ಒಂದು ಪ್ರೇಮಕಥೆ ಎಂದರೆ ಅಲ್ಲಿ ಖುಷಿ, ತ್ಯಾಗದ ಜೊತೆಗೆ ಕಾಡುವ ಕಥೆ ಇರಬೇಕು. ಇದನ್ನು ಅಚ್ಚುಕಟ್ಟಾಗಿ ತೆರೆಮೇಲೆ ತಂದವರು ನಿರ್ದೇಶಕ ನಾಗಶೇಖರ್(Nagashekar). ಅದಕ್ಕೆ ಮೈನಾ(Myna) , ಸಂಜು ವೆಡ್ಸ್ ಗೀತಾಗಿಂತ (sanju weds geetha) ಉದಾಹರಣೆ ಬೇಕಿಲ್ಲ. ಈಗ ಹೊಸ ಸಂಜು ಹಾಗೂ ಗೀತಾರ ನವೀನ ಪ್ರೇಮಕಥೆಯನ್ನು ನಾಗಶೇಖರ್ ಹೇಳಹೊರಟಿದ್ದಾರೆ.

ಶ್ರೀನಗರ ಕಿಟ್ಟಿ (sri nagar kitti) ಜೊತೆ ರಮ್ಯಾ (Ramya) ಬದಲು ರಚಿತಾರಾಮ್ (Rachitha ram) ಬಂದಿದ್ದಾರೆ. ರೇಶ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ ನಮ್ಮ ಮಣ್ಣಿನ ಪ್ರೇಮಿಗಳ ಅದ್ಭುತ ಪ್ರೇಮಕಾವ್ಯವಿದು.
ಸಧ್ಯ ಚಿತ್ರದ ಬಹುತೇಕ ಚಿತ್ರೀಕರಣ, ಎಡಿಟಿಂಗ್ ಮುಗಿದಿದ್ದು ಲೂಪ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಕಾರ್ಯ ನಡೆದಿದೆ. ಈಗಾಗಲೇ ಸ್ವಿಟ್ಜರ್ ಲ್ಯಾಂಡ್ ನಲ್ಲಿ 15 ದಿನ ಹನ್ನೊಂದು ಲೊಕೇಶನ್ ಗಳಲ್ಲಿ ಮೂರನೇ ಹಂತದ ಚಿತ್ರೀಕರಣ ಮುಗಿಸಿದ್ದು, ಈಗ ನಾಲ್ಕನೇ ಹಂತದ ಚಿತ್ರೀಕರಣ ಶುರುವಾಗಿದೆ. ಕುಣಿಗಲ್ ನಲ್ಲಿ ಅದ್ದೂರಿ ಹಾಡೊಂದರ ಶೂಟಿಂಗ್ ನಡೆದಿದೆ.

ಈ ಹಾಡು, ಚಿತ್ರದ ಕುರಿತಂತೆ ಮಾತನಾಡಿದ ನಿರ್ಮಾಪಕ ಛಲವಾದಿ ಕುಮಾರ್, ಕುಣಿಗಲ್ ನ ಯುಬಿ ಸ್ಟೆಡ್ ಫಾರಂ(ಕುದುರೆ ಫಾರಂ)ನಲ್ಲಿ ಸುಮಾರು 5 ದಿನಗಳ ಕಾಲ ಪ್ರಮುಖವಾದ ಕಲರ್ ಫುಲ್ ಹಾಡಿನ ಚಿತ್ರೀಕರಣ ನಡೆಸಲಾಯಿತು. ತುಂಬಾ ಅದ್ದೂರಿಯಾಗಿ ಮೂಡಿ ಬಂದಿರುವ ಈ ಹಾಡಿಗೆ ಸುಮಾರು 45 ರಿಂದ 50 ಲಕ್ಷ ರೂ. ವರೆಗೆ ಖರ್ಚು ಮಾಡಲಾಗಿದೆ. ಇದಲ್ಲದೆ ಉಳಿದ ಹಾಡುಗಳನ್ನೂ ಸಹ ಇನ್ನೂ ಅದ್ದೂರಿಯಾಗಿ ಆಗಿ ಚಿತ್ರೀಕರಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಒಟ್ಟಾರೆ ಇಡೀ ಚಿತ್ರ ವೈಭವಯುತವಾಗಿ ಮೂಡಿಬರಬೇಕು. ಅದ್ಭುತ ದೃಶ್ಯಕಾವ್ಯವಾಗಿ ಸಂಜು ವೆಡ್ಸ್ ಗೀತಾ ಮೂಡಿಬರಬೇಕು ಎನ್ನುವುದೇ ನಮ್ಮ ಉದ್ದೇಶ ಎಂದು ಹೇಳಿದರು.