ಈ ವರ್ಷ ಪ್ರಾರಂಭದಲ್ಲಿ ನಡೆಯುವ ಪಂಚರಾಜ್ಯ ಚುನಾವಣೆಗೆ ಚುನಾವಣೆ ಆಯೋಗ ಇಂದು (ಶನಿವಾರ) ದಿನಾಂಕವನ್ನ ಘೋಷಿಸಿದ್ದು ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಸುವುದಾಗಿ ಆಯೋಗದ ಮುಖ್ಯ ಚುನಾವಣಾಧಿಕಾರಿ ಸುಶೀಲ್ ಚಂದ್ರ ಸುದ್ದಿಘೋಷ್ಠಿಯಲ್ಲಿ ತಿಳಿಸಿದ್ದಾರೆ.
ಉತ್ತರಪ್ರದೇಶ(403), ಪಂಜಾಬ್(117), ಮಣಿಪುರ(40), ಉತ್ತರಾಖಂಡ್(40) ಹಾಗೂ ಗೋವಾ(40) ರಾಜ್ಯಗಳಿಗೆ ವಿಧಾನಸಭಾ ಚುನಾವಣೆಗಳು ನಡೆಯಲಿವೆ.
ದೇಶದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನವರಿ 15ರವರೆಗೆ ಯಾವುದೇ ರೋಡ್ಶೋ, ಪಾದಯಾತ್ರೆ, ಬೈಕ್ ರ್ಯಾಲಿಗಳನ್ನು ಮಾಡುವಂತಿಲ್ಲ ಎಂದು ಆಯೋಗ ಆದೇಶಿಸಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಮತ್ತು ಈ ಕ್ಷಣದಿಂದ ಮಾದರಿ ನೀತಿ ಸಂಹಿತೆ ಜಾರಿಗೆ ಬರುತ್ತದೆ ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.
ರಾಜಕೀಯ ಪಕ್ಷಗಳು ಕ್ರಿಮಿನಲ್ ಹಿನ್ನಲೆ ಇರುವ ಅಭ್ಯರ್ಥಿಗಳನ್ನು ಏಕೆ ಆಯ್ಕೆ ಮಾಡಿದ್ದೀರಿ ಎಂಬ ಕಾರಣವನ್ನು ಸ್ಪಷ್ಟವಾಗಿ ತಮ್ಮ ಪಕ್ಷಗಳ ಅಧಿಕೃತ ವೆಬ್ಸೈಟ್ಗಳಲ್ಲಿ ಕಡ್ಡಾಯವಾಗಿ ತಿಳಿಸಬೇಕು ಎಂದು ಆಯೋಗ ತಿಳಿಸಿದೆ.

ಅಗತ್ಯ ತಯಾರಿಯೊಂದಿಗೆ ನಾವು ಐದು ರಾಜ್ಯಗಳಲ್ಲಿ ಚುನಾವಣೆ ನಡೆಸಲು ಸಿದ್ದರಿದ್ದೇವೆ. ಮತದಾನ ನಡೆಯುವ ಎಲ್ಲಾ ಕೇಂದ್ರಗಳಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು ಮತ್ತು ಕೋವಿಡ್ ಕಾರಣದಿಂದಾಗಿ ಈ ಐದು ರಾಜ್ಯಗಳಲ್ಲಿ ಮತಗಟ್ಟೆ ಕೇಂದ್ರಗಳನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಫೆಬ್ರವರಿ 7ರಿಂದ ಮಾರ್ಚ್ 7ರವರೆಗೆ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಸುವುದಾಗಿ ಆಯೋಗ ತಿಳಿಸಿದೆ. ಮಾರ್ಚ್ 10ರಂದು ಫಲಿತಾಂಶ ಪ್ರಕಟಿಸುವುದಾಗಿ ಆಯೋಗ ತಿಳಿಸಿದೆ.