ಕೇಂದ್ರದ ಜಿಎಸ್ಟಿ ಪರಿಹಾರ ನಿಗದಿಯಲ್ಲಿ ಮತ್ತೆ ಕರ್ನಾಟಕಕ್ಕೆ ನಷ್ಟವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಬಜೆಟ್ ಅಂದಾಜು ಮತ್ತು ಪರಿಷ್ಕೃತ ಅಂದಾಜುಗಳ ಪ್ರಕಾರ ಕರ್ನಾಟಕಕ್ಕೆ ಒಟ್ಟು ಜಿಎಸ್ಟಿ ಪರಿಹಾರದಲ್ಲಿ ರೂ 16,814 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
2020-21 ರಲ್ಲಿ ನಿಗದಿಯಾಗಿದ್ದಕ್ಕಿಂತ ಕಡಿಮೆ ಮೊತ್ತದ ಪರಿಹಾರ ದೊರಕಿದೆ. ಅಂದರೆ ಶೇಕಡಾ 14 ರಷ್ಟು ಕಡಿತ ಮಾಡಲಾಗಿದೆ.ಈ ಬಾರಿಯ ಜಿಎಸ್ಟಿ ಪರಿಹಾರ ಮೊತ್ತವನ್ನು ರಾಜ್ಯಕ್ಕೆ ರೂ 24,573 ಕೋಟಿ ನಿಗದಿ ಮಾಡಲಾಗಿದೆ. 2020-21 ಕ್ಕೆ ಹೋಲಿಸಿದರೆ ರೂ 3,427 ಕೋಟಿಯಷ್ಟು ಕಡಿಮೆ ಮೊತ್ತವನ್ನು ನಿಗದಿ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಜಿಎಸ್ಟಿ ಪರಿಹಾರ ನಿಗದಿಯ ವಿಚಾರದಲ್ಲಿ ಕರ್ನಾಟಕಕ್ಕೆ ನಷ್ಟವಾಗಿದ್ದು, 2019-20 ರ ಬಜೆಟ್ನಲ್ಲಿ 38,000 ಕೋಟಿ ನಿಗದಿ ಪಡಿಸಲಾಗಿತ್ತು. 2020-21 ರ ಬಜೆಟ್ನಲ್ಲಿ ರೂ 28,000 ಕೋಟಿ ಕುಸಿದಿತ್ತು. ಕಡಿತಗೊಂಡ ಮೊತ್ತಕ್ಕೆ ಪರಿಹಾರವಾಗಿ ರೂ 5,495 ಕೋಟಿ ವಿಶೇಷ ಅನುದಾನ ಮತ್ತು ಕೇಂದ್ರದ ನೆರವಿನ ಯೋಜನೆಗಳ ಅನುದಾನವನ್ನು ಈವರೆಗೂ ಬಿಡುಗಡೆ ಮಾಡಿಲ್ಲ.
ಈ ಬಾರಿಯಾದರು ಜಿಎಸ್ಟಿ ಪರಿಹಾರ ರೂಪದಲ್ಲಿ ರೂ 28,000 ಕೋಟಿ ದೊರೆಯಬೇಕಿತ್ತು. ಈ ಮೊತ್ತದಲ್ಲಿ 7,900 ಕೋಟಿ ನಷ್ಟವಾಗಲಿದೆ. ಪರಿಷ್ಕೃತ ಅಂದಾಜುಗಳ ಪ್ರಕಾರ ರಾಜ್ಯಕ್ಕೆ ರೂ 20,073 ಕೋಟಿ ಮಾತ್ರ ಜಿಎಸ್ಟಿ ಪರಿಹಾರ ರೂಪದಲ್ಲಿ ದೊರಕಲಿದೆ ಎಂದು ಹಣಕಾಸು ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.