ರಾಜ್ಯದಲ್ಲಿ ಭಾರೀ ಮಳೆಯಿಂದ ಆಗಿರುವ ಹಾನಿ ಹಿನ್ನೆಲೆಯಲ್ಲಿ ಮೂಲಸೌಕರ್ಯ ಒದಗಿಸಲು 600 ಕೋಟಿ ರೂ. ತುರ್ತು ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ರಾಜ್ಯದ ಮಳೆಪೀಡಿತ ಜಿಲ್ಲಾಧಿಕಾರಿಗಳ ಜೊತೆ ಸೋಮವಾರ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ನಿಂತ ಕೂಡಲೇ ಮೂಲಸೌಕರ್ಯ ಒದಗಿಸುವ ಕೆಲಸ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಮೂಲಸೌಕರ್ಯ ಒದಗಿಸಲು ತುರ್ತು 600 ಕೋಟಿ ರೂ. ಹಾಗೂ ಬೆಂಗಳೂರಿಗೆ 300 ಕೋಟಿ ರೂ. ನೀಡಲಾಗುವುದು. ಜನರು ಇಂತಹ ಸಂದರ್ಭದಲ್ಲಿ ಸರಕಾರದ ಜೊತೆ ಸಹಕರಿಸಬೇಕು ಎಂದು ಬೊಮ್ಮಾಯಿ ಮನವಿ ಮಾಡಿದರು.

ರಾಜ್ಯದಲ್ಲಿ ಮಳೆಯಿಂದ 32 ಸಾವಿರ ಎಕರೆ ಬೆಳೆ ಹಾನಿ ಉಂಟಾಗಿದ್ದು, 1374 ತೋಟಗಾರಿಕೆ ಪ್ರದೇಶ ಹಾನಿ ಆಗಿದೆ. 5092 ಜನರು ಆಶ್ರಯ ಶಿಬಿರಗಳಲ್ಲಿದ್ದಾರೆ. 255 ಕಿ.ಮೀ. ರಸ್ತೆ ಹಾನಿ ಆಗಿದ್ದು, 430 ಮನೆ ಸಂಪೂರ್ಣ ನಾಶಗೊಂಡಿದೆ ಎಂದು ಸಿಎಂ ವಿವರ ನೀಡಿದರು.
ಮಳೆಯಿಂದ ಹಾನಿ ಆಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಳೆಯಿಂದ ಆಗಿರುವ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ ಎಂದು ಅವರು ವಿಶ್ವಾ್ಸ ವ್ಯಕ್ತಪಡಿಸಿದರು.











