ಮಹಾರಾಷ್ಟ್ರದಲ್ಲಿ ಬೇಜವಾಬ್ದಾರಿಯಿಂದ ಪೊಲಿಯೋ ಲಸಿಕೆ ಬದಲು ಮಕ್ಕಳಿಗೆ ಹ್ಯಾಂಡ್ ಸ್ಯಾನಿಟೈಸರ್ ಹಾಕಿದ್ದ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ದೊರೆತಿದ್ದು, ಪೊಲಿಯೋ ಲಸಿಕೆ ಹಾಕುವ ತಂಡದ ನೇತೃತ್ವ ವಹಿಸಿದ್ದ ವೈದ್ಯನೇ ಮಕ್ಕಳಿಗೆ ಸ್ಯಾನಿಟೈಸರ್ ಹಾಕುವಂತೆ ಹೇಳಿದ್ದಎಂದು ತಂಡದಲ್ಲಿದ್ದ ಆಶಾ ಕಾರ್ಯಕರ್ತೆಯರು ಮಾಹಿತಿ ಬಹಿರಂಗಪಡಿಸಿದ್ದಾರೆ.
ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಕೋಪರಿ ಕಪ್ಸಿ ಗ್ರಾಮದಲ್ಲಿ 12 ಮಕ್ಕಳಿಗೆ ಲಸಿಕೆ ಹಾಕುವಾಗ ಆಶಾ ಕಾರ್ಯಕರ್ತೆಯರು, ಪೋಲಿಯೊ ಲಸಿಕೆ ಬದಲು ನೀಲಿ ಬಣ್ಣದ ಹ್ಯಾಂಡ್ ಸ್ಯಾನಿಟೈಸರ್ ಹಾಕಿದ್ದರು. ಇದರಿಂದ ತೀವ್ರ ಅಸ್ವಸ್ಥಗೊಂಡ ಮಕ್ಕಳನ್ನು ಯವತ್ಮಾಲ್ನ ಸರ್ಕಾರಿ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು. ಈ ವಿಚಾರ ಬಹಿರಂಗಗೊಳ್ಳುತ್ತಿದ್ದಂತೆಯೇ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ, ಅಂದು ತಂಡದ ನೇತೃತ್ವ ವಹಿಸಿದ್ದ ವೈದ್ಯ ಡಾ.ಅಮೋಲ್ ಗವಾಡೆ ಅವರ ಸೂಚನೆ ಮೇರೆಗೆ ಲಸಿಕೆ ಬದಲಿಗೆ ಸ್ಯಾನಿಟೈಸರ್ ನೀಡಲಾಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಕುರಿತಂತೆ ಮಾಹಿತಿ ನೀಡಿದ ತಂಡದಲ್ಲಿದ್ದ ಆಶಾ ಕಾರ್ಯಕರ್ತೆಯೊಬ್ಬರು.. ‘ನಾವು ವೈದ್ಯರಿಗೆ ಲಸಿಕೆಯ ಬಣ್ಣ ಗುಲಾಬಿ ಬಣ್ಣದ್ದು, ನೀಲಿ ಬಣ್ಣದ್ದಲ್ಲ ಎಂದು ಹೇಳಿದೆವು. ಆದರೆ ಲಸಿಕೆ ಬಣ್ಣವನ್ನು ಈಗ ಬದಲಾಯಿಸಲಾಗಿದೆ ಎಂದು ವೈದ್ಯರು ನಮಗೆ ಹೇಳಿದರು… ನಾವು ಅವರೊಂದಿಗೆ ಈ ಬಗ್ಗೆ ಎಷ್ಟೇ ಹೇಳಿದರೂ ಅವರು ಫೋನ್ ನಲ್ಲಿ ಮಾತನಾಡುತ್ತಾ ನಮ್ಮ ಮಾತು ಕೇಳಲು ಸಿದ್ಧರಿರಲಿಲ್ಲ. ಪೊಲಿಯೋ ಲಸಿಕೆ ಬದಲಿಗೆ ನೀಲಿ ಬಣ್ಣದ ಸ್ಯಾನಿಟೈಸರ್ ನೀಡಿಸಿದರು. ಇದೀಗ ನಮ್ಮನ್ನು ಬಲಿಪಶುಗಳನ್ನಾಗಿ ಮಾಡಲಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಪ್ರಕರಣದಲ್ಲಿ ನಮ್ಮ ತಪ್ಪು ಏನು ಎಂದರೆ ನಾವು ವೈದ್ಯರ ಮಾತು ಕೇಳಿ ನೀಲಿ ಬಣ್ಣದ ಸ್ಯಾನಿಟೈಸರ್ ನೀಡಿದ್ದು. ಅವರ ಸೂಚನೆ ಪಾಲಿಸದಿದ್ದರೆ ಅವರು ನಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದರು. ಅಲ್ಲದೆ ನಮಗೆ 15 ದಿನಕ್ಕೆ ಬದಲಾಗಿ ಕೇವಲ 1 ದಿನದ ತರಬೇತಿ ಮಾತ್ರ ನೀಡಿದ್ದರು. ಇದಕ್ಕೆ ಹೆದರಿ ನಾವು ನೀಲಿ ಬಣ್ಣದ ಸ್ಯಾನಿಟೈಸರ್ ಅನ್ನು ಮಕ್ಕಳಿಗೆ ಹಾಕಿದೆವು ಎಂದು ಅವರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ತಂಡದಲ್ಲಿದ್ದ ಸದಸ್ಯರನ್ನು ಅಮಾನತು ಮಾಡಲಾಗಿದ್ದು, ಅಮಾನತುಗೊಂಡ ಸಿಬ್ಬಂದಿ ಮೇಲಿನ ಆರೋಪ ಸಾಬೀತಾದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ತಿಳಿಸಿದ್ದಾರೆ.