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ಸುಪ್ರೀಂಕೋರ್ಟ್ ಮೆಟ್ಟಿಲೇರಲು ರೈತರು ನಿರ್ಧರಿಸಿದ್ದಾರೆ. ಕೇವಲ ಭರವಸೆಗಳಿಂದ ಬೇಸತ್ತಿರುವ ಅನ್ನದಾತರು ಯೋಜನೆ ಜಾರಿಗಾಗಿ ಮತ್ತೊಂದು ಸುತ್ತಿನ ಬೃಹತ್ ಹೋರಾಟಕ್ಕೆ ಸನ್ನದ್ಧವಾಗುತ್ತಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತಾಡಿರುವ ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ ಅವರು, ಮಹದಾಯಿ ಯೋಜನೆ ಜಾರಿಗೆ ಮತ್ತೊಂದು ಸುತ್ತಿನ ಬೃಹತ್ ಹೋರಾಟ ರೂಪಿಸಲಿದ್ದೇವೆ. ಇದರ ಭಾಗವಾಗಿ ಮಹದಾಯಿ ಯೋಜನೆ ವಿಳಂಬ ಪ್ರಶ್ನಿಸಿ ಸದ್ಯದಲ್ಲೇ ಸುಪ್ರೀಂಕೋರ್ಟ್ ಮೊರೆ ಹೋಗಲಿದ್ದೇವೆ. ಜಾರಿಗೆ ಒತ್ತಾಯಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕುತ್ತೇವೆ ಎಂದರು.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷಗಳು ನಮ್ಮ ಹೋರಾಟದ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿಲ್ಲ. ನಮಗೆ ಈ ರಾಜಕೀಯ ಪಕ್ಷಗಳ ಬೆಂಬಲ ಬೇಕಿಲ್ಲ. 7 ವರ್ಷ ಪೂರೈಸಿದ ಕಾರಣ ಇಂದು ಮಹದಾಯಿ ಹೋರಾಟಗಾರರು ಸಭೆ ನಡೆಸಿದೆವು. ಸಭೆಯ ಮೊದಲ ನಿರ್ಣಯವೇ ಸುಪ್ರೀಂ ಕೋರ್ಟ್ನಲ್ಲಿ ಕಾನೂನಾತ್ಮಕ ಹೋರಾಟ ನಡೆಸುವುದು ಎಂದು ತಿಳಿಸಿದರು.
ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆಗೆ ಆರಂಭದಿಂದಲೂ ಒಂದರ ಮೇಲೊಂದರಂತೆ ವಿಘ್ನಗಳು ಎದುರಾಗುತ್ತಿವೆ. ಮಹದಾಯಿ ನ್ಯಾಯಾಧಿಕರಣ ರಾಜ್ಯಕ್ಕೆ ಸಿಗಬೇಕಾದ ನೀರನ್ನು ಹಂಚಿಕೆ ಮಾಡಿದರೂ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಲಿಲ್ಲ. ಕೇಂದ್ರ ಪರಿಸರ ಇಲಾಖೆಯೂ ಕಾಮಗಾರಿಗೆ ಹಸಿರು ನಿಶಾನೆ ತೋರಿಸಿದರೂ ಗೋವಾ ಸರ್ಕಾರ ತಗಾದೆ ತೆಗೆದಿದೆ ಎಂದು ಯೋಜನೆಯೇ ಮುಂದುವರಿಸುತ್ತಿಲ್ಲ. ಕೇಂದ್ರದ ಈ ದ್ವಂದ್ವ ನೀತಿ ಮಹದಾಯಿ ಹೋರಾಟಗಾರರನ್ನು ಕೆರಳಿಸಿದೆ.
ಈ ಹಿಂದೆಯೇ ಕಳಸಾ-ಬಂಡೂರಿ ಯೋಜನೆ ಕಾಮಗಾರಿ ಪ್ರಾರಂಭಿಸಬಹುದು ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಪತ್ರ ಬರೆದಿತ್ತು. ಪರಿಸರದ ಮೇಲಾಗುವ ಪರಿಣಾಮದ ಮೌಲ್ಯಮಾಪನ ಪೂರ್ಣಗೊಳಿಸಿದ ಬಳಿಕವೇ ಈ ನಿರ್ಧಾರಕ್ಕೆ ಬಂದಿತ್ತು. ಗ್ರೀನ್ ಸಿಗ್ನಲ್ ಕೊಟ್ಟ ಕೆಲವೇ ದಿನಗಳಲ್ಲಿ ಮತ್ತೆ ತನ್ನ ಆದೇಶಕ್ಕೆ ಕೇಂದ್ರ ತಡೆ ನೀಡಿದ್ದನ್ನು ಸ್ಪಷ್ಟಪಡಿಸಿತ್ತು.

ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಮೋಸ ಮಾಡುತ್ತಿದೆ. ಈ ಯೋಜನೆ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಯಾಕೆ ಹೊರಡಿಸುತ್ತಿಲ್ಲ? ಚುನಾವಣಾ ಸಂದರ್ಭದಲ್ಲಿ ಮೂರು ರಾಜ್ಯಗಳ ಸಿಎಂ ಸಭೆ ಕರೆದು ಸಮಸ್ಯೆ ಪರಿಹರಿಸುವುದಾಗಿ ಹೇಳಿದ್ದ ಮೋದಿ ಮೌನ ಯಾಕೇ ಎಂದು ಮಹಾದಾಯಿ ಹೋರಾಟಗಾರರು ಪ್ರಶ್ನಿಸುತ್ತಿದ್ದಾರೆ.

ಹೀಗಿರುವಾಗಲೇ ಮಹಾದಾಯಿ ಹೋರಾಟಗಾರರು ಇಂದು ಸಭೆ ನಡೆಸಿ ಪ್ರಮುಖ ಐದು ನಿರ್ಧಾರಗಳನ್ನು ತೆಗದುಕೊಂಡಿದ್ದಾರೆ. ರೈತರ ಬೆಳೆಗೆ ಬೆಂಬಲಗೆ ಆಗ್ರಹಿಸುವ, ಮಹದಾಹಿ ಹೋರಾಟದಲ್ಲಿ ಮೃತಪಟ್ಟ 11 ಜನರಿಗೆ ಪರಿಹಾರಕ್ಕೆ ಒತ್ತಾಯಿಸುವ, ಮಲಪ್ರಭಾ ನದಿಯ ಅಚ್ಚುಕಟ್ಟು ಪ್ರದೇಶಗಳ ಕಾಲುವೆಗಳ ಕಳಪೆ ಕಾಮಗಾರಿ ಕುರಿತು ಹೋರಾಟ ರೂಪಿಸುವ, ಕಳಸಾ ಹೋರಾಟಗಾರರಿಗೆ ರಾಜ್ಯಪಾಲರನ್ನ ಭೇಟಿ ಮಾಡಲು ಅವಕಾಶ ಮಾಡಿಕೊಡಿ ಎಂದು ಒತ್ತಡ ಹೇರುವ ಇತ್ಯಾದಿ ನಿರ್ಣಯಗಳು ಇವಾಗಿವೆ.