ರಾಮನಗರ: ಒಂದೇ ವೃಷಣವಿದ್ದ ಬಾಲಕನಿಗೆ ಶಸ್ತ್ರಚಿಕಿತ್ಸೆ (Operation) ಆಗಬೇಕು ಎಂದು ವೈದ್ಯರು ತಪ್ಪಾಗಿ ಸೂಚಿಸಿ, ಶಸ್ತ್ರಚಿಕಿತ್ಸೆಯ ಕೆಲವೇ ಹೊತ್ತಿನಲ್ಲಿ ಬಾಲಕ ಮೃತಪಟ್ಟ ಘಟನೆ (Doctor Negligence) ರಾಮನಗರದಲ್ಲಿ (Ramanagara news) ನಡೆದಿದೆ.ರಾಮನಗರದ ಶ್ರೀದೇವಿ ಮಿಷನ್ ಆಸ್ಪತ್ರೆಯಲ್ಲಿ ಈ ದುರ್ಘಟನೆ ನಡೆದಿದೆ.
6 ವರ್ಷದ ಬಾಲಕ ಆರ್ಯ ಎಂಬಾತನಿಗೆ ಒಂದೇ ವೃಷಣವಿತ್ತು. ಪೋಷಕರು ಈತನನ್ನು ವೈದ್ಯರ ಬಳಿಗೆ ಕರೆತಂದು, ಒಂದೇ ವೃಷಣವಿದ್ದ ಕಾರಣ ಸಮಸ್ಯೆ ಏನಾದ್ರೂ ಆಗಬಹುದಾ ಎಂಬುದಾಗಿ ವೈದ್ಯರ ಸಲಹೆ ಕೇಳಿದ್ದರು. ಈ ಹಿಂದೆ ಹಲವು ಆಸ್ಪತ್ರೆಗಳ ವೈದ್ಯರ ಬಳಿ ಪೋಷಕರು ಆರ್ಯನನ್ನು ತೋರಿಸಿದ್ದು, ಅವರೆಲ್ಲರೂ ಒಂದೇ ವೃಷಣವಿದ್ದರೂ ಬದುಕಬಹುದು. ಏನೂ ಸಮಸ್ಯೆ ಆಗುವುದಿಲ್ಲ ಎಂದು ಸಲಹೆ ನೀಡಿದ್ದರು.
ಆದರೆ ರಾಮನಗರದ ಶ್ರೀದೇವಿ ಮಿಷನ್ ಆಸ್ಪತ್ರೆಯ ವೈದ್ಯರು ಮಾತ್ರ ಬಾಲಕನಿಗೆ ಆಪರೇಷನ್ ಮಾಡಲೇಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನು ನಂಬಿದ ಪೋಷಕರು ನಿನ್ನೆ ಆಪರೇಷನ್ಗಾಗಿ 6 ವರ್ಷದ ಆರ್ಯನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಬೆಳಿಗ್ಗೆ 11 ಗಂಟೆಗೆ ವೈದ್ಯರು ಆಪರೇಷನ್ ಮಾಡಲು ಬಾಲಕನನ್ನು ಕರೆದೊಯ್ದಿದ್ದು, ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾದ ಬಾಲಕ ಆರ್ಯ ಕೆಲಹೊತ್ತಿನಲ್ಲೇ ಸಾವನ್ನಪ್ಪಿದ್ದಾನೆ.
ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇದು ವೈದ್ಯರ ನಿರ್ಲಕ್ಷ್ಯದಿಂದ ಆದ ಸಾವು ಎಂಬುದಾಗಿ ಕುಟುಂಬಸ್ಥರು, ಪೋಷಕರು ಆಸ್ಪತ್ರೆಯ ಮುಂದೆ ಧರಣಿ, ಪ್ರತಿಭಟನೆ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆಗೂ ಮುನ್ನ ಚೆನ್ನಾಗಿಯೇ ಇದ್ದ ಬಾಲಕ ಆರ್ಯ, ಶಸ್ತ್ರಚಿಕಿತ್ಸೆ ನಂತರ ಸಾವನ್ನಪ್ಪಿದ್ದು ಪೋಷಕರಲ್ಲಿ ಆಘಾತ ಮೂಡಿಸಿದೆ. ಸ್ಥಳಕ್ಕೆ ರಾಮನಗರ ಎಸ್ಪಿ, ಪೊಲೀಸರು ಭೇಟಿ ನೀಡಿ, ಮಾಹಿತಿ ಪಡೆದು, ತನಿಖೆ ಕೈಗೊಂಡಿದ್ದಾರೆ.